375 ರನ್ ಕಲೆ ಹಾಕಿದ ನ್ಯೂಜಿಲೆಂಡ್

New Zealand

ಹ್ಯಾಮಿಲ್ಟನ್, ನ. 30- ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಬಿ.ಜಿ ವ್ಯಾಟ್ಲಿಂಗ್ (55) ಹಾಗೂ ಡೆರ್ಲೆ ಮಿಚೆಲ್ (73) ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. 

  ಶನಿವಾರ ಎರಡನೇ ದಿನದಾಟವನ್ನು 3 ವಿಕೆಟ್ ಗೆ 173 ರನ್ ಗಳಿಂದ ಮುಂದುವರಿಸಿದ ಕಿವೀಸ್ 375 ರನ್ ಗಳಿಗೆ ಆಲೌಟ್ ಆಯಿತು. ಮೊದಲ ದಿನ ಶತಕ ಬಾರಿಸಿದ್ದ ಟಾಮ್ ಲಾಥಮ್ 105 ರನ್ ಗಳಿಗೆ ಆಟ ಮುಗಿಸಿದರು. ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನಿಕೋಲಸ್ 16 ರನ್ ಗಳಿಗೆ ಔಟ್ ಆದರು. 6ನೇ ವಿಕೆಟ್ ಗೆ ವ್ಯಾಟ್ಲಿಂಗ್ ಹಾಗೂ ಮಿಚೆಲ್ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ವ್ಯಾಟ್ಲಿಂಗ್ 192 ಎಸೆತಗಳಲ್ಲಿ 55 ರನ್ ಸಿಡಿಸಿದರು.  ಮಿಚೆಲ್ 159 ಎಸೆತಗಳಲ್ಲಿ 73 ರನ್ ಸಿಡಿಸಿದರು. ಅಂತಿಮವಾಗಿ ಆತಿಥೇಯ ನ್ಯೂಜಿಲೆಂಡ್ 375 ರನ್ ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 4, ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದರು. 

  ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಟೀಮ್ ಸೌಥಿ ಹಾಗೂ ಮ್ಯಾಟ್ ಹ್ಯಾನ್ರಿ ಒಂದೊಂದು ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ರೋರಿ ಬರ್ನ್ಸ್ (ಅಜೇಯ 24) ಹಾಗೂ ನಾಯಕ ಜೋ ರೂಟ್ (ಅಜೇಯ 6) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.