ಅಮೀತ ಶಾ ವಜಾಗೊಳಿಸಿ, ದಸಂಸ ಪ್ರತಿಭಟನೆ
ರಾಯಬಾಗ 20: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮೀತ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಭೀಮವಾದ ದಸಂಸ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಝೇಂಡಾ ಕಟ್ಟಿ ಬಳಿ ಜಿಲ್ಲಾ ಸಂಚಾಲಕ ಪರಶುರಾಮ ಟೋಣಪೆ ನೇತೃತ್ವದಲ್ಲಿ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಭಾರತ ಸಂವಿಧಾನ ಜಾರಿಯಾಗಿ 75 ವರ್ಷಗಳು ಘಟಿಸಿದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಒತ್ತಾಯಕ್ಕೆ ಸಂಸತ್ತಿನ ಉಭಯ ಸದನದಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ರಾಜಸಭೆಯಲ್ಲಿ ಕೆಂದ್ರದ ಗೃಹ ಸಚಿವ ಅಮೀತ ಶಾ ಅವರು ಡಾ. ಅಂಬೇಡ್ಕರ್ ಕುರಿತಾಗಿ ಮಾತನಾಡುವಾಗ, ಅಂಬೇಡ್ಕರ್, ಅಂಬೇಡ್ಕರ್, ಎನ್ನುವ ಪದ ಕಾಂಗ್ರೆಸ್ ನವರಿಗೆ ವ್ಯಸನವಾಗಿ ಬಿಟ್ಟಿದೆ. ಬದಲಾಗಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮಕ್ಕೆ ಆಗುವಷ್ಟು ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿರುವುದು ಖಂಡನಾರ್ಹ. ಅಲ್ಲದೇ ಅವರೊಬ್ಬ ಸಂವಿಧಾನ ವಿರೋಧಿ ಎಂಬುವುದನ್ನು ಸಾಭಿತುಪಡಿಸಿದ್ದಾರೆ.ಅಂಬೇಡ್ಕರ್ ಬರೆದ ಸಂವಿದಾನದ ಆಧಾರದ ಮೇಲೆ ಕೇಂದ್ರ ಸಚಿವ ಆಗಿರುವ ಶಾ ಅವರು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿರುವುದು ದೇಶ ವಿರೋಧಿ ಕೃತ್ಯವಾಗಿದೆ. ಕೂಡಲೇ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಬಳಿಕ ಉಪತಹಶೀಲ್ದಾರ್ ಪರಮಾನಂದ ಮಂಗಸೂಳೆ ಅವರಿಗೆ ಮನವಿ ಸಲ್ಲಿಸಲಾಯಿತು.ಸಿಪಿಐ ಬಿ.ಎಸ್.ಮಂಟೂರ, ಪಿಎಸ್‌ಐ ಶಿವಶಂಕರ ಮುಕರಿ ಸೂಕ್ತ ಬಂದೋಬಸ್ತ ಕೈಗೊಂಡಿದ್ದರು. ಸಂಜೀವ ಕಾಂಬಳೆ, ಕೃಷ್ಣಾ ಗಸ್ತಿ, ಮಹೇಶ ಮಾಂಗ, ಮಹಾದೇವ ಇಟೆಕರಿ, ಗೀತಾ ಕಾಂಬಳೆ, ಸಂಗೀತಾ ಕಾಂಬಳೆ, ಕಾಮಣ್ಣ ಕಾಂಬಳೆ, ಪ್ರವೀಣ ಕಾಂಬಳೆ, ಶ್ರೀದೇವಿ ಐಹೊಳೆ, ಪ್ರತಿಭಾ ಕಾಂಬಳೆ, ರೇಖಾ ಕಾಂಬಳೆ ಮುಂತಾವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.