ಅಮೃತ 2.0 ಯೋಜನೆಗೆ ಸಹಮತ*ಕುಡಿಯುವ ನೀರು ಸರಬರಾಜು ಇಲಾಖೆಗೆ 24 ಕೋಟಿ ಬಾಕಿ ಉಳಿಸಿದ ಕಾರವಾರ ನಗರಸಭೆ

Agreed to Amrita 2.0 project* Karwar municipal council saved 24 crore dues to drinking water supply

ಅಮೃತ 2.0 ಯೋಜನೆಗೆ ಸಹಮತ*ಕುಡಿಯುವ ನೀರು ಸರಬರಾಜು ಇಲಾಖೆಗೆ 24 ಕೋಟಿ ಬಾಕಿ ಉಳಿಸಿದ ಕಾರವಾರ ನಗರಸಭೆ  

ಕಾರವಾರ 20: ಕುಡಿಯುವ ನೀರನ್ನು ನಗರದ ಪ್ರತಿ ಮನೆಗೆ ಸರಬರಾಜು ಮಾಡುವ ಅಮೃತ 2.0 ಯೋಜನೆಗೆ ನಗರಸಭೆ ತನ್ನ ಸಹಮತ ವ್ಯಕ್ತಪಡಿಸಿತು.ಗುರುವಾರ ಕಾರವಾರ ನಗರಸಭೆಯಲ್ಲಿ ತುರ್ತಾಗಿ ವಿಶೇಷ ಸಭೆ ಕರೆದ ಕಾರಣವನ್ನು ಪೌರಾಯುಕ್ತ ಹುಲಗಜ್ಜಿ ತಿಳಿಸಿದರು.  

ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ಐವತ್ತು ವರ್ಷ ಗಮನದಲ್ಲಿರಿಸಿ ನಗರ ನೀರು ಸರಬರಾಜು ಮಂಡಳಿ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಅಮೃತ 2.0 ಯೋಜನೆ ಅಡಿ 14 ಕೋಟಿ ನೀಡಲಿದೆ. ರಾಜ್ಯ ಸರಕಾರ 11.5 ಕೋಟಿ ಅನುದಾನ ನೀಡಿಲಿದೆ. ನಗರಸಭೆ 9.42 ಕೋಟಿ ಅನುದಾನ ನೀಡಬೇಕು. 9.42 ಹಂತ ಹಂತವಾಗಿ ನೀಡಲು ಅವಕಾಶ ಇದೆ ಎಂದು ಪೌರಾಯುಕ್ತರು ಸಭೆಗೆ ವಿವರಿಸಿದರು. ನಗರ ನೀರು ಸರಬರಾಜು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಶೀದ್ ರಿತ್ತಿ ಮಾತನಾಡಿ, ಯೋಜನೆ ಪ್ಲಾನ್ ಸಿದ್ದವಾಗಿದೆ.  

ಆಧುನಿಕ ,ವೈಜ್ಞಾನಿಕ ರೀತಿಯ ನೀರು ಸಂಗ್ರಹದ ಟ್ಯಾಂಕ್, ಅಲ್ಲಲ್ಲಿ ಪೈಪ್ ಲೈನ್ ಬದಲಾವಣೆ, ನೀರು ಸರಬರಾಜಿನ ಹೊಸ ವ್ಯವಸ್ಥೆಗೆ 35 ಕೋಟಿ ಬೇಕು. ಇದರಲ್ಲಿ ನಗರಸಭೆಆರಂಭದಲ್ಲಿ 3.5 ಕೋಟಿ, ಯೋಜನೆ ಅರ್ದ ಅನುಷ್ಠಾನ ಆದ ಮೇಲೆ 2.97 ಕೋಟಿ, 2.53 ಕೋಟಿಯನ್ನು ಯೋಜನೆ ನಿರ್ವಹಣಾ ವೆಚ್ಚಕ್ಕೆ ನೀಡಬೇಕು. ಕರ್ನಾಟಕ ನೀರು ಸರಬರಾಜು ಮಂಡಳಿಯ ಬದಲು ನಗರಸಭೆಯೇ ನೀರು ಸರಬರಾಜು ನಿರ್ವಹಣೆ ಮಾಡಿದರೆ 2.53 ಕೋಟಿಯನ್ನು ನೀಡಬೇಕಿಲ್ಲ ಎಂದರು. ಅಗಸೂರು ಬಳಿ ಮಿನಿ ಸ್ಟೋರೇಜ್ ಡ್ಯಾಮ್ ನಿರ್ಮಾಣ ಆರಂಭವಾಗಿದೆ.ಹದಿನೆಂಟು ತಿಂಗಳಲ್ಲಿ ಕಾಮಗಾರಿ ಮುಗಿದರೆ, ಕಾರವಾರಕ್ಕೆ ನೀರಿನ ಕೊರತೆಯೇ ಇಲ್ಲ ಎಂದು ರಶೀದ್ ವಿವರಿಸಿದರು.  

ಈಗ ಗಂಗಾವಳಿ ನದಿ ನೀರು ಕಾರವಾರ ,ಅಂಕೋಲಾ, ಹಾಗೂ ಹದಿಮೂರು ಹಳ್ಳಿಗಳು , ಸೀಬರ್ಡ ವಸತಿ ಪ್ರದೇಶ, ಬಿಣಗಾ ಕಾರ್ಖಾನೆಗೆ ಸರಬರಾಜು ಆಗುತ್ತಿದೆ. ನೀರಿನ ಸಂಗ್ರಹಕ್ಕೆ ಕೊರತೆ ಇಲ್ಲ ಎಂದರು.ಮಧ್ಯ ಪ್ರವೇಶಿಸಿದ ಸದಸ್ಯ ಮಕ್ಬೂಲ್ ಶೇಖ್ 2008ರಲ್ಲಿ ಕೆಯುಡಿಎಫ್ ಸಿ ಕಾರವಾರ ನಗರದ ಕುಡಿಯುವ ನೀರಿನ ಯೋಜನೆಗೆ 68 ಕೋಟಿ ನೀಡಿತ್ತು. ಅದರಲ್ಲಿ ಎಷ್ಟು ಹಣ ವಾಪಾಸ್ ಕಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಕೇವಲ 50 ಲಕ್ಷ ಹಣವನ್ನು ಕೆಯುಐಡಿಎಫ್ಸಿಗೆ ನೀಡಿದ್ದು, 90 ಕೋಟಿ ಬಾಕಿ ಇದೆ. ಅಲ್ಲದೆ ಕುಡಿಯುವ ನೀರು ಸರಬರಾಜು ಇಲಾಖೆಗೆ 24 ಕೋಟಿ ಬಾಕಿ ಕೊಡುವುದಿದೆ ಎಂದು ಪೌರಾಯುಕ್ತರು ಸಭೆಯ ಗಮನಕ್ಕೆ ತಂದರು.  

ಬಿಣಗಾ, ಬೈತಖೋಲ್ ದಲ್ಲಿ ಬಹುತೇಕ ಜನ ನೀರಿನ ಕರ ತುಂಬಿಲ್ಲ ಎಂದು ಸಭೆಗೆ ತಿಳಿಸಲಾಯಿತು. ಆಗ ಸದಸ್ಯ ರಾಜೇಶ್ ಮಾಜಾಳಿಕರ್ ಕಾನೂನು ಪ್ರಕಾರ ನೋಟೀಸ್ ನೀಡಿ, ನಳದ ಸಂಪರ್ಕ ಕಟ್ ಮಾಡಿ ಎಂದರು. ಇದಕ್ಕೆ ಸಭೆ ಸಮ್ಮತಿಸಿತು. 35 ಕೋಟಿ ಅಮೃತ 2.0 ಯೋಜನೆಗೆ ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು.ಅಕ್ರಮಕಟ್ಟಡ, ಆಸ್ತಿ ಗಳಿಗೆ ಬಿ ಖಾತೆ ಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಭೆಗೆ ಅಧ್ಯಕ್ಷ ರವಿರಾಜ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ವೇದಿಕೆಯಲ್ಲಿದ್ದರು. ಸದಸ್ಯೆ ರುಕ್ಮಿಣಿ ಗೌಡ, ಸದಸ್ಯ ಸಂದೀಪ ತಳೆಕರ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಶ್ವೇತ ನಾಯ್ಕ, ಅನು ಕುಬಾಡೆ, ರೋಶನಿ ಮಾಳ್ಸೆಕರ್,ಶಿಲ್ಪಾ , ಬಾಡಕರ್ ಸೇರಿದಂತೆಬಹುತೇಕ ಸದಸ್ಯರು ವಿಶೇಷ ಸಭೆಗೆ ಹಾಜರಾಗಿದ್ದರು.