ಗಂಡಸ್ತನ ಪ್ರದರ್ಶನ ಮಾಡುವ ಇವರಿಗೆ ಪ್ರಾಮಾಣಿಕತನ ಉಳಿಸಿಕೊಳ್ಳಬೇಕು ಎನ್ನುವುದರ ಅರಿವಿಲ್ಲವೇ? ....

ರಾಜಕೀಯ ಎಂದರೇನು? ಈ ಒಂದು ಪ್ರಶ್ನೆಯನ್ನು ಯಾರಿಗೆ ಬೇಕಾದರೂ ಕೇಳಿ. ಯಾರಿಂದಲೂ ಕೂಡ ನಿಜವಾದ ಉತ್ತರ ದೊರಕುವುದಿಲ್ಲ. ಏಕೆಂದರೆ ಎಲ್ಲರ ತಲೆಯಲ್ಲಿಯೂ ರಾಜಕೀಯ ಎಂದರೆ ಬರಿ ಮೋಸ, ಅಧಿಕಾರದ ದುರಾಸೆ, ಸ್ವಾರ್ಥ, ಮತ್ತೊಬ್ಬರನ್ನು ಮೆಟ್ಟಿ ಮೇಲೆರುವುದು ಎನ್ನುವ ಉತ್ತರವೇ ಬರುತ್ತದೆ. ನಿಜಕ್ಕೂ ಅವರು ಹೇಳುವುದರಲ್ಲಿ ಯಾವುದು ತಪ್ಪಿಲ್ಲ. ಎಲ್ಲರ ದೃಷ್ಠಿಯಲ್ಲೂ ಇಂದು ರಾಜಕೀಯ ಎನ್ನುವುದು ಹೀಗೆ ಆಗಿದೆ. ಆದರೆ ನಾನೊಬ್ಬರ ರಾಜ್ಯಶಾಸ್ತ್ರ ಉಪನ್ಯಾಸಕನಾಗಿ ಈ ಉತ್ತರವನ್ನು ಕೇಳಿದಾಗಲೊಮ್ಮೆ ಮನಸ್ಸಿಗೆ ಬೇಸರವಾಗುತ್ತದೆ. ಕಾರಣ ಒಂದು ದೇಶದ ಆಡಳಿತವೇ ಆ ದೇಶದ ರಾಜಕಾರಣವಾಗಿರುತ್ತದೆ. ಅಂದರೆ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತ ರಾಜ್ಯದ ಜನರ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಇರುವ ವ್ಯವಸ್ಥೆಯೇ ರಾಜಕೀಯವಾಗಿದೆ. ಆದರೆ ಇದನ್ನು ತಲೆಕೆಳಗಾಗಿಸಿದ ನಮ್ಮ ನಾಯಕರುಗಳು ರಾಜಕೀಯ ಎನ್ನುವುದಕ್ಕೆ ಹೊಸ ವ್ಯಾಖ್ಯಾನವನ್ನೇ ಕೊಟ್ಟುಬಿಟ್ಟಿದ್ದಾರೆ. ದೇಶವನ್ನು ಆಳುವುದಕ್ಕೆ ಅವಕಾಶ ನೀಡಿದರೆ ಅದನ್ನು ಹಾಳು ಮಾಡುವದಕ್ಕೆಂದು ಬಳಸಿಕೊಂಡು, ರಾಜಕೀಯ ಎಂದರೆ ಜನ ಮುಖ ತಿರುಗಿಸುವ, ಹೇಸಿಗೆ ಪಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ. ಅದರಲ್ಲೂ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ನಾಯಕರುಗಳು ಆಡುತ್ತಿರುವ ಆಟಗಳು ಹಾಗೂ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದಾಗಲಂತೂ ರಾಜಕಾರಣ ಎನ್ನುವುದು ಈ ದೇಶಕ್ಕೆ ಅಂಟಿದ ಶಾಪದ ಫಲವೋ? ಇಲ್ಲ ಪಾಪದ ಪಿಂಡವೋ? ಎನ್ನುವ ಹಾಗಾಗಿದೆ. ಯಾರೋ ಒಬ್ಬ ಪುಣ್ಯಾತ್ಮ ರಾಜಕಾರಣ ಎನ್ನುವ ಪದಕ್ಕೆ ಒಂದು ವಿಶಿಷ್ಟವಾದ ಅರ್ಥವನ್ನು ನೀಡಿದ್ದ ‘ರಾ’ ಎಂದರೆ ರಾಷ್ಟ್ರ ‘ಜ’ ಎಂದರೆ ಜನತೆ ‘ಕೀ’ ಎಂದರೆ ಕೀರ್ತಿ ಹಾಗೂ ‘ಯ’ ಎಂದರೆ ಯಶಸ್ಸು. ಅಂದರೆ ರಾಷ್ಟ್ರವನ್ನು ಹಾಗೂ ಜನತೆಯನ್ನು ಕೀರ್ತಿ ಮತ್ತು ಯಶಸ್ಸಿನೆಡೆಗೆ ತೆಗೆದುಕೊಂಡು ಹೋಗುವುದೇ ರಾಜಕೀಯ ಎನ್ನುವ ಅರ್ಥ ಕೊಡುತ್ತಿತ್ತು. ಆದರೆ ಇಂದು ಅದರಲ್ಲಿ ಗಣನೀಯವಾಗಿ ಬದಲಾವಣೆ ಮಾಡಿರುವ ನಮ್ಮ ನಾಯಕರುಗಳು ‘ರಾ’ ಎಂದರೆ ರಾಷ್ಟ್ರ ಎನ್ನುವುದನ್ನು ಹಾಗೂ ‘ಜ’ ಎಂದರೆ ಜನತೆ ಎನ್ನುವುದನ್ನು ಹಾಗೇ ಉಳಿಸಿಕೊಂಡು ‘ಕಿ’ ಮತ್ತು ‘ಯ’ ಪದಗಳನ್ನು ಬದಲಿಸಿ ಕಿತ್ತುತಿಂದು ಯಮಲೋಕಕ್ಕೆ ಅಟ್ಟುವುದು ಎಂದಾಗಿಸಿದ್ದಾರೆ. ಅಂದರೆ ರಾಷ್ಟ್ರ ಹಾಗೂ ಜನತೆಯನ್ನು ಕಿತ್ತುತಿಂದು ಯಮಲೋಕಕ್ಕೆ ಅಟ್ಟುವ ವ್ಯವಸ್ಥೆಯೇ ರಾಜಕಾರಣ ಎನ್ನುವಂತೆ ಮಾಡಿದೆ. ಅದರಲ್ಲೂ ಪ್ರಸ್ತುತ ನವ ನಾಯಕರುಗಳು ಆಡುತ್ತಿರುವ ನವರಂಗಿ ಆಟದಿಂದಾಗಿ ಇಡೀ ರಾಜಕೀಯ ವ್ಯವಸ್ಥೆಯೇ ಅಕ್ಷರಶಃ ಹಾದರದ ಕೊಂಪೆಯಾಗಿ ಬದಲಾಗುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ. 

ಪ್ರತಿ ಬಾರಿ ಏನಾದರೂ ಒಂದು ಹೊಸತಾದ ವಿಚಾರವನ್ನು ಎತ್ತಿಕೊಂಡು ಬರುತ್ತಿದ್ದ ಈ ಪುಣ್ಯಾತ್ಮ ಈ ವಾರವೇಕೆ ಹೀಗೆ ಕೊರೆಯುತ್ತಿದ್ದಾನೆ ಎನ್ನುವ ಭಾವನೆ ನಿಮ್ಮಲ್ಲಿ ಮೂಡುವ ಮುನ್ನವೇ ನೇರವಾಗಿ ಹೇಳಿ ಬಿಡುತ್ತೇನೆ. ರಾಜ್ಯವನ್ನು ಕಾಯುತ್ತೇನೆ, ದೇಶವನ್ನು ಕಟ್ಟುತ್ತೇನೆ ಎಂದು ಹೇಳಿ ಅಧಿಕಾರದ ಗದ್ದುಗೆಯನ್ನು ಹಿಡಿದಿರುವ ರಾಜಕಾರಣಿಗಳು ಇಂದು ತಾವು ಮಾಡಬೇಕಾದ ಕಾರ್ಯವನ್ನು ಬಿಟ್ಟು, ನಾಲಿಗೆಯನ್ನು ಹರಿ ಬಿಡುತ್ತ, ಅನಾಗರೀಕತೆ ಪ್ರದರ್ಶಿಸುತ್ತಿದ್ದಾರೆ. ಯಾರಿಂದಾಗಿ ಆಯ್ಕೆ ಆಗಿ ಬಂದಿದ್ದಾರೋ ಅವರ ಎದುರೇ ತಮ್ಮ ಹೇಯ ಮನಸ್ಸನ್ನು ತೋರಿಸಿಕೊಳ್ಳುವ ಮೂಲಕ ರಾಜಕಾರಣಿಗಳು ಎಂದರೆ ನಾವೇ ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಸುಸಂಸ್ಕೃತರು ವಿದ್ಯಾವಂತರೂ ಎಂದು ತಿಳಿದು ಅವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಮಾತೆತ್ತಿದರೆ ಪುಟಗೋಸಿ, ಗಂಡಸ್ತನ ಎನ್ನುವ ಪದಗಳನ್ನು ಪ್ರಯೋಗ ಮಾಡುತ್ತಾರೆಯೆ ವಿನಃ ಮತ ಹಾಕಿದ ಜನಗಳಿಗಾಗಿ ನಾವೇನು ಮಾಡಬೇಕು ಎಂದುಕೊಂಡಿದ್ದೇವೆ ಎನ್ನುವ ಒಂದೇ ಒಂದು ಅಭಿವೃದ್ಧಿಯ ಮಾತುಗಳಿಲ್ಲ. ಯಾವ ಕಾರಣಕ್ಕಾಗಿ ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ ಎನ್ನುವುದರ ಪರಿವೆಯೇ ಇಲ್ಲದೆ ಬಾಯಿಗೆ ಬಂದಂತೆ ಹರಟುತ್ತಾರೆ. ವೇದಿಕೆ ಸಿಕ್ಕರೆ ಸಾಕು ಮೈಕಾಸುರನ ಮುಂದೆ ರಾವಣಾಸುರನಂತೆ ಬುಜಬಲದ ಪರಾಕ್ರಮಕ್ಕೆ ಪಂತಾಹ್ವಾನ ನೀಡುತ್ತಾರೆ. ಆದರೆ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಯಾರಿಂದ ಏನಾಗಬೇಕಿದೆ ಎನ್ನುವುದನ್ನು ಯಾವತ್ತೂ ಮಾತನಾಡುವುದಿಲ್ಲ. ಹೀಗಾಗಿ ರಾಜಕೀಯ ಎನ್ನುವುದು ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿದೆ. ಅದರಲ್ಲೂ ಸುಸಂಸ್ಕೃತರು ಹಾಗೂ ಜ್ಞಾನಿಗಳು ಈ ರಾಜಕಾರಣದ ಸಹವಾಸವೇ ಬೇಡ ಎಂದುಕೊಂಡು ದೂರ ಉಳಿಯುತ್ತಿದ್ದಾರೆ. ಹೀಗಾಗಿಯೇ ರಾಜಕೀಯ ಎನ್ನುವುದು ಇಂದು ಪುಂಡ ಪುಡಾರಿಗಳ ದಂಡಾಗಿ ಹಾಗೂ ಅಜ್ಞಾನಿಗಳ ಆಗರವಾಗಿ ನಿರ್ಮಾಣವಾಗುತ್ತಿದೆ. ಇದನ್ನು ಕಂಡೇ ಪ್ರಸ್ತುತ ಹೆತ್ತವರು ತಮಗೆ ಹುಟ್ಟುವ ಮಕ್ಕಳನ್ನು ಕೇವಲ ಸರ್ಕಾರಿ ನೌಕರರನ್ನಾಗಿ ಮಾಡುವುದಕ್ಕೆ ಹವಣಿಸುತ್ತಾರೆಯೇ ವಿನಃ ಸರ್ಕಾರವನ್ನು ನಡೆಸುವ ನಾಯಕರನ್ನಾಗಿ ನಿರ್ಮಾಣ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ತಮ್ಮ ಮಕ್ಕಳನ್ನು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನಾಗಿ ಮಾಡಲು ಬಯಸುತ್ತಾರೆಯೇ ವಿನಃ ರಾಜ್ಯದ ಮುಖ್ಯಮಂತ್ರಿಯನ್ನೋ ಅಥವಾ ಕೇಂದ್ರಕ್ಕೆ ಪ್ರಧಾನಮಂತ್ರಿಯನ್ನಾಗಿಯೋ ಮಾಡುವುದಕ್ಕೆ ಇಚ್ಚಿಸುವುದಿಲ್ಲ. ಏಕೆ ಎಂದು ಪ್ರಶ್ನೆ ಮಾಡಿದರೆ ಈ ಹೊಲಸು ರಾಜಕಾರಣ ನಮಗೇಕೆ ಬೇಕು? ಇದರ ಸಹವಾಸವೇ ಬೇಡ ಎಂದು ಹೇಳುತ್ತಾರೆ. ಹೊಲಸು ಎಂದು ದೂರ ಇಟ್ಟರೆ ಬದಲಾವಣೆ ಎನ್ನುವುದು ಹೇಗೆ ಸಾಧ್ಯವಾಗುತ್ತದೆ ಎನ್ನುವುದನ್ನು ಯಾವತ್ತೂ ವಿಚಾರ ಮಾಡುವುದಿಲ್ಲ. ಇದರಿಂದಾಗಿಯೇ ಇಂದು ರಾಜಕೀಯ ಕ್ಷೇತ್ರ ಮತ್ತಷ್ಟು ಅನಿಷ್ಟ ಪಿಡುಗಾಗಿ ಕಾಡುತ್ತಿದೆ. 

ಅದ್ಯಾಕೋ ಗೊತ್ತಿಲ್ಲ ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ್ದು ಹಾಗೂ ಸರ್ವರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ್ದು ಒಂದು ರೀತಿಯಲ್ಲಿ ಎಂದೂ ವಿಮೋಚನೆಯಾಗದ ಶಾಪಾಗಿ ಕಾಡುತ್ತಿದೆ ಮಾತ್ರವಲ್ಲ ಅದು ಪದೇ ಪದೇ ಸಾಬೀತಾಗುತ್ತಿದೆ. ಮೊದಲೇ ನಮ್ಮ ರಾಜ್ಯ ಕೋವಿಡ ಮಹಾಮಾರಿಯ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಲಾಕ್‌ಡೌನ್, ಸೀಲ್‌ಡೌನ್ ಎನ್ನುವ ಬಯಾನಕವಾದ ಕಾರ್ಯಾಚರಣೆಯಿಂದಾಗಿ ಆರ್ಥಿಕವಾಗಿ ಜರ್ಜರಿತವಾಗಿ ಹೋಗಿದೆ. ಹಾಗೂ ಹೀಗೂ ಕೋವಿಡ್ ಕಂಟಕದಿಂದ ರಾಜ್ಯ ಹೊರ ಬಂದಿತು ಎಂದು ಕೊಂಚ ನಿಟ್ಟುಸಿರು ಬಿಡುವುದರಲ್ಲಿ ಹೊದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎಂದು ಮತ್ತೊಮ್ಮೆ ವಕ್ಕರಿಸಿದೆ. ಮತ್ತೊಮ್ಮೆ ರಾಜ್ಯ ಸಂಕಷ್ಟಕೆ ಸಿಲುಕುವ ಮುನ್ಸೂಚನೆ ಸಿಕ್ಕದೆ. ಯಾವಾಗ ರಾಜ್ಯದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಯಿತೋ ಅದಾಗಲೇ ನಮ್ಮ ರಾಜಕಾರಣಿಗಳ ಸ್ವಾರ್ಥವೂ ಕೂಡ ಮತ್ತೊಮ್ಮೆ ಜಾಗೃತಗೊಂಡು ಬಿಟ್ಟಿತು. ಒಂದು ಮತ್ತು ಎರಡನೇ ಅಲೆಯಲ್ಲಿ ಮಾಡಿದಂತ ಎಡವಟ್ಟುಗಳು ಈ ಬಾರಿ ಏನಾದರೂ ಆದರೆ ಮತ್ತೊಮ್ಮೆ ದೇಶ ಸಾವು ನೋವಿನ ಕೂಪದಲ್ಲಿ ಬಿದ್ದು ಒದ್ದಾಡಬೇಕಾಗುತ್ತದೆ ಎನ್ನುವ ದೃಷ್ಠಿಯಿಂದ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತಂದಿತು. ಜನರು ಸೇರುವುದಕ್ಕೆ ಅವಕಾಶ ಮಾಡಿಕೊಡದೆ ಕೋವಿಡ್ ನಿಯಮಗಳನ್ನು ಪಾಲಿಸಲು ಸೂಚನೆ ನೀಡಿತು. ಪರಸ್ಥಿತಿಯನ್ನು ಅರಿತುಕೊಂಡ ಜ್ಞಾನಿಗಳು ದೇಶದ ಕಾನೂನು ಹಾಗೂ ಸರ್ಕಾರದ ಆದೇಶಗಳಿಗೆ ಗೌರವ ತೋರಿದರೆ ಎಲ್ಲವನ್ನು ಪಾಲಿಸಬೇಕಾದ ನಾಯಕರುಗಳೇ ಸರ್ಕಾರದ ಆದೇಶಗಳಿಗೆ ಸೆಡ್ಡು ಹೊಡಯಲು ಮುಂದಾದರು. ಅದರ ಜೊತೆಯಲ್ಲಿಯೇ ಕೋವಿಡ್ ಕಾವಿನ ಕಿಚ್ಚಿನಲ್ಲಿಯೇ ತಮ್ಮ ತೆನೆಯನ್ನು ಸುಟ್ಟುಕೊಳ್ಳುವುದಕ್ಕೆ ಮುಂದಾದರು. ಇದರ ಮೂಲಕವಾಗಿ ಈ ದೇಶದಲ್ಲಿ ಯಾವುದೇ ಆದೇಶಗಳು ಜಾರಿಯಾದರೂ ಕೂಡ ಅದು ಕೇವಲ ಜನ ಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಆ ಮೂಲಕವಾಗಿ ಜನಗಳಿಗೆ ನಾಯಕರುಗಳ ಮೇಲೆ ಇರುವ ನಂಬಿಕೆ ಮಣ್ಣುಪಾಲು ಮಾಡಿಬಿಟ್ಟರು. 

ಇದು ಯಾವಾಗಲೂ ಇದ್ದಿದ್ದೇ ಬಿಡಿ. ಆದರೆ ತಮ್ಮ ರಾಜಕೀಯದ ತೀಟೆಗಾಗಿ ಜನ ಸಾಮಾನ್ಯರನ್ನು ಬಲಿ ಕೊಡುವುದು ಯಾವ ಎನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮೂಡಿದ ಪ್ರಶ್ನೆ. ಅದೂ ಇರಲಿ ಇವರು ರಾಜಕಾರಣ ಮಾಡುವುದು ಯಾವ ತೆರನಾಗಿ ಎನ್ನುವುದನ್ನು ಕಂಡರಂತೂ ಅಕ್ಷರಶಃ ಅಸಹ್ಯವಾಗುವಂತೆ ಮಾಡುತ್ತಿದ್ದರೆ. ಸಭೆ ಸಮಾರಂಭಗಳನ್ನು ಮಾಡಬಾರದು ಎಂದು ಹೇಳುವ ಮಂತ್ರಿಗಳೇ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾರೆ. ಪರಸ್ಪರ ಅಂತರ ಕಾಯ್ದುಕೊಳ್ಳಿ ಎಂದು ಹೇಳುವವರೆ ಒಬ್ಬರ ಮೇಲೆ ಒಬ್ಬರಂತೆ ಕುಳಿತುಕೊಳ್ಳುತ್ತಾರೆ. ಅಷ್ಟಕ್ಕೆ ಸುಮ್ಮನಾಗದೇ ಮೈಕು ಸಿಗುತ್ತಲೇ ಉಘ್ರ​‍್ರತಾಪಿಯಂತೆ ಪ್ರಚೋದನಕಾರಿಯಾಗಿ ಮಾತನಾಡುತ್ತಾರೆ. ಮೊನ್ನೆ ನಡೆದ ಕಾರ್ಯಕ್ರಮ ಒಂದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಅವರು ವೇದಿಕೆ ಮೇಲೆ ನಿಂತುಕೊಂಡು “ಗಂಡಸ್ತನವಿದ್ದರೆ ಮಾಡಿ ತೋರಿಸಲಿ” ಎಂದು ಸವಾಲು ಹಾಕಿದರು. ತಾವು ನಿಭಾಯಿಸುವ ಖಾತೆ ಎಂತದು, ತಮ್ಮ ಮಾತುಗಳು ಹೇಗಿರಬೇಕು ಎನ್ನುವುದನ್ನು ಮರೆತು ನಾಲಿಗೆ ಹರಿ ಬಿಟ್ಟರು. ಇದರ ಮರುಕ್ಷಣವೇ ಮಾತನಾಡಿದ ಸಂಸದ ಡಿ.ಕೆ.ಸುರೇಶ ಅವರು ಕೂಡ “ಗಂಡಸ್ತನ” ಎನ್ನುವ ಪದವನ್ನು ಬಳಸಿಯೇ ಉತ್ತರ ನೀಡುವದಕ್ಕೆ ಮುಂದಾದರು. ಇಷ್ಟಕ್ಕೆ ನಿಲ್ಲದ ಇವರು ವೇದಿಕೆಯ ಮೇಲೆ ತಾವು ಏನು? ತಮ್ಮ ಸ್ಥಾನ ಏನು? ತಮಗೆ ಜನರು ಕೊಟ್ಟಿರುವ ಅಧಿಕಾರ ಏತಕ್ಕಾಗಿ? ಎನ್ನುವುದನ್ನು ಮರೆತು ಎದೆಯುಬ್ಬಿಸಿಕೊಂಡು ಟಗರುಗಳಂತೆ ಒಬ್ಬರ ಮೇಲೊಬ್ಬರು ಏರಿ ಹೋಗಿದ್ದನ್ನು ಕಂಡು ಕರ್ನಾಟಕವೇ ನಾಚಿಕೆಯಿಂದ ತಲೆ ತಗ್ಗಿಸಿತು. ಅಲ್ಲಿಂದ ಆರಂಭವಾದ ‘ಗಂಡಸ್ತನದ’ ಪುರಾಣ ಇಂದು ರಾಜ್ಯಕ್ಕೆ ರಾಜ್ಯವೇ ಲೇವಡಿ ಮಾಡಿಕೊಂಡು ನಗುವಂತೆ ಮಾಡಿದೆ ಮಾತ್ರವಲ್ಲ; ಈ ಪದಗಳನ್ನು ಇವರು ಬಳಸುವ ಪರಿ ಹಾಗೂ ಬಳಸುವ ಸ್ಥಿತಿಯನ್ನು ನೋಡಿ ಛೀ...! ಥೂ...! ಎನ್ನುತ್ತಿದ್ದಾರೆ. ಅದರಲ್ಲೂ ಮೇಕೆದಾಟು ಪಾದಯಾತ್ರೆ ಆರಂಭವಾಗುತ್ತಲೇ ಗಂಡಸ್ತನದ ಮಾತುಗಳು ಪ್ರತಿಯೊಬ್ಬರ ಬಾಯಲ್ಲೂ ಹರಿದಾಡಲು ಆರಂಭಿಸಿದವು. ರಾಜ್ಯ ಸರ್ಕಾರಕ್ಕೆ ಗಂಡಸ್ತನವಿದ್ದರೆ ಮೋದಿ ಬಳಿ ಹೋಗಲಿ ಎಂದು ಕಾಂಗ್ರೇಸ್ಸಿಗರು ಹೇಳುತ್ತಾರೆ. ಕಾಂಗ್ರೇಸ್ಸಿಗರು ನಮ್ಮ ಗಂಡಸ್ತನವನ್ನು ಪ್ರಶ್ನಿಸುವ ಬದಲು ತಮಗೆ ಗಂಡಸ್ತನವಿದ್ದಿದ್ದರೆ ತಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತಿದ್ದರು ಎಂದು ಬಿಜೆಪಿಯವರು ಹೇಳುತ್ತಾರೆ. ಕಾಂಗ್ರೇಸ್‌ನಲ್ಲಿದ್ದಾಗ ಬಿಜೆಪಿಯನ್ನು ಹಣಿದವರು ಬಿಜೆಪಿಗೆ ಸೇರಿದ ಮೇಲೆ ಕಾಂಗ್ರೇಸ್‌ನ್ನು ಹಣಿಯುತ್ತಾರೆ. ಒಬ್ಬರಿಗೊಬ್ಬರು ಗಂಡಸ್ತನವನ್ನು ಪ್ರಶಸ್ನಿಸುತ್ತಾರೆ. ಆದರೆ ಯಾರೊಬ್ಬರಿಗೂ ಈ ಪದವನ್ನು ಏಕೆ ಬಳಸುತ್ತಿದ್ದೇವೆ ಇದರ ಅರ್ಥ ಏನು ನೀಡಬಹುದು ಎನ್ನುವುದೇ ಗೊತ್ತಿಲ್ಲ. ನಿಜಕ್ಕೂ ಇಲ್ಲಿ ಗಂಡಸ್ತನದ ಪ್ರಶ್ನೆ ಓಚಿತ್ಯವೇ? ಏಕೆಂದರೆ ಗಂಡಸ್ತನ ಎನ್ನುವುದನ್ನು ಜನಸಾಮಾನ್ಯರು ಬಳಸುವುದೇ ಬೇರೆ ಸಂದರ್ಭದಲ್ಲಿ ಅದನ್ನು ಬಿಟ್ಟು ಕಂಡ ಕಂಡಲ್ಲಿ ಗಂಡಸ್ತನವನ್ನು ಬಳಸುತ್ತ ಸಾಗಿದರೆ ಬಹುಶಃ ಆ ಪದವೇ ಅರ್ಥ ಕಳೆದುಕೊಳ್ಳಬಹುದು ಎನಿಸುತ್ತದೆ. 

ನಿಜ ಹೇಳಬೇಕೆಂದರೆ ಇವರಿಗೆ ತಾವೇನು ಮಾತನಾಡುತ್ತಿದ್ದೆವೆ ಎನ್ನುವದರ ಕುರಿತಾದ ಅರಿವಿಲ್ಲ. ಆಡಳಿತ ಪಕ್ಷದ ಎದುರು ಗಂಡಸ್ತನ ಪ್ರದರ್ಶನ ಮಾಡುತ್ತಿದ್ದೇವೆ ಅವರಲ್ಲಿ ಗಂಡಸ್ತನವಿದ್ದರೆ ತಡೆಯಲಿ ನೋಡೋಣ ಎಂದು ಹೇಳುತ್ತಾರಲ್ಲ ಇವರಿಗೆ ಮಾನ ಮರ್ಯಾದೆ ಇದೆಯಾ? ಸರ್ಕಾರ ಹಾಗೂ ವಿರೋಧ ಪಕ್ಷದವರು ಪರಿಸ್ಪರ ಗಂಡಸ್ತನ ಪ್ರದರ್ಶನ ಮಾಡುವುದಕ್ಕೆ ಮುಂದಾಗುತ್ತಿದ್ದೀರಲ್ಲ ಒಮ್ಮೆಯಾದರೂ ಮತ ಹಾಕಿದ ಜನಗಳ ಎದುರಿಗೆ ನಿಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸುವುದಕ್ಕೆ ಮುಂದಾಗಿದ್ದಾರಾ ಹೇಳಿ? ಯಾವತ್ತಾದರೂ ಚುನಾವಣಾ ಪೂರ್ವದಲ್ಲಿ ಹೇಳಿದ ಮಾತುಗಳನ್ನು ಸಾಕಾರಗೊಳಿಸಿದ್ದೀರಾ ಹೇಳಿ? ಆಡಿದ ಮಾತುಗಳನ್ನು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿದ್ದಾರಾ ಹೇಳಿ? ಅಧಿಕಾರದಲ್ಲಿದ್ದಾಗ ಮಾಡದೇ ಇರುವ ಕಾರ್ಯಗಳನ್ನು ವಿರೋಧಪಕ್ಷದಲ್ಲಿದ್ದಾಗ ಮಾಡಬೇಕೆಂದು ಆಗ್ರಹಿಸುವಾಗ ತಮ್ಮ ತಪ್ಪಗಳು ಕಣ್ಣಿಗೆ ಕಾಣುವುದಿಲ್ಲವೆ ಹೇಳಿ? ದೇಶ ರಾಜ್ಯ ಸಂಕಷ್ಟದಲ್ಲಿರುವಾಗ ಸಲಹೆ ಸಹಕಾರಗಳನ್ನು ನೀಡುವುದನ್ನು ಬಿಟ್ಟು ಪ್ರತಿಭಟನೆಗೆ ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ ಹೇಳಿ? ಸರ್ಕಾರಕ್ಕೆ ಬುದ್ದಿ ಕಲಿಸುವ ಬರದಲ್ಲಿ ಜನ ಸಾಮಾನ್ಯರ ಬದುಕಿನ ಜೊತೆ ಆಟವಾಡುವುದು ಯಾವ ನ್ಯಾಯ ಹೇಳಿ? ಇವೆಲ್ಲ ಘಟನೆಗಳನ್ನು ನೋಡಿದಾಗ ಇವರುಗಳು ನಾಳೆ ನಮ್ಮ ಸಮಸ್ಯೆಗಳಿಗೆ ಸ್ಪಂಧಿಸುತ್ತಾರಾ? ಎನ್ನುವ ಪ್ರಶ್ನೆ ಪ್ರತಿಯೊಬ್ಬನ ಎದೆಯಲ್ಲೂ ಮೂಡೆ ಮೂಡುತ್ತದೆ. ಈ ಎಲ್ಲ ಘಟನೆಗಳಿಂದಲೂ ಇಂದು ರಾಜಕಾರಣ ಎನ್ನುವುದು ಕೇವಲ ಅಧಿಕಾರಕ್ಕಾಗಿ ಕಿತ್ತಾಡುವ ಜನಗಳ ಗುಂಪು ಮಾಡಿಕೊಂಡ ಒಂದು ದರಿದ್ರ ವ್ಯವಸ್ಥೆ ಎನ್ನುವಂತಾಗಿದೆ. 

ಇನ್ನೂ ಸರ್ಕಾರ ಕರ್ಫ್ಯೂಗೆ ಆದೇಶ ನೀಡುತ್ತದೆ. ಮನೆಯಿಂದ ಅನವಶ್ಯಕವಾಗಿ ಯಾರೂ ಹೊರ ಬರಬಾರದು, ಬಂದರೆ ದಂಡ ವಿಧಿಸಲಾಗುವುದು ಮತ್ತು ನಿಯಮ ಮೀರದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳುತ್ತಾರೆ. ಆದರೆ ಇದು ಕೇವಲ ಸಾಮಾನ್ಯ ಜನರಿಗೆ ಮಾತ್ರವೆ? ಏಕೆಂದರೆ ಲಾಕ್‌ಡೌನ್ ಅಥವಾ ಕರ್ಫ್ಯೂ ಜಾರಿ ಮಾಡುತ್ತಲೇ ಹೊರ ಬರುವ ಜನಗಳನ್ನು ತಡೆದು ನಿಲ್ಲಿಸುವ ಪೊಲೀಸರು ಸರ್ಕಾರದ ಆದೇಶವನ್ನು ಧಿಕ್ಕರಿಸಿ ಪಾದಯಾತ್ರೆಗೆ ಹೊರಟು ನಿಂತ ರಾಜಕೀಯ ನಾಯಕರನ್ನು ಪ್ರೀಯವೀಕ್ಷಕರಂತೆ ನಿಂತು ನೋಡುತ್ತಾರೆ. ಕರ್ಫ್ಯೂ ಆದೇಶವನ್ನು ಮೀರಿ ಹೊರ ಬರುವ ಸಾಮಾನ್ಯ ಜನಗಳನ್ನು ತಡೆದ ಬೈಕ್ ಜಪ್ತಿ ಮಾಡಿ, ಲಾಟಿ ಬೀಸುವ ಪೊಲೀಸರೆ ಪಾದಯಾತ್ರೆಗೆ ತೆರಳುವವರಿಗೆ ರಕ್ಷಣೆ ನೀಡಲು ಮುಂದಾಗುತ್ತಾರೆ. ಇದನ್ನು ಕಂಡಾಗ ಭಾರತ ಸಂವಿಧಾನ ನೀಡಿದ ಕಲಂ 14 “ಕಾನೂನಿನ ಮುಂದೆ ಸರ್ವ ಸಮಾನರು” ಎಂಬುದು ಸುಳ್ಳೇನೋ? ಎನ್ನುವ ಭಾವನೆ ಮೂಡುತ್ತದೆ. ಹೀಗಾಗಿಯೇ ಈ ದೇಶದ ಪ್ರಗತಿಗೆ ಅವಶ್ಯಕವಾಗಿ ಬೇಕಾಗಬೇಕಿದ್ದ ರಾಜಕೀಯ ಇಂದು ಹಾಳಾಗಿ, ಗೊಂದಲದ ಗೂಡಾಗಿ, ಡೊಂಗಿ ಜನಗಳ ಬೀಡಾಗಿ ಕಾಣುತ್ತಿದೆ. ಆಡಳಿತ ಪಕ್ಷವೇ ಇರಲಿ ಇಲ್ಲ ವಿರೋಧ ಪಕ್ಷವೇ ಇರಲಿ ಅದು ಮುಖ್ಯವಲ್ಲ. ಈ ದೇಶಕ್ಕಾಗಿ ಯಾರೂ ಬದುಕುತ್ತಾರೆ, ಜನರಿಗಾಗಿ ಯಾರೂ ದುಡಿಯಾತ್ತಾರೆ, ಮತ ಹಾಕಿದ ಜನಗಳ ಅಭಿವೃದ್ಧಿಗಾಗಿ ಯಾರೂ ಶ್ರಮಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಏಕೆಂದರೆ ಅಧಿಕಾರ ಎನ್ನುವುದು ಐದು ವರ್ಷಗಳಷ್ಟೆ. ಆದರೆ ದೇಶ ಎನ್ನುವುದು ಶಾಶ್ವತ. ಇಲ್ಲಿ ಐದು ವರ್ಷಗಳ ಕಿತ್ತೋಗುವ ಅಧಿಕಾರಕ್ಕಾಗಿ ದೇಶವನ್ನು ಬಲಿಕೊಡುವುದು ಒಳ್ಳೆಯದಲ್ಲ. ಅಧಿಕಾರದಲ್ಲಿದ್ದಾಗ ಮಾತ್ರ ಎಂಎಲ್‌ಎ, ಎಂಪಿ, ಶಾಸಕ, ಸಚಿವ ಎನ್ನುವ ಪದವಿಗಳಿರುತ್ತವೆ. ಆದರೆ ಯಾವುದೇ ಪದವಿಗಳಿಲ್ಲದೇ ಇದ್ದರೂ ಕೂಡ ನಾನೊಬ್ಬ ಭಾರತೀಯ ಎನ್ನುವುದು ಶಾಶ್ವತವಾಗಿರುತ್ತದೆ ಎಂಬುದನ್ನು ಮರೆಯಬಾರದು. ಆ ಕಾರಣಕ್ಕಾಗಿ ಮೊದಲು ಭಾರತೀಯತೆಯನ್ನು ಉಳಿಸಿಕೊಳ್ಳುವುದು ಅವಶ್ಯಕ. ಅನ್ನ ನೀಡಿದ ದೇಶಕ್ಕೆ, ಹೆಸರು ನೀಡಿದ ದೇಶಕ್ಕೆ, ಉಸಿರು ನೀಡಿದ ದೇಶಕ್ಕೆ, ಇವರ ಋಣಿಯಾಗಬೇಕೆ ಹೊರತು ಅಧಿಕಾರದ ಅಮಲಿಗಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಅದು ರಾಜಕಾರಣ ಇಲ್ಲದೇ ಹೋದರೆ ಬರೀ ಹಗರಣವಷ್ಟೆ. 

ದೇಶವನ್ನು ಆಳುವುದಕ್ಕೆ, ನಾಡನ್ನು ಕಟ್ಟುವುದಕ್ಕೆ, ಜನಗಳನ್ನು ರಕ್ಷಿಸುವುದಕ್ಕೆ, ಯೋಜನೆಗಳ ಅನುಷ್ಠಾನಕ್ಕೆ, ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಬೇಕಾಗಿರುವುದು ಇಚ್ಚಾಶಕ್ತಿಯೇ ಹೊರತು ಗಂಡಸ್ತನವಲ್ಲ. ಅಷ್ಟಕ್ಕೂ ಗಂಡಸ್ತನದ ಬಗ್ಗೆ ಮಾತನಾಡುತ್ತ ಪುರಷಪ್ರದಾನ ಮನಸ್ಥಿತಿಯನ್ನು ಪ್ರದರ್ಶಿಸುವುದು ಕೂಡ ಸರಿ ಅಲ್ಲ. ಈ ದೇಶದಲ್ಲಿ ಪುರುಷರಿಗೆ ಸರಿ ಸಮಾನಾಗಿ ಸಾಕಷ್ಟು ವೀರ ವನಿತೆಯರು ರಾಜ್ಯಭಾರ ಮಾಡಿದ್ದಾರೆ. ಶತ್ರುಗಳ ಎದೆ ನಡುಗಿಸಿದ್ದಾರೆ. ಅವರ ಚಂಡಿ ಅವತಾರವನ್ನು ಕಂಡು ಅದೆಷ್ಟೋ ಪುರುಷ ಪುಂಗವರು ಕೂಡ ಮಂಡಿಯೂರಿ ಕುಳಿತು ಪ್ರಾಣ ಭಿಕ್ಷೆ ಬೇಡಿದ್ದಾರೆ. ಇತಿಹಾಸದಲ್ಲಿ ಆ ಕಡೆ ಗಂಡು ಅಲ್ಲದ ಈ ಕಡೆ ಹೆಣ್ಣು ಅಲ್ಲದ ಮಲ್ಲಿಕಾಪರ್‌ನಂತವರೂ ಅಲ್ಲವುದ್ದಿನ ಖಿಲ್ಜಿಯ ಸೈನ್ಯದ ಚುಕ್ಕಾಣಿ ಹಿಡಿದಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಈ ಗಂಡಸ್ತನದ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಗಂಡಸ್ತನ ಎನ್ನುವುದು ಎಲ್ಲಿ ಪ್ರದರ್ಶಿಸಬೇಕು ಎನ್ನುವುದನ್ನು ಅರಿತುಕೊಂಡು ಅಲ್ಲಿ ಪ್ರದರ್ಶಿಸಿದರೆ ಸಾಕು. ಅದನ್ನು ಬಿಟ್ಟು ಎಲ್ಲಿಬೇಕಲ್ಲಿ ಆ ಪದವನ್ನು ಬಳಸುವುದು ನಾಗರೀಕತೆ ಎನಿಸುವುದಿಲ್ಲ. ಗಂಡಸ್ತನವಿದ್ದರೆ ಎನ್ನುವ ಪದ ಪ್ರಯೋಗ ಮಾಡುವ ಮುನ್ನ ಮತ ಹಾಕಿದ ಜನಗಳಿಗಾಗಿ ನೈತಿಕತೆಯ ಪ್ರದರ್ಶನ, ಅವರ ನಂಬಿಕೆಗಾಗಿ ಪ್ರಾಮಾಣಿಕತೆಯ ಪ್ರದರ್ಶನ ಮಾಡಿದರೆ ಸಾಕು ನೀವು ಜನ ಮಾನಸದಲ್ಲಿ ಶಾಶ್ವತವಾಗುತ್ತೀರಿ. ಅದನ್ನು ಬಿಟ್ಟು ಮಾತೆತ್ತಿದ್ದರೆ ಇಂಥ ಅನಾವಶ್ಯಕ ಪದಗಳನ್ನು ಬಳಸಿ ನಿಮ್ಮ ಮರ್ಯಾದೆಯನ್ನು ನೀವೇ ಕಳೆದುಕೊಳ್ಳುತ್ತೀರಿ. ಇನ್ನಾದರೂ ಅರ್ಥ ಮಾಡಿಕೊಂಡರೆ ಒಳಿತು. ಈ ದೇಶ ಹಾಗೂ ಈ ರಾಜ್ಯ ಬಯಸುತ್ತಿರುವುದು ನಿಮ್ಮಗಳ ಗಂಡಸ್ತನವನ್ನಲ್ಲ. ನಿಮ್ಮೆಲ್ಲರ ಪ್ರಾಮಾಣಿಕತನ ಅದನ್ನು ಮನಗಂಡು ಜನ ಸಾಮಾನ್ಯರ ಅಭ್ಯುದಯಕ್ಕಾಗಿ ಶ್ರಮಿಸಿದರೆ ಈ ರಾಜ್ಯ ಸುಂದರ ನಾಡಾಗಿ ಗುರುತಿಸಿಕೊಳ್ಳುತ್ತದೆ ಅಲ್ಲವೇ...?