ಪಂಚ ಗ್ಯಾರಂಟಿ ಯೋಜನೆಗಳಲ್ಲಿನ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ -ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ

All problems in Panch Guarantee Schemes will be solved soon - Vice President S.R.Patil

ಪಂಚ ಗ್ಯಾರಂಟಿ ಯೋಜನೆಗಳಲ್ಲಿನ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ -ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ 

ಹಾವೇರಿ 21:  ಪಂಚ ಗ್ಯಾರಂಟಿ ಯೋಜನೆಗಳಲ್ಲಿನ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್‌.ಆರ್‌.ಪಾಟೀಲ ತಿಳಿಸಿದರು. ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಜನರಿಗೆ ನೀಡಲಾದ ಭರವಸೆಯಂತೆ ಐದು ಗ್ಯಾರಂಟಿ  ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ರಾಜ್ಯ ಸರ್ಕಾರವು ರಾಜ್ಯದ ಜನತೆಯ ಹಿತದೃಷ್ಟಿಯಿಂದ ತನ್ನ ಮಹತ್ವಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ. ಬೆಳಗಾವಿ ಕಂದಾಯ ವಿಭಾಗದ 7 ಜಿಲ್ಲೆಗಳಲ್ಲಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆ. ನಮ್ಮ ವಿಭಾಗದ ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಈ ಕುರಿತಂತೆ ಗಮನ ಹರಿಸಿ ಅರ್ಹರಿಗೆ ಯೋಜನೆಗಳ ಸವಲತ್ತು ಸಮರ​‍್ಕವಾಗಿ ದೊರೆಯುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಸಂಬಂಧಪಟ್ಟ, ಇಲಾಖೆಗಳ ಅಧಿಕಾರಿಗಳು ಸಹ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿದ್ದರಿಂದಾಗಿ ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗಿವೆ ಎಂದರು. ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯನ್ನು ಮಹಿಳೆಯರು ಸಮರ​‍್ಕವಾಗಿ ಬಳಸಿಕೊಂಡಿರುವುದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ವರದಿಯಲ್ಲಿ ವ್ಯಕ್ತವಾಗಿದೆ. ಯೋಜನೆ ಜಾರಿಯಾದ ನಂತರ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಬಸ್ಸುಗಳ ಸಂಖ್ಯೆಗೆ ಅನುಗುಣವಾಗಿ ಚಾಲಕ-ನಿರ್ವಾಹಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ ಎಂದು ತಿಳಿಸಿದರು. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳ ಅಭಿವೃದ್ಧಿ, ಬಸ್ಸುಗಳ ಸೇರೆ​‍್ಡ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ವ್ಯಾಪ್ತಿಯಲ್ಲಿ ಯಾವುದೇ ಹೊಸ ಬಸ್ಸುಗಳ ಸೇರ್ವಡೆಯಾಗಿರಲಿಲ್ಲ. ಶಕ್ತಿ ಯೋಜನೆ ಜಾರಿಯಾಗಿ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದರೂ ಸಾರಿಗೆ ಸಂಸ್ಥೆಗೆ ಯಾವುದೇ ಹಾನಿಯಾಗಿಲ್ಲ. ಸಂಸ್ಥೆಯ ಆದಾಯವೂ ಹೆಚ್ಚಾಗಿದೆ ಎಂದರು. ಶಕ್ತಿ ಯೋಜನೆ ಜಾರಿಯಾದ ನಂತರ ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ. 40 ರಷ್ಟು ಹೆಚ್ಚಾಗಿದೆ. ಇದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಳೆದ ಒಂದುವರೆ ವರ್ಷಗಳಲ್ಲಿ ರೂ.3,900 ಕೋಟಿ ಆದಾಯ ಲಭಿಸಿದೆ. ಇಷ್ಟೆಲ್ಲಾ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದ್ದರೂ ಪ್ರಯಾಣಿಕರಿಂದ ದೂರು ಬಾರದಂತೆ ಸಿಬ್ಬಂದಿ ಸೇವೆ ಸಲ್ಲಿಸಿದ್ದಾರೆ ಎಂದರು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಹಾಗೂ ವಿಜಯಪುರ ಜಿಲ್ಲೆಯು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯಾಪ್ತಿಗೆ ಒಳಪಟ್ಟಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರತಿದಿನ ಸರಾಸರಿ 24.87 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಅದಕ್ಕೂ ಮೊದಲು 16.49 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಪ್ರತಿ ದಿನ ಸರಾಸರಿ 8 ಲಕ್ಷ ಮಂದಿ ಹೆಚ್ಚಳವಾಗಿದೆ.  ಮೊದಲು ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.30 ರಿಮದ 40ರಷ್ಟಿದ್ದರೆ ಈಗ ಶೇ.60ಕ್ಕೆ ಏರಿಕೆಯಾಗಿದೆ ಎಂದರು. ಶಕ್ತಿ ಯೋಜನೆ ಪ್ರಾರಂಭದಿಂದ 2024ರ ಡಿಸೆಂಬರ್ ಅಂತ್ಯಕ್ಕೆ ಶಕ್ತಿ ಯೋಜನೆಯಡಿ ವಾಯವ್ಯ  ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ 84.10 ಕೋಟಿ ಮಹಿಳೆಯರು ಪ್ರಮಾಣ ಮಾಡಿದ್ದಾರೆ. ಈ ಪ್ರಯಾಣಿಕರಿಗೆ ವಿತರಿಸಿದ ಶೂನ್ಯ ಮೌಲ್ಯದ ಟಿಕೆಟ್ ಮೊತ್ತ  ರೂ.2,158 ಕೋಟಿಗಳಾಗಿದೆ. ಇದೇ ಜನವರಿ ತಿಂಗಳ ಅಂತ್ಯಕ್ಕೆ ರೂ.1,819 ಕೋಟಿಗಳನ್ನು ರಾಜ್ಯ ಸರ್ಕಾರ ಸಂಸ್ಥೆಗೆ ಮರುಪಾವತಿ ಮಾಡಿದೆ ಎಂದು ತಿಳಿಸಿದರು. ಕಳೆದ ಐದು ವರ್ಷಗಳಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಯಾವುದೇ ಹೊಸ ಬಸ್ಸುಗಳನ್ನು ಸೇರೆ​‍್ಡ ಮಾಡಿರಲಿಲ್ಲ. ಆದರೆ ಶಕ್ತಿ ಯೋಜನೆ ಪ್ರಾರಂಭವಾದ ನಂತರ 846 ಬಸ್ಸುಗಳನ್ನು ಸೇರೆ​‍್ಡ ಮಾಡಲಾಗಿದೆ. ಇನ್ನೂ 800 ಬಸ್ಸುಗಳ ಅವಶ್ಯಕತೆಯಿದೆ. ಹಾಗೆಯೇ ಹೊಸದಾಗಿ 1025 ಚಾಲಕರನ್ನು ಹೊರಗುತ್ತಿಗೆಯಲ್ಲಿ ನೇಮಕ ಮಾಡಲು ಮಂಡಳಿಯ ಅನುಮತಿ ದೊರೆತಿದ್ದು, 728 ನೌಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದ 297 ನೌಕರರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ.  ವ್ಯಾಪ್ತಿಯಲ್ಲಿ ಪ್ರತಿದಿನದ ಶೆಡ್ಯೂಲ್ ಸಂಖ್ಯೆ 4768 ಆಗಿದೆ ಎಂದು ಮಾಹಿತಿ ನೀಡಿದರು.  ಅದೇ ರೀತಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ನಮ್ಮ ವಿಭಾಗದ ವಿಜಯಪುರ ವಿಭಾಗದಲ್ಲಿ 2024ರ ಡಿಸೆಂಬರ್ ಅಂತ್ಯದವರೆಗೆ 10.97 ಕೋಟಿ ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಶೂನ್ಯ ಮೌಲ್ಯದ ಟಿಕೆಟ್‌ಗಳಿಂದ ರೂ.339.20 ಕೋಟಿ ಆದಾಯ ಲಭಿಸಿದೆ. ಈ ತನಕ ಸರ್ಕಾರದಿಂದ ರೂ.268.98 ಕೋಟಿ ಹಣ ವಿಭಾಗಕ್ಕೆ ಮರುಪಾವತಿಯಾಗಿದೆ ಎಂದರು. ಪ್ರತಿ ದಿನ ವಿಜಯಪುರ ವಿಭಾಗದಲ್ಲಿ 2 ಲಕ್ಷ ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಪ್ರತಿದಿನ 749 ಶೆಡ್ಯೂಲ್‌ಗಳಿವೆ. ಶೇ. 30ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ವಿಜಯಪುರ ವಿಭಾಗಕ್ಕೆ, ಪ್ರತಿದಿನ 125 ಲಕ್ಷ ರೂ. ಸಾರಿಗೆ ಆದಾಯ ಬರುತ್ತಿದ್ದು, ಅದರಲ್ಲಿ ಮಹಿಳೆಯರಿಗೆ ನೀಡಿದ ಶೂನ್ನ ದರದ ಟಿಕೆಟ್‌ನಲ್ಲಿ ರೂ.65 ಲಕ್ಷ  ಬರುತ್ತದೆ. ಶಕ್ತಿ ಯೋಜನೆ ಪ್ರಾರಂಭವಾದಂದಿನಿಂದ 2025 ಜನವರಿ ವರೆಗೆ ವಿಜಯಪುರ ವಿಭಾಗದ ಬಸ್ಸುಗಳಲ್ಲಿ ಶೆಡ್ಯೂಲ್‌ಗಳೂ ಜಾಸ್ತಿಯಾಗಿವೆ. ಒಟ್ಟಾರೆ ಪ್ರಯಾಣಿಕರಿಗೆ ಹೆಚ್ಚಿನ ಸೇವೆ ಲಭ್ಯವಾಗುತ್ತಿದೆ ಎಂದರು. ಶಕ್ತಿ ಯೋಜನೆ ಜಾರಿಯಾದ ನಂತರ 127 ಬಸ್ಸುಗಳು ಸೇರೆ​‍್ಡಯಾಗಿವೆ. 200 ಬಸ್ಸುಗಳಿಗೆ ಬೇಡಿಕೆ ಸಲ್ಲಿಸಿದ್ದು, 353 ಮಂದಿ ಹೊಸ ಚಾಲಕ-ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿದಿನ 292 ಸರತಿಗಳು ಸಂಚರಿಸುತ್ತವೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ 33 ಡಿಪೋ ಕಟ್ಟಡಗಳನ್ನು ನಿರ್ಮಿಸಲಾಗಿದ್ದರೆ, ವಿಜಯಪುರ ಜಿಲ್ಲೆಯಲ್ಲಿ 3 ಡಿಪೋ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದರು. ಶಕ್ತಿ ಯೋಜನೆ ಜಾರಿಯಾದ ನಂತರ ನಿಗಮಗಳ ಆದಾಯವೂ ಹೆಚ್ಚಾಗಿದೆ. ಅದರಂತೆ ಪುಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ನಿಗಮಗಳು ಮೊದಲಿಗಿಂತ ಸುಸ್ಥಿರವಾಗಿವೆ. ಬಸ್‌ಗಳ ಸೇರೆ​‍್ಡಯ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ನಿಗಮಗಳ ವ್ಯಾಪ್ತಿಯಲ್ಲಿ ಒಂದೇ ಒಂದು ಹೊಸ ಬಸ್‌ಗಳ ಸೇರೆ​‍್ಡಯಾಗಿರಲಿಲ್ಲ ಎಂದರು. ಸಾರಿಗೆ ಸಂಸ್ಥೆಯ ಪ್ರತಿ ಘಟಕಗಳ ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರತ್ಯೇಕವಾದ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಯನ್ನು ನಿರ್ವಹಿಸಲಾಗಿದೆ. ಮಕ್ಕಳಿಗೆ ಮಹಿಳೆಯರು ಹಾಲು ಕುಡಿಸುವ ಸಲುವಾಗಿ ಫೀಡಿಂಗ್ ಕೊಠಡಿಗಳ ವ್ಯವಸ್ಥೆ ಸಹ ಮಾಡಲಾಗಿದೆ. ಈ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಫೀಡಿಂಗ್ ಕೊಠಡಿಗಳ ನಿರ್ಮಾಣಕ್ಕೆ, ಆದ್ಯತೆ ನೀಡಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಸಾರ್ವಜನಿಕ ಪ್ರಯಾಣಿಕರೊಂದಿಗೆ, ಶಾಲಾ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ ಚಾಲಕ-ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಇಂತಹ 66 ಪ್ರಕರಣಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳ ಕುರಿತು ಅಗತ್ಯ ಕ್ರಮ ಜರುಗಿಸಲಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರಿಂದ ಇಂತಹ 585 ದೂರುಗಳು ಸ್ವೀಕೃತಿಯಾಗಿದ್ದು, ಇದರಲ್ಲಿ ಅರ್ಹ 564 ಪ್ರಕರಣಗಳ ವಿರುದ್ಧ ಕ್ರಮ ವಹಿಸಲಾಗಿದೆ. ವಿಜಯಪುರ ವಿಭಾಗದಲ್ಲಿ ಈ ರೀತಿ ವರ್ತಿಸಿದ 14 ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಶಕ್ತಿ ಯೋಜನೆ ಜಾರಿ ನಂತರ ಪುಯಾಣಿಕರಿಂದ ಇಂತಹ 57 ದೂರುಗಳು ಬಂದಿದ್ದು ಎಲ್ಲ ಪ್ರಕರಣಗಳಲ್ಲೂ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.  ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರಂಬ ಹಿನ್ನೆಲೆಯಲ್ಲಿ ಅವರಿಗೆ ಅಗೌರವ ತೋರದೆ ಎಲ್ಲ ಪ್ರಯಾಣಿಕರಂತೆ ಮಹಿಳೆಯರನ್ನೂ ಗೌರವದಿಂದ ಕಾಣುವಂತೆ ಚಾಲಕ-ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಎಲ್ಲ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಸ್ವಚ್ಛತೆ ಮತ್ತು ಸೌಜನ್ಯತೆ ಕಾಪಾಡಿಕೊಳ್ಳುವುದನ್ನು ಆಗಿಂದಾಗೆ ಹಿರಿಯ ಅಧಿಕಾರಿಗಳು ಹಾಗೂ ತಪಾಸಣಾ ಸಿಬ್ಬಂದಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ, ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ ಅವರ ಆರೋಗ್ಯ ಸಮಸ್ಯೆಯಿಂದ ಗೃಹಲಕ್ಷ್ಮೀ ಯೋಜನೆ  ಹಣ ಜಮೆಯಾಗುವುದು ವಿಳಂವಾಗಿದೆ, ಶೀಘ್ರದಲ್ಲೇ ಬಿಡುಗಡೆಮಾಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದು 10 ಕೆ.ಜಿ. ವಿತರಣೆ ಮಾಡಲಾಗುವುದು, ಕಳಪೆ ಗುಣಮಪಟ್ಟ ಜೋಳ ವಿತರಣೆ ಸ್ಥಗಿತಗೊಳಿಸಲಾಗಿದೆ. ಯುವನಿಧಿ ಯೋಜನೆಯಡಿ ವಾಣಿಜ್ಯ ವಿಭಾಗದ  ವಿದ್ಯಾರ್ಥಿಗಳಿಗೆ ಹಣ ನೀಡುವ ಬದಲು ತರಬೇತಿ ನೀಡಲು ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.  ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಹಿರೇಮಠ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ  ಎಂ.ಎಂ.ಮೈದೂರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಇತರರು ಉಪಸ್ಥಿತರಿದ್ದರು.