ಚಿರತೆ ದಾಳಿಗೆ 6 ಕುರಿಗಳು ಬಲಿ : ಐದು ವರ್ಷದ ನಂತರ ಮತ್ತದೇ ಚಿರತೆ ಭಯ : ಬೋನು ಅಳವಡಿಸಿ, ಸೆರೆ ಹಿಡಿಯಲು ಆಗ್ರಹ
ಕಂಪ್ಲಿ:13. ತಾಲೂಕಿನ ಸೋಮಲಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿಗೆ 6 ಕುರಿಗಳು ಬಲಿಯಾಗಿರುವುದು ಕಂಡು ಬಂದಿದೆ. ಇಲ್ಲಿನ ದೇವಲಾಪುರ ಗ್ರಾಪಂಯ ಸೋಮಲಾಪುರ ಗ್ರಾಮದ ಗಂಗಮ್ಮ ತೋಟದ ಬಳಿಯಲ್ಲಿ ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿದೆ. ಈ ದಾಳಿಗೆ ಆರು ಕುರಿಗಳು ಮೃತಪಟ್ಟಿದ್ದು, ಇನ್ನೂ 7 ಕುರಿಗಳು ಗಾಯಗೊಂಡಿರುವುದು ತಿಳಿದು ಬಂದಿದೆ. ಎನ್.ಪಂಪಣ್ಣ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ.
ಇಲ್ಲಿನ ಸೋಮಲಾಪುರ ಹೊರವಲಯದಲ್ಲಿ ನಡೆಸಿದ ಚಿರತೆ ದಾಳಿಯಿಂದ ಈ ಭಾಗದ ರೈತರ ಹಾಗೂ ಕುರಿಗಾಯಿಗಳಿಗೆ ಮತ್ತು ಸಾರ್ವಜನಿಕರಲ್ಲಿ ಭಯದ ಆತಂಕ ಮನೆ ಮಾಡಿದೆ. ಕಳೆದ 2018ರ ಡಿಸೆಂಬರ್ ತಿಂಗಳಲ್ಲಿ ನರಭಕ್ಷಕ ಚಿರತೆ ದಾಳಿಗೆ ಸೋಮಲಾಪುರ, ದೇವಲಾಪುರದ ಎರಡು ಮಕ್ಕಳು ಬಲಿಯಾಗಿದ್ದರು. ಆದರೆ, ಐದು ವರ್ಷದ ನಂತರ ಚಿರತೆ ದಾಳಿಗೆ ಕುರಿಗಳು ಬಲಿಯಾಗಿದ್ದು, ಮತ್ತೇ ಜನರಲ್ಲಿ ಭಯದ ವಾತಾವರಣ ಸೃಷ್ಠಿಸಿದೆ.
ಕುರಿ ಮಾಲೀಕರಿಗೆ ನಷ್ಟ ಪರಿಹಾರ ನೀಡಬೇಕು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಒಂದೆರಡು ಬೋನು ಅಳವಡಿಸಿ, ಚಿರತೆ ಸೆರೆ ಹಿಡಿದು, ಬೇರೆಡೆ ಸಾಗಿಸಬೇಕೆಂಬ ಆಗ್ರಹವಾಗಿದೆ. ಗ್ರಾಪಂ ಸದಸ್ಯ ಸೋಮಲಾಪುರ ವಿ.ಮಾರೇಶ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಗ್ರಾಮದ ಗಂಗಮ್ಮ ತೋಟದ ಬಳಿಯಲ್ಲಿರುವ ಕುರಿ ಹಟ್ಟಿಗೆ ಗುರುವಾರ ಸಂಜೆ 5:45 ಸುಮಾರಿಗೆ ಚಿರತೆ ದಾಳಿ ಮಾಡಿದೆ. ಹಟ್ಟಿಯಲ್ಲಿರುವ ನೂರು ಕುರಿಗಳಲ್ಲಿ 6 ಕುರಿಗಳನ್ನು ಕೊಂದು ಹಾಕಿದೆ. ಮತ್ತು 7ಕುರಿಗಳಿಗೆ ಕಚ್ಚಿ ಗಾಯಗೊಳಿಸಿದೆ.
ಇಲ್ಲಿನ ಕುರಿಗಳ ಕಿರುಚಾಟ ಕೇಳಿದ ತಕ್ಷಣ ಅಲ್ಲಿದ್ದ ಎನ್.ಪಂಪಣ್ಣ ಹಾಗೂ ಜನರು ಓಡಿ ಬಂದು, ಶಿಳ್ಯೆ, ಕೇಕ್ ಹೊಡೆದು, ಓಡಿಸಿದ್ದಾರೆ. ಇಲ್ಲಿನ ಸುಗ್ಗೇನಹಳ್ಳಿ ಕಡೆಗೆ ಚಿರತೆ ಓಡಿ ಹೋಗಿದೆ. ಎನ್.ಪಂಪಣ್ಣ ಅವರ ಕುರಿಗಳಾಗಿದ್ದು, ದಾಳಿಗೆ ಲಕ್ಷಾಂತರ ನಷ್ಟವಾಗಿದ್ದು, ಕೂಡಲೇ ಪರಿಹಾರ ಒದಗಿಸಬೇಕು. ಈ ಭಾಗದಲ್ಲಿ ಬೋನ್ ಅಳವಡಿಸಿ, ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ಡಿ.002 ಮತ್ತು 02ಎ: ತಾಲೂಕಿನ ಸೋಮಲಾಪುರದ ಹೊರವಲಯದಲ್ಲಿ ಚಿರತೆ ದಾಳಿಗೆ 6 ಕುರಿಗಳು ಬಲಿಯಾಗಿರುವುದು ಕಂಡು ಬಂತು.