ಕಬ್ಬಿಣಾಂಶ ಮಾತ್ರೆಗಳ ಸೇವನೆಯಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ಕಡಿಮೆ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

Anemia in pregnant women reduced by taking iron tablets: DHO Dr. Yalla Rameshbabu

ಕಬ್ಬಿಣಾಂಶ ಮಾತ್ರೆಗಳ ಸೇವನೆಯಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ಕಡಿಮೆ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

ಬಳ್ಳಾರಿ 10: ಗರ್ಭಿಣಿ ಅವಧಿಯಲ್ಲಿ ಪೌಷ್ಟಿಕಾಹಾರದ ಅವಶ್ಯಕತೆಯು ಹೆಚ್ಚು ಮಹತ್ವವಾಗಿದ್ದು, ಅದರ ಪೂರಕವಾಗಿ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿ ಕಬ್ಬಿಣಾಂಶ ಪ್ರಮಾಣ ಹೆಚ್ಚುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು. 

ಸೋಮವಾರದಂದು, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಯಾಳ್ಪಿ ಗ್ರಾಮಕ್ಕೆ ಭೇಟಿ ಗರ್ಭಿಣಿಯ ಪಾಲಕರೊಂದಿಗೆ ಅವರು ಮಾತನಾಡಿದರು.ಗರ್ಭಿಣಿ ಮಹಿಳೆಯು ಲವಲವಿಕೆಯಿಂದ ಇರಬೇಕು. ಗರ್ಭದಲ್ಲಿ ಭ್ರೂಣದ ಸರಿಯಾದ ಬೆಳವಣಿಗೆಗೆ ಸಹಕಾರಿಯಾಗುವ ಜೊತೆಗೆ ಸುರಕ್ಷಿತ ಹೆರಿಗೆಗೆ ಸಹಾಯಕವಾಗುವುದರಿಂದ ಕುಟುಂಬದ ಸದಸ್ಯರು ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ತಪ್ಪದೆ ಗರ್ಭಿಣಿಗೆ ನುಂಗಿಸಲು ಕ್ರಮ ವಹಿಸಬೇಕು ಎಂದರು.ಇತರೆ ಕೆಲಸದೊಂದಿಗೆ ಮನೆಯಲ್ಲಿನ ಗರ್ಭಿಣಿಯ ಆರೈಕೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಊಟವಾದ ಒಂದು ಗಂಟೆಯ ನಂತರ ತಪ್ಪದೇ ನುಂಗಿಸಬೇಕು. ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆ, ಗಾಳಿ ಸುದ್ದಿ ನಂಬಬಾರದು. ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಸೇವಿಸಬೇಕು ಎಂದು ಅವರು ವಿನಂತಿಸಿದರು.ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಅಂದರೆ ಚೊಚ್ಚುಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ ಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೆ ನಿರ್ಲಕ್ಷಿಸಬಾರದು. ಅಲ್ಲದೆ ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು ಎಂದು ಹೇಳಿದರು.*ಮಕ್ಕಳ ಜನನದ ಮಧ್ಯ ಅಂತರಕ್ಕಾಗಿ ತಾತ್ಕಾಲಿಕ ವಿಧಾನ ಬಳಸಿ:* 

ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದುಡುವುದು, ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಬಳಸಲು ವಿನಂತಿಸಿದರು. 

*ಗರ್ಭಿಣಿಯರ ರಕ್ತದೊತ್ತಡದ ಬಗ್ಗೆ ನಿಗಾವಹಿಸಿ:* 

ಗರ್ಭಿಣಿ ಅವಧಿಯಲ್ಲಿ ರಕ್ತದೊತ್ತಡ ಹೆಚ್ಚು ಅಥವಾ ಕಡಿಮೆಯಾಗುವುದು ಅಪಾಯಕಾರಿ ಆಗಿರುವುದರಿಂದ ಆಹಾರದಲ್ಲಿ ಉಪ್ಪಿನ ಬಳಕೆ ಕಡಿಮೆ ಹಾಗೂ ಬೇಕರಿ ಪದಾರ್ಥಗಳನ್ನು ಅನಗತ್ಯವಾಗಿ ಕೊಡಬಾರದು ಎಂದು ವಿನಂತಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ನಸಿಂರ್ಗ್ ಮೇಲ್ವಿಚಾರಣಾಧಿಕಾರಿ ಗೀರೀಶ್, ಆರೋಗ್ಯ ನಿರಿಕ್ಷಣಾಧಿಕಾರಿ ಸಿದ್ದರಾಮಪ್ಪ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ನಾಗಮ್ಮ, ಸಮುದಾಯ ಆರೋಗ್ಯಾಧಿಕಾರಿ ಮೌನಿತ ಗೌಡ, ಆಶಾ ಕಾರ್ಯಕರ್ತೆ ಸುನಿತಮ್ಮ, ಎಮ್‌.ಲಕ್ಷ್ಮೀ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.