ಲೋಕದರ್ಶನ ವರದಿ
ವೈರಾಗ್ಯದ ಮೇರುವ್ಯಕ್ತಿ ಅಕ್ಕಮಹಾದೇವಿ: ಕೆ. ಶೋಭಾಲತ
ಬಳ್ಳಾರಿ 14: ಲೋಕದಲ್ಲಿ ಇದ್ದು ಲೋಕದ ಜಂಜಡಗಳಿಗೆ ಅಂಟಿಕೊಳ್ಳದಂತೆ ಅಲೌಕಿಕ ಆನಂದವನ್ನು ಅನುಭವಿಸಿದ ಶರಣೆ ಅಕ್ಕ ಮಹಾದೇವಿ. ವಯಸ್ಸಿನಿಂದ ಚಿಕ್ಕವಳಾದರೂ, ಅನುಭಾವದಲ್ಲಿ ಅಲ್ಲಮರಿಂದ ಅಕ್ಕ, ಎನ್ನಕ್ಕ, ಜಗದಕ್ಕ ಎಂದು ಹೊಗಳಿಸಿಕೊಂಡ ಮೇರು ವ್ಯಕ್ತಿತ್ವ ಅಕ್ಕನದು ಎಂದು ನಿವೃತ್ತ ಶಿಕ್ಷಕಿ ಕೆ.ಶೋಭಾಲತ ನುಡಿದರು.
ನಗರದ ತಾಳೂರು ರಸ್ತೆಯಲ್ಲಿಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಂತಿಧಾಮದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರಿ್ಡಸಿದ್ದ ಅಕ್ಕಮಹಾದೇವಿ ಜಯಂತಿ ವಿಶೇಷ 313ನೇ ಮಹಾಮನೆ ಲಿಂಽಽ ಬಸಯ್ಯ ವೀರಭದ್ರಯ್ಯ ಹೊಸೂರುಮಠ ಮತ್ತು ಲಿಂಽಽ ಕೊಟ್ರಯ್ಯ ವೀರಭದ್ರಯ್ಯ ಹೊಸೂರುಮಠ ದತ್ತಿ ಕಾರ್ಯಕ್ರಮದಲ್ಲಿ ಅಕ್ಕನ ಅನುಭಾವ ಕುರಿತು ಮಾತನಾಡುತ್ತಾ, ಅಕ್ಕ ಅಲೌಕಿಕ ಅನುಭಾವಿ. ಈಕೆಯ ಜ್ಞಾನ ಕಲಿಕೆಯಿಂದ ಬಂದುದಲ್ಲ. ಜನ್ಮಜಾತವಾಗಿ ಬಂದುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ಅಭಿಯಂತರರಾದ ಡಾ. ಮಹಾಬಲೇಶ್ವರ ರವರು ಹನ್ನೆರಡನೇ ಶತಮಾನದ ಶರಣರ ಸಂಕುಲದಲ್ಲಿ ಅಕ್ಕಮಹಾದೇವಿ ದೃವತಾರೆಯಾಗಿದ್ದಾರೆ ಎಂದರು. ಪಿರಮಿಡ್ ಮಾಸ್ಟರ್ ಆದ ಮಮತಾ ರಾಮಚಂದ್ರರಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಚನ ಪ್ರಾರ್ಥನೆಯನ್ನು ವಿದ್ಯಾರ್ಥಿ ಅಮೋಘ್ ನೆರವೇರಿಸಿದರು. ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರುತ್ತಾ, ಕಾರ್ಯಕ್ರಮ ನಿರೂಪಿಸಿದರು.
ಬಳ್ಳಾರಿ ಜಿಲ್ಲಾ ಮಹಿಳಾ ಕದಳಿ ವೇದಿಕೆಯ ಗೌರವ ಸಲಹೆಗಾರರಾದ ಸುಶೀಲ ಶಿರೂರು, ಜಿಲ್ಲಾಧ್ಯಕ್ಷರಾದ ಜಿ.ನೀಲಾಂಬಿಕೆ, ತಾಲೂಕು ಅಧ್ಯಕ್ಷೆ ಈರಮ್ಮ, ಸಂಡೂರು ತಾಲ್ಲೂಕು ಕದಳಿ ವೇದಿಕೆ ಗೌರವಾಧ್ಯಕ್ಷೆ ಪ್ರೇಮಲೀಲಾ, ಬಾದಾಮಿ ಬನಶಂಕರಿ, ಎರ್ರ್ಪಗೌಡ, ಅನುಪಮ ಲಲಿತಾಶ್ರೀ, ಕೆ.ಬಿ.ಶಾಂತಕುಮಾರಿ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.