ಕಳ್ಳನ ಬಂಧನ: 18 ದ್ವಿಚಕ್ರ ವಾಹನಗಳ ವಶ

ಬೆಂಗಳೂರು, ಮೇ.27, ದುಶ್ಚಟಗಳ ದಾಸನಾಗಿ,  ಮನೆಯ ಮುಂದೆ ನಿಲ್ಲಿಸಿದ್ದ   ದ್ವಿಚಕ್ರ ವಾಹನಗಳನ್ನು  ಕಳವು ಮಾಡುತ್ತಿದ್ದ  ಚಿಕ್ಕಬಳ್ಳಾಪುರ ಮೂಲದ  ವ್ಯಕ್ತಿಯೋರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ ಆತನಿಂದ  7.20 ಲಕ್ಷ ರೂ ಮೌಲ್ಯದ ಒಟ್ಟು 18 ಸ್ಪ್ಲೆಂಡರ್ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ. ಚಿಕ್ಕಬಳ್ಳಾಪುರ ಮೂಲದ  ಶಶಿಕುಮಾರ್ ಅಲಿಯಾಸ್ ಶಶಿ (30) ಎಂದು  ಗುರುತಿಸಲಾಗಿದೆ. 
ಇದೇ ತಿಂಗಳ 15ರಂದು ಡಿಫೆನ್ಸ್ ಕಾಲೋನಿಯ ದೇವರಾಜ್ ಎಂಬುವವರು ಬೆಳಗ್ಗೆ  ತಮ್ಮ ಮನೆಮುಂದೆ ನಿಲ್ಲಿಸಿದ್ದ  ವಾಹನ ವನ್ನು ಯಾರೋ ಕಳವು ಮಾಡಿದ್ದಾರೆ ಎಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಬಂಧಿತನಿಂದ 7.20 ಲಕ್ಷ ರೂ ಮೌಲ್ಯದ ಒಟ್ಟು 18 ಸ್ಪ್ಲೆಂಡರ್ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ 2019ರಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಇಬ್ಬರೂ ಮಹಿಳೆಯರನ್ನು ವಿವಾಹವಾಗಿದ್ದ ಈತ ದುಶ್ಚಟಗಳ ದಾಸನಾಗಿದ್ದು, ದೈನಂದಿನ ಖರ್ಚಿಗಾಗಿ ವಾಹನ ಕಳವು ಮಾಡುತ್ತಿದ್ದ  ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ  ಬಾಯಿಬಿಟ್ಟಿದ್ದಾನೆ. ಆರೋಪಿ ಬಂಧನದಿಂದಾಗಿ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ 9,  ಮಾದಕನಾಯನಹಳ್ಳಿ-3, ಆರ್ ಎಂಸಿ ಯಾರ್ಡ್ -1 ಸೇರಿ ಒಟ್ಟು 13 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಇತ್ಯರ್ಥವಾಗಿವೆ.ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ  ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಉಪವಿಭಾಗದ ಎಸಿಪಿ ಎನ್.ಟಿ ಶ್ರೀನಿವಾಸ್ ರೆಡ್ಡಿ  ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.