ಅಭಿವೃದ್ಧಿಯಲ್ಲಿ ಅಲ್ಲಾಪುರ ಗ್ರಾಮ ಮಾದರಿ: ದಿವ್ಯ ಪ್ರಭು
ಹುಬ್ಬಳ್ಳಿ.11: ಗ್ರಾಮ ಪಂಚಾಯತ ವ್ಯವಸ್ಥೆ ಬಲಿಷ್ಠವಾಗಿದ್ದು, ಸರಕಾರದ ವಿವಿಧ ಯೋಜನೆಗಳಡಿ ಸಿಗುವ ಅನುದಾನವನ್ನು ಸಮರ್ಕವಾಗಿ ಬಳಸಿಕೊಂಡು ಗ್ರಾಮೀಣ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸಬೇಕು. ಪುಟ್ಟ ಗ್ರಾಮ ಅಲ್ಲಾಪುರ ಅಭಿವೃದ್ಧಿಯಲ್ಲಿ ಮಾದರಿ ಆಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2023-24 ನೇ ಸಾಲಿನ ನರೇಗಾ ಅನುದಾನ ಹಾಗೂ 15 ನೇ ಹಣಕಾಸು ಆಯೋಗದ ಆರ್ಥಿಕ ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಗೋಡೆ ಆವರಣ ಬೋಜನಾಲಯ ನಿರ್ಮಾಣ, ಸಿಸಿ ಟಿವಿ ಅಳವಡಿಕೆ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು. ಅಭಿವೃದ್ದಿ ಮುನ್ನುಡಿಯಾಗಿ ಇರುವ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮವಾದ ನೀಲನಕ್ಷೆ ರೂಪಿಸಬೇಕು. ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯತಗಳಿಗೆ ಸಿಗುವ ಅನುದಾನವನ್ನು ಸಮರ್ಕವಾಗಿ ಬಳಸಿಕೊಳ್ಖಬೇಕು ಎಂದರು. ಗ್ರಾಮಗಳಲ್ಲಿ ಉದ್ಯೋಗ ಮತ್ತು ಗುಣಮಟ್ಟದ ಮೂಲಸೌಕರ್ಯ ನೀಗಿಸಲು ನರೇಗಾ ಉತ್ತಮ ಯೋಜನೆ ಆಗಿದೆ. ನರೇಗಾ ಕಾಮಗಾರಿಗಳು ಗುಣಮಟ್ಟದಿಂದ ಆಗುವಂತೆ ಜಾಗೃತಿ ವಹಿಸಬೇಕು ಎಂದರು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಪ್ರಸಕ್ತ ಸಾಲಿನಿಂದ ಮಿಶನ್ ವಿದ್ಯಾಕಾಶಿ ಜಾರಿಗೊಳಿಸಲಾಗಿದೆ. ಈ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಹಾಗೂ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಬರುವ 2025-26 ನೇ ಸಾಲಿನಲ್ಲಿ ಪ್ರೌಢಶಾಲೆ ಜೊತೆಗೆ ಪ್ರಾಥಮಿಕ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಲಾಗುತ್ತದೆ. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಅಲ್ಲಾಪುರ ಗ್ರಾಮ ತಂಬಾಕು ಮುಕ್ತ, ಸರಾಯಿ ಮುಕ್ತವಾಗಿ ಇತರ ಗ್ರಾಮಗಳಿಗೆ ಮಾದರಿ ಆಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳು ಈ ರೀತಿ ತಂಬಾಕು ಮುಕ್ತ, ಸರಾಯಿ ಮುಕ್ತ ಗ್ರಾಮಗಳಾದರೆ, ಜಿಲ್ಲೆಯ ಅಭಿವೃದ್ದಿಗೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ದೇಶದ ಭವಿಷ್ಯ ಶಾಲೆಗಳಲ್ಲಿಯೇ ನಿರ್ಮಾಣವಾಗುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಣ ಹಂತದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮದಲ್ಲಿ ನರೇಗಾ ಯೋಜನೆ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನ ಐದು ಗ್ರಾಮಗಳ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಪ್ರತಿ ಶಾಲಾ ಆವರಣದಲ್ಲಿ ಸಸಿಗಳನ್ನು ನೇಡಲು ಮತ್ತು ಶಾಲೆಯ ಸುತ್ತ ಹಸಿರು ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದರು. ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಕೈ ತೋಟ, ಕುಡಿಯುವ ಶುದ್ದ ನೀರು, ಶಾಲಾ ಉಪಕರಣ, ಭೋಜನಾಲಯ ಮುಂತಾದ ಮೂಲಸೌಕರ್ಯಗಳನ್ನು ಮಾಡಿಕೊಳ್ಳಬಹುದು ಎಂದರು. ಗ್ರಾಮದಲ್ಲಿ ಉತ್ತಮ ಪರಿಸರ, ಗುಣಮಟ್ಟದ ರಸ್ತೆ, ಶುದ್ಧ ನೀರು, ಅರಣ್ಯ ಬೆಳೆಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು. ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೆರ ಅವರು ಶಾಲೆ ಹಾಗೂ ಗ್ರಾಮ ಅಭಿವೃದ್ಧಿ ಕುರಿತು ಮಾತನಾಡಿದರು. ಶಾಲೆಯ ಪ್ರಧಾನ ಗುರುಮಾತೆ ಜೆ.ಎ.ಉಪಾಧ್ಯಯ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರಜನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕುಂದಗೋಳ ತಹಶೀಲ್ದಾರ ರಾಜು ಮಾವರಕರ, ತಾ.ಪಂ.ಇಓ ಜಗದೀಶ ಕಮ್ಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ, ಗುಡೆನಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಮತಾ ಬೆಟದೂರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಖಾದರಸಾಬ ಹಳ್ಳಿಕೇರಿ, ಗ್ರಾಮ ಪಂಚಾಯತ ಸದಸ್ಯ ಚಿದಾನಂದ ಪೂಜಾರ, ಪಿಡಿಓ ಧರ್ಮಪ್ರಸಾದ ಕಾಲವಾಡ, ಗ್ರಾಮದ ಪ್ರಮುಖರಾದ ಚನ್ನಯ್ಯ ಹಿರೇಮಠ, ಶಾಲೆಗೆ ಭೂದಾನ ಮಾಡಿದ ಶಿವಬಸಪ್ಪ ಮಸನಾಳ, ಸ್ವಾಮಿರಾವ್ ಕುಲಕರ್ಣಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಅಲ್ಲಾಪುರ ಗ್ರಾಮಸ್ಥರು, ಗ್ರಾಮ ಪಂಚಾಯತ ಸದಸ್ಯರು, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.