ಹೈದರಾಬಾದ್ , ನ ೩೦- ಬ್ರಿಟಿಷರು ಭಾರತೀಯರನ್ನು ಆಳಲು ರೂಪಿಸಿದ್ದ ಭಾರತೀಯ ದಂಡ ಸಂಹಿತೆ - ಐಪಿಸಿ ಹಾಗೂ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ - ಸಿಆರ್ ಪಿ ಸಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ತಿದ್ದುಪಡಿಗಳನ್ನು ತರಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿಶನ್ ರೆಡ್ಡಿ ಶನಿವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಾಧಿತ ವ್ಯಕ್ತಿಗಳಿಗೆ ತ್ವರಿತ ನ್ಯಾಯ ಪರಿಹಾರ ಲಭಿಸುವಂತಾಗಲು ಐಪಿಸಿ ಮತ್ತು ಸಿಆರ್‌ಪಿಸಿ ಕಾಯ್ದೆಗಳಿಗೆ ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.
ಬಹಳಷ್ಟು ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತಾರೆ. ಇನ್ನೂ ಮುಂದೆ ಅಂತಹ ಪ್ರಕ್ರಿಯೆ ಅಂತ್ಯಹಾಡಲು ಸರ್ಕಾರ ಗಂಭೀರ ಪರಿಶೀಲನೆ ನಡೆಸಿದೆ ಎಂದು ಹೇಳಿದರು.
ವಿಚಾರಣಾ ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿಲ್ಲದಂತೆ ನೇರವಾಗಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಲು ಸಾಧ್ಯವಾಗುವಂತೆ ಕಾನೂನು ಬದಲಾವಣೆ ತರಲಾಗುವುದು ಎಂದು ಸಚಿವ ಕಿಶನ್ ರೆಡ್ಡಿ ತಿಳಿಸಿದರು.
ಶೀಘ್ರದಲ್ಲೇ ಈ ಸಂಬಂಧ ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಆದೇ ರೀತಿ ಮಹಿಳೆಯರ ರಕ್ಷಣೆಗಾಗಿ ೧೧೨ ವಿಶೇಷ ಆ?ಯಪ್‌ಗಳನ್ನು ರೂಪಿಸಲಾಗಿದೆ. ಪ್ರತಿಯೊಬ್ಬ ಮಹಿಳೆಯರೂ ಈ ಆ?ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸಚಿವ ಕಿಶನ್ ರೆಡ್ಡಿಮನವಿ ಮಾಡಿದರು.
ಇದಕ್ಕೂ ಮುನ್ನ ಸಚಿವರು, ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆಒಳಗಾಗಿ, ನಂತರ ಬರ್ಬರವಾಗಿ ಹತ್ಯೆ ಗೀಡಾದ ಪಶು ವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಕುಟುಂಬದವನ್ನು ಭೇಟಿ ಮಾಡಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿ, ಸಾಂತ್ವಾನ ಹೇಳಿದರು.