49ನೇ ಶಿವಸ್ಪೂರ್ತಿ ಮಹಾಶಿವರಾತ್ರಿ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ 24 : ಇಲ್ಲಿಯ ಮಂಗಳವಾರ ಪೇಟೆಯ ಮುದಿಮಾರುತಿ ದೇವಸ್ಥಾನದಲ್ಲಿ 49ನೇ ಶಿವಸ್ಪೂರ್ತಿ ಮಹಾಶಿವರಾತ್ರಿ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ. 26ರಂದು ಆಯೋಜಿಸಲಾಗಿದೆ.1976 ರಿಂದ ಇಲ್ಲಿಯ ವರೆಗೆ ಪ್ರತಿ ಶಿವರಾತ್ರಿ ನಿಮಿತ್ತ ಅಹೋರಾತ್ರಿ ಸಂಗೀತೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, ಈ ಬಾರಿ ಫೆ. 26ರ ಬುಧವಾರ ಸಂಜೆ 6 ರಿಂದ ಬೆಳಗಿನ ವರೆಗೆ ಅಹೋರಾತ್ರಿ ಸಂಗೀತೋತ್ಸವ ಶುರುವಾಗಲಿದೆ.
ಸಂಜೆ 6ಕ್ಕೆ ಆರಂಭದಲ್ಲಿ ಗುರುರಾಜ ಭಜನಾ ಮಂಡಳಿ, ಅನನ್ಯ ಪಾಮಡಿ, ನಾದಶಿವ ಸಂಗೀತ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ, ಕಲಕೇರಿ ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳು, ಗದಗ ಪ್ರಸಾದ ಸುತಾರ, ರಟ್ಟಿಹಳ್ಳಿ ಪವನಕುಮಾರ ಅವರಿಂದ ಸುಗಮ ಸಂಗೀತ ಹಾಗೂ ಹುಬ್ಬಳ್ಳಿಯ ಶ್ವೇತಾ ಗಂಡಮಾಲಿ ಮತ್ತು ರಾಯಚೂರಿನ ವರದೇಂದ್ರ ಗಂಗಾಖೇಡ ಅವರಿಂದ ದಾಸವಾಣಿ ನಡೆಯಲಿದೆ.
ಇದಾದ ಬಳಿಕ ಹಿರಿಯ ಹಿಂದೂಸ್ತಾನಿ ಗಾಯಕ, ಪದ್ಮಶ್ರೀ ಪಂ.ಎಂ. ವೆಂಕಟೇಶಕುಮಾರ, ಹಿರಿಯ ಸಿತಾರ ವಾದಕ ಡಾ.ಪಂ. ಮಲ್ಲಿಕಾರ್ಜುನ ತರ್ಲಗಟ್ಟಿ ಹಾಗೂ ಗಾಯಕ, ಗದಗನ ವೆಂಕಟೇಶ ಅಲ್ಕೋಡ ಅವರಿಗೆ ಸಾಧಕ ಶಿವ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇನ್ನು, ಸಂಗೀತ ಕ್ಷೇತ್ರವನ್ನು ಪೋಷಣೆ ಮಾಡುವ ಇಬ್ಬರಿಗೆ ಕಲಾ ಪೋಷಕ ಸಾಧಕ ಶಿವ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಬಾರಿ ಪ್ರಸೂತಿ ತಜ್ಞರಾದ ಡಾ.ಸೌಭಾಗ್ಯ ಕುಲಕರ್ಣಿ ಮತ್ತು ಸಂಗೀತ ತಜ್ಞ ಶೀರೀಷ ಜೋಶಿ ಅವರಿಗೆ ಕೊಡಮಾಡಲಾಗುತ್ತಿದೆ. ಹಾಗೆಯೇ, ಯುವ ಸಂಗೀತಗಾರರಿಗೆ ಪ್ರೋತ್ಸಾಹಿಸಲು ಯುವ ಸಾಧಕ ಶಿವ ಪ್ರಶಸ್ತಿ ಸಹ ನೀಡಲಾಗುತ್ತಿದ್ದು, ಹುಬ್ಬಳ್ಳಿಯ ವೀಣಾ ಮಠ, ಕುಮಟಾದ ರೇಷ್ಮಾ ಭಟ್ ಹಾಗೂ ಬೆಂಗಳೂರಿನ ರುದ್ರೇಶ ಭಜಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಈ ಮೂರು ಪ್ರಶಸ್ತಿ ಪ್ರದಾನ ನಂತರದಲ್ಲಿ ಪ್ರಶಸ್ತಿ ಪುರಸ್ಕೃತರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸಂಗೀತೋತ್ಸವಕ್ಕೆ ವಾದ್ಯ ಸಹಕಾರದಲ್ಲಿ ವಾದಿರಾಜ ದಂಡಾಪೂರ, ಶ್ರೀಧರ ಮಾಂಡ್ರೆ, ಶ್ರೀಹರಿ ದಿಗ್ಗಾವಿ, ವಿಜಯಕುಮಾರ ಸುತಾರ, ದಯಾನಂದ ಸುತಾರ, ಪ್ರಸಾದ ಮಡಿವಾಳರ, ಬಸವನಗೌಡ ಪಾಟೀಲ, ದಾಮೋದರ ಪಾಮಡಿ, ವಿಕ್ರಂ ಮನ್ನಾರಿ ಹಾಗೂ ಶ್ರೀನಿವಾಸ ನಾಗರಾಳ ಸಾಥ್ ನೀಡಲಿದ್ದಾರೆ. ಕೆ.ಜಿ.ಪಾಟೀಲ, ಡಾ.ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ, ವಿನೋದ ಪಾಟೀಲ, ಹಾಗೂ ಪ್ರಮೋದ ಹೆಬ್ಬಳ್ಳಿ ಸಂವಾದಿನಿ ಸಾಥ್ ನೀಡುತ್ತಾರೆ. ಇನ್ನು, ಉಮೇಶ ಪಾಟೀಲ ಹಾಗೂ ಸಮರ್ಥ ಪಾಟೀಲ ಹಾಗೂ ಆರ್.ಎನ್. ಕುಲಕರ್ಣಿ ತಾಳದಲ್ಲಿ ಸಾಥ್ ನೀಡುತ್ತಾರೆ.
ಕಳೆದ 49 ವರ್ಷಗಳಿಂದ ವೀರಣ್ಣ ಪತ್ತಾರ ಹಾಗೂ ಸಹೋದರರು ಸ್ಥಳೀಯ ಸಂಗೀತ ಪ್ರೋತ್ಸಾಹಕರ ಸಹಕಾರದೊಂದಿಗೆ ಈ ಕಾರ್ಯ ಮಾಡುತ್ತಿದ್ದು, ಮುಂದಿನ ವರ್ಷ ಈ ಸಂಗೀತೋತ್ಸವಕ್ಕೆ ಸುವರ್ಣದ ಸಂಭ್ರಮ.