ಸಕ್ಕರೆ ಉದ್ಯಮದಲ್ಲಿನ ಅಪಾರ ಜ್ಞಾನ ಹೊಂದಿದ್ದಾರೆ ಅಮಿತ ಕೋರೆ: ಬನವಣೆ
ಮಾಂಜರಿ 23: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ, ಹೊಸದೆಹಲಿಯ ಸಂಚಾಲಕ ಅಮಿತ ಕೋರೆ ಇವರ 45ನೇ ಹುಟ್ಟು ಹಬ್ಬವನ್ನು ಗಂಗಾ ಶುಗರ ಶಾಲಾ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರಿಂದ ವಿದ್ಯಾರ್ಥಿಗಳಿಗೆ ನೋಟಬುಕ್, ಪೆನ್ ಹಾಗೂ ಕ್ರೀಡಾ ಕೂಟಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮತ್ತು ಕಾರ್ಖಾನೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಇಂದು ಆಚರಿಸಲಾಯಿತು.
ಕಾರ್ಖಾನೆಯ ನಿರ್ದೇಶಕ ಭರತೇಶ ಬನವಣೆ ಇವರು ಮಾತನಾಡಿ ಕಾರ್ಖಾನೆಯ ರೂವಾರಿಗಳು, ರಾಜ್ಯ ಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಇವರ ಮಾರ್ಗದರ್ಶನ ಹಾಗೂ ಅಮಿತ ಕೋರೆ ಇವರ ನೇತೃತ್ವದಲ್ಲಿ ಕಾರ್ಖಾನೆಯು ಯಾವತ್ತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅಮಿತ ಕೋರೆಯವರು ಅತ್ಯಂತ ಕಡಿಮೆ ವಯಸ್ಸಿನಲ್ಲಿ ಹಲವು ಜವಾಬ್ದಾರಿಯುತ ಅಧಿಕಾರಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಕ್ಕರೆ ಉದ್ಯಮದಲ್ಲಿನ ಅಪಾರ ಜ್ಞಾನ ಹೊಂದಿರುವ ಅವರು ಸಹಕಾರ ಕ್ಷೇತ್ರದಲ್ಲಿಯ ನಮ್ಮ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಾಮರ್ಥ್ಯ ಹೆಚ್ಚಿಸಿ, ಮೆ.ಶಿವಶಕ್ತಿ ಶುಗರ್ಸ ಹಾಗೂ ಮೆ.ಹರ್ಮ್ಸ ಡಿಸ್ಟಿಲರಿ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಭಾಗದ ಯುವಕರಿಗೆ ಉದ್ಯೋಗ ನೀಡಿ ಆರ್ಥಿಕ ಸಬಲರಾಗುವಂತೆ ಮಾಡಿದ್ದಾರೆ. ಸನ್ಮಾನ್ಯರು ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ರಾಷ್ಟ್ರಮಟ್ಟದ ಸಹಕಾರ ಕ್ಷೇತ್ರದ ಸಂಸ್ಥೆಗಳ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಅವರ ಈ ಕಾರ್ಯತತ್ಪರತೆ ನಮಗೆಲ್ಲ ಸ್ಫೂರ್ತಿಯಾಗಬೇಕು. ವಿದ್ಯಾರ್ಥಿಗಳು ಅವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ತಮ್ಮ ಶೈಕ್ಷಣಿಕ ಮತ್ತು ಮುಂದೆ ವೃತ್ತಿ ಜೀವನದಲ್ಲಿ ಯಶಸ್ಸಿನ ಮೈಲಿಗಲ್ಲುಗಳನ್ನು ನಿರ್ಮಿಸಬೇಕು ಎಂದು ಹೇಳಿದರು.
ಯಾವತ್ತೂ ರೈತರು, ಕಾರ್ಮಿಕರು, ಬಡವರ ಏಳಿಗೆಯ ಬಗ್ಗೆ ಚಿಂತಿಸುವ ಸರಳ, ಪ್ರಾಮಾಣಿಕ, ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಅಮಿತ ಕೋರೆಯವರು ರಾಜಕೀಯ ಪ್ರವೇಶಿಸಬೇಕೆಂದು ನಮ್ಮೆಲ್ಲರ ಒತ್ತಾಸೆಯಾಗಿದ್ದು ಈ ಮೂಲಕ ನಮ್ಮ ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಒಬ್ಬ ಅಭಿವೃದ್ಧಿಪರ ಹಾಗೂ ದೂರದೃಷ್ಟಿಯುಳ್ಳ ರಾಜಕಾರಣಿ ಲಭಿಸುವಂತಾಗಲಿ ಎಂದು ಹೇಳಿದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್.ಬಿ.ಖಾಂಡಗಾವೆ ಮಾತನಾಡಿ ಅಮಿತ ಕೋರೆಯವರ ಹಲವು ಸಾಧನೆಗಳ ಬಗ್ಗೆ ವಿವರಿಸಿದರು. ಮಾನ್ಯರ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ಗಂಗಾ ಶುಗರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿನ ವಿಜೇತರಿಗೆ ಹಾಗೂ ವಿದ್ಯಾರ್ಥಿಗಳ ತಾಯಂದಿರರಿಗಾಗಿ ಆಯೋಜಿಸಲಾಗಿದ್ದ ಅಡುಗೆ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿನ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಅಲ್ಲದೇ ಗಂಗಾ ಶುಗರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕಾರ್ಖಾನೆಯ ನಿವೇಶನದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಕಬ್ಬು ಕಟಾವು ಕಾರ್ಮಿಕರ ಮಕ್ಕಳ ಸಾಖರ ಶಾಲೆಯ ಎಲ್ಲ ವಿದ್ಯಾರ್ಥಿನಿಯರಿಗೆ ಪುಸ್ತಕ, ಪೆನ್ ವಿತರಿಸಿ ಸಿಹಿ ಹಂಚಲಾಯಿತು.
ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಖಾನೆಯ ನಿರ್ದೇಶಕರಾದ ಅಜೀತ ದೇಸಾಯಿ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ಭೀಮಗೌಡಾ ಪಾಟೀಲ, ಅಣ್ಣಾಸಾಬ ಇಂಗಳೆ ಮತ್ತು ಕೆಎಲ್‌ಇ ಅಡ್ಮಿನಿಸ್ಟ್ರೇಟರಾದ ಡಾ. ಅಲ್ಲಮಪ್ರಭು ಕುಡಚಿ ಹಾಗೂ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.