ಮನುಷ್ಯ ಪ್ರೀತಿಯನ್ನೇ ತುಂಬಿಕೊಂಡಿರುವ ಒಂದೇ ರೊಟ್ಟಿ ..


ಸಾವಿರ ಸಾವಿರ ನೋವುಗಳನ್ನು  

ನಿನ್ನ ಒಂದು ನಗು ರಂಜಿಸುತ್ತಿತ್ತು 

ನೀನು ಹೊರಟು ಹೋದ ಮೇಲೆ 

ಎದೆಯಲ್ಲಿ ಒಂದೂ ಹೂ ಅರಳಲೇ ಇಲ್ಲ! 

ಸ್ಮರಣೆಯನ್ನು ಧ್ಯಾನವಾಗಿಸಿಕೊಂಡು ಬರೆಯುವ ಕವಿ ಡಾ. ಸದಾಶಿವ ದೊಡಮನಿ ಹೊರತಂದಿರುವ 'ಇರುವುದು ಒಂದೇ ರೊಟ್ಟಿ' ಎಂಬ ಕವನ ಸಂಕಲನದಿಂದ ಹೆಕ್ಕಿದ ಬಹು ಅಪರೂಪದ, ಕಾಡುವ ಸಾಲುಗಳಿವು. ಜೀವ ಜೊತೆಗಿದ್ದಾಗ ಅದರ ಮಹತ್ವ ಅರಿವಾಗದ ನಮಗೆ, ಕಣ್ಮರೆಯಾದಾಗ ಕಾಡುವ ಅದರ ಅನುಪಸ್ಥಿತಿ ಕರುಳು ಕಿವುಚುವಷ್ಟು, ಎದೆಬಿಡಿಸಿ ಕೆಡವಿದರೂ ಎಂದಿಗೂ ಮುಗಿಯಲಾರದಷ್ಟು. 'ನೆರಳಿಗೂ ಮೈಲಿಗೆ' ಎಂಬ ಮೊದಲ ಕವನ ಸಂಕಲನದ ನಂತರ ದೀರ್ಘಕಾಲದ ಮೇಲೆ ಪ್ರಕಟವಾಗುತ್ತಿರುವ ಕವನ ಸಂಕಲನವಿದು. ನಾಡಿನ ಖ್ಯಾತ ಕವಿ ಸುಬ್ಬು ಹೊಲೆಯಾರ್ ಗುರುತಿಸಿದ ಹಾಗೆ 50 ಕವಿತೆಗಳಿರುವ ಈ ಕವನ ಸಂಕಲನದಲ್ಲಿ ಪ್ರೀತಿ-ಪ್ರೇಮ, ಸಿಟ್ಟು-ಸೆಡವು, ಹಸಿವು-ಹತಾಸೆ, ದುಃಖ-ದುಮ್ಮಾನಗಳನ್ನು ತುಂಬ ಖಾಸಗಿಯಾದ ಅಂತರಂಗದ ಪುಟ್ಟ ಗೂಡಲ್ಲಿ ಭಾವಿಸಿ, ಸೂಜಿ ಮೊನೆುಂದ ಹೊಲೆದು ಕಾವ್ಯದ ಹೂರಣವನ್ನು ಹರ"ದ್ದಾರೆ. ಇಡೀ ಸಂಕಲನವನ್ನು ಒಂದೇ ವ್ಯಾಖ್ಯಾನದಲ್ಲಿ ಬಣ್ಣಿಸಬೇಕೆಂದರೆ ಇದೊಂದು 'ದುಃಖದ ಮುಗುಳ್ನಗೆ'. 

ಬರೆದ ಅನ್ನುವುದಕ್ಕಿಂತ, ಬರೆಸಿಕೊಂಡ ಕವಿತೆಗಳಿವು. ಎದೆಯಲ್ಲಿ ಹರಳುಗಟ್ಟಿದ ಜೀವನಾನುಭವಗಳು ಕಾವ್ಯವಾಗಿ ಮೂಡಿವೆ ಎಂದು ಸದಾಶಿವ ಅವರೇ ತಮ್ಮ ಮಾತುಗಳಲ್ಲಿ ಹೇಳುತ್ತಾರೆ. ಅವ್ವನ 'ರೊಟ್ಟಿ'ಗೆ ಅದೆಷ್ಟೋ ಜೀವಗಳ ಹಸಿವನ್ನು ತಣಿಸಿದ ತೃಪ್ತಿುದೆ. ಆ ಸಂತೃಪ್ತ ಜೀವಗಳ ಕಣ್ಣ ಕೃತಜ್ಞತೆಯಲ್ಲಿಯೇ ಧನ್ಯತೆ ಅನುಭವಿಸಿದ ನೆಮ್ಮದಿದೆ. ಅವ್ವ ಮತ್ತು ರೊಟ್ಟಿ ಯಾವಾಗಲೂ ಕಾಡುತ್ತಲೇ ಇರುವ ಹೋಲಿಕೆಗೆ ನಿಲುಕದ ಉಪಮೆಗಳು. ಸಂಕಲನದ ಮೊದಲ ಕವಿತೆ 'ಅವ್ವ' ಪ್ರಾರಂಭವಾಗುವುದೇ ಸುಡುಸುಡು ಕೆಂಡವ ಮಡಿಲೊಳಗೆ ಇಟ್ಟುಕೊಂಡು ಹೂವಿನಂತೆ ನಗುತಲೇ ಬಾಳ ಬಂಡಿ ಸಾಗಿಸಿದವಳ ಸಾಹಸ ಗಾಥೆಯನ್ನು ಅರಹುವುದರ ಮೂಲಕ. 'ಅವ್ವ ಅಳುಕದ ಅಕ್ಷರ' ಎನ್ನುತ್ತಲೇ ಸಹನೆಗೆ ಸಾಕ್ಷಿಯಾದವಳಿಗೆ ನಮನ ಸಲ್ಲಿಸುತ್ತಾರೆ ಕವಿ. 

ನೋವಿರಲಿ ನಲಿವಿರಲಿ 

ಅವ್ವನದು ಬೆಳದಿಂಗಳ ಹಾಡು 

ಬೆಂಕಿ-ಬಿರುಗಾಳಿಯಲಿ 

ಬದುಕು ಕುದ್ದು ಕುದ್ದು 

ವಾಲಾಡುವಾಗ 

ಅವ್ವ ನೋವಿನ ಹೊಳಿ 

ಕಣ್ಣೀರಿನ ಮಡಿ 

ತನ್ನ ಜೀವವನ್ನೇ ತೇಯ್ದು ಕರುಳ ಕುಡಿಗಳ ಜಪ್ಪಿಸಿದವಳ ಮರೆತೆನೆಂದರೂ ಮರೆಯಲ್ಹೆಂಗ? ಅದಕ್ಕೆಂದೇ ಕವಿ ಕೊನೆಯಲ್ಲಿ ಬರೆಯುತ್ತಾರೆ. 

ಇದ್ದಾಳೆ; ನಮ್ಮೊಂದಿಗೆ 

ಮುಂದೆಯೂ ಇರುತ್ತಾಳೆ 

ಕಣ್ಣ ಮುಂದಿನ ಬೆಳಕಾಗಿ 

ನೆತ್ತಿಯ ಮೇಲಿನ ನೆರಳಾಗಿ 

ಬುದ್ದನ ಸಂದೇಶಗಳಲ್ಲಿ ಜೀವನವನ್ನು ಕಟ್ಟಿಕೊಡುವ, ಪ್ರೀತಿಂದ ಬಾಳ ಸವೆಸುವ ಪರಿಪೂರ್ಣ ಅರ್ಥವಿದೆ. ಅರಿತರಲ್ಲವೇ ಬೆಳಕು? ಹಾಗೆಂದೇ ಕವಿ, "ನಾವು ನಿನ್ನನ್ನು ಅಕ್ಷರಶಃ ಮರೆತಿದ್ದೇವೆ ದೀಪ ಹಚ್ಚುವ ಸಮಯದಲ್ಲಿ ಬೆಂಕಿ ಹಚ್ಚುತ್ತಿದ್ದೇವೆ" ಎನ್ನುತ್ತಾನೆ. ನಮ್ಮ ಮಾತು, ಕೃತಿ, ವರ್ತನೆ ಎಲ್ಲವುಗಳನ್ನೂ ಮತ್ತೊಬ್ಬರು ನಿಯಂತ್ರಿಸುವ ಕಾಲಘಟ್ಟಗಳಲ್ಲಿ ಮನುಷ್ಯ ಸಿಲುಕಿದ್ದಾನೆ. ವ್ಯಕ್ತಿ ಸ್ವಾತಂತ್ರ್ಯ ಎಂಬುದು ಇನ್ನೊಬ್ಬರ ಅಡಿಯಾಳಾಗಿ ಗಹಗಹಿಸುತ್ತಿದೆ. ಕೊರಳೆತ್ತಿದರೆ ಸೆರೆಮನೆಯಲ್ಲಿ ದಿನಗಳೆವ, ಖಂಡಿಸಿದರೆ ಗುಂಡಿಗೆ ಎದೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿರುವುದರ ಕುರಿತು ಕವಿ ವಿಷಾದವಿದೆ. ತೀರಾ ನೋ"ನಲ್ಲಿ ಹೊರಬಂದ 'ಮುಂದೊಂದು ದಿನ ಇವರು' ಕ"ತೆಯ ಸಾಲುಗಳನ್ನು ಗಮನಿಸಿ. 

ಮುಂದೊಂದು ದಿನ ಇವರು 

ನಮ್ಮ ಅನುಮತಿ ಇಲ್ಲದೆ 

ಉಸಿರಾಡುತ್ತಿದ್ದಾರೆ 

ಎಂದು ಜುಲ್ಮಾನೆ ಹಾಕುತ್ತಾರೆ 

ಆಗಲೂ ನಾವು ಸುಮ್ಮನೆ ಇರುತ್ತೇವೆ 

ವಾಸ್ತವತೆಯನ್ನು ವ್ಯಂಗ್ಯ, ತಮಾಷೆ, ತಣ್ಣಗಿನ ಆಕ್ರೋಶದ ಮುಖಾಂತರ ಅಭಿವ್ಯಕ್ತಿಸಿರುವ ರೀತಿ ಈ ಕವಿತೆಯಲ್ಲಿ ಸೆಳೆಯುತ್ತದೆ. ಹದಗೆಟ್ಟು ಹೋಗಿರುವ ಮನುಷ್ಯರ ಮನಸ್ಸುಗಳ ಬಗ್ಗೆಯೇ ಇಲ್ಲಿ ಕವಿತೆಯೊಂದು ಮಾತಾಡುತ್ತದೆ. ಎಂದಿಗೂ ಹಸನಾಗದ ಮನಸುಗಳ ಮಲೀನವನ್ನು ತೊಳೆಯಲು ಪುಣ್ಯಜಲವನ್ನು ಹುಡುಕುವ ವ್ಯರ್ಥ ಪ್ರಯತ್ನವನ್ನು ಕವಿತೆ ಮಾಡುತ್ತದೆ. ಲೋಕದ ಹಿತ ಬಯಸುವುದೇ ಕಾವ್ಯದ ಗುಣ. ಸಮತೆಯ ತೋಳ ತೆಕ್ಕೆಯಲ್ಲಿ ಮಾನವಿಯತೆಯನ್ನು ಬಿಗಿದಪ್ಪುವಂತೆ ಮಾಡುವುದೇ ಕವಿತೆಯ ಧರ್ಮ.  

ಮನಸುಗಳು ತುಂಬಾ  

ಮಲೀನವಾಗಿವೆ ಗೆಳೆಯಾ 

ಶುಚಿಗೊಳಿಸಬೇಕು 

ಕೆರೆ-ಬಾವಿ ಹುಡುಕುತ್ತಿದ್ದೇನೆ 

ಪುಣ್ಯ ಜಲವಿದ್ದರೆ ನೋಡಿ ಹೇಳು 

ಕಾಯುತ್ತಿರುತ್ತೇನೆ 

ಮಗಳ ಮುದ್ದು ಗುಣಗಳ ಬಗ್ಗೆ ಬಣ್ಣಿಸುವ ಎರಡು ಕವಿತೆಗಳು ಮುಗ್ಧತೆಯೇ ಮೈತಳೆದಂತೆ ಭಾಸವಾಗುತ್ತವೆ. ಬದುಕು ಕೊರತೆಗಳ ಕಣಜದಲ್ಲಿಯೇ ಮುಗಿದು ಹೋಗುತ್ತದೆ. ಎಷ್ಟೊಂದು ಇಲ್ಲಗಳ ನಡುವೆಯೇ ಕಳೆದ ಬಾಲ್ಯ 'ಇರುವುದು ಒಂದೇ ರೊಟ್ಟಿ' ಕ"ತೆಯಲ್ಲಿ ಕಾಣಿಸಿದೆ. ಈ ಕವಿತೆಯನ್ನು ಓದಿದ ತಕ್ಷಣ ನನಗೆ ನೆನಪಾದದ್ದು; "ಬಡವರು ಸತ್ತರೆ ಸುಡುವುದಕೆ ಸೌದಿಲ್ಲ. ಒಡಲ ಕಿಚ್ಚಿನಲೇ ಹೆಣ ಬೆಂದೋ ದ್ಯಾವರೇ... ಬಡವರಿಗೆ ಸಾವು ಕೊಡಬ್ಯಾಡ" ಎಂಬ ಜನಪದೀಯರ ತ್ರಿಪದಿ. ಇದರಷ್ಟೇ ಗಾಢವಾಗಿ ಬದುಕಿನ ಒಡಲುರಿಯನ್ನು ಕಟ್ಟಿಕೊಡುವ ಕವಿತೆ ಒಂದರೆಕ್ಷಣ ಕಣ್ಣು ತೇವಗೊಳಿಸುತ್ತದೆ. 

ಮುಂಜ-ಮುಂಜಾನೆಯೇ 

ಹೊಟ್ಟೆಯಲ್ಲಿಯೇ ಸೂರ‌್ಯ ಉರಿಯುತ್ತಿದ್ದ 

ಸಲಕೆ, ಬುಟ್ಟಿ ಅಪ್ಪನ ಹೆಗಲೇರಿ ಕುಣಿಯುತ್ತಿದ್ದವು 

ಅವ್ವ ಗಿದ್ದನ ಹಿಟ್ಟಿಗಾಗಿ 

ಮನೆ-ಮನೆ ತಿರುಗುತ್ತಿದ್ದಳು 

ನಾವು ಖಾಲಿ ತಾಟಿಗಾಗಿ ಕಿತ್ತಾಡುತ್ತಿದ್ದೆವು! 

'ಕಟ್ಟತೇವ ನಾವು ಕಟ್ಟತೇವ ನಾವು ಕಟ್ಟೇ ಕಟ್ಟತೇವ ಕನಸು ಕಟ್ಟತೇವ ಒಡೆದ ಮನಸು ಕಟ್ಟತೇವ' ಎಂದು ಹಾಡಿದರು ಹಿರಿಯ ಕವಿ ಸತೀಶ ಕುಲಕರ್ಣಿ. ಇಲ್ಲಿ ಸದಾಶಿವ ದೊಡಮನಿ ಅವರು 'ಕಟ್ಟುವ ಮುನ್ನ...' ಎನ್ನುವ ಕವಿತೆಯಲ್ಲಿ ಏನನ್ನು ಕಟ್ಟಬೇಕು ಎಂಬುದರ ಕುರಿತು ಮಾಮಿರ್ಕವಾಗಿ ಹೇಳುತ್ತಾರೆ. 

ಮಂದಿರ-ಮಸೀದೆ 

ಗುಡಿ-ಚರ್ಚುಗಳ 

ಕಟ್ಟುವ ಮುನ್ನ 

ಕಟ್ಟಿಕೊಳ್ಳಿರೋ.... 

ನಿಮ್ಮ ಮನವ 

ಜೇನು ಗುಣವ 

'ಮುಂಚೆ ನೀನು ಹೀಗಿರಲಿಲ್ಲ ನೋವು ಹೇಳುತ್ತಿದ್ದೆ, ಕೇಳುತ್ತಿದ್ದೆ ನೊಂದ ಜೀವಕೆ ಸಾಂತ್ವಾನದ ತಾಯಾಗಿದ್ದೆ', 'ಹೋಗಿ ಬಾ ಜೀವವೇ ನೀ ಬರುವ ದಾರಿಯಲಿ ಬೆಚ್ಚಗಿನ ಭಾವಗಳ ಕಣ್ಣ ಹಣತೆ ಹಚ್ಚಿಡುವೆ', 'ಮೆನ ಕಾಯಲು ನಾು ತಂದಿದ್ದೇನೆ ಮನವ ಕಾಯಲು ಏನು ತರಲಿ', 'ನನ್ನ ಉಸಿರಿನ ಮಾತು ನಿನಗ ಅರ್ಥ ಆದಷ್ಟು ಬ್ಯಾರೆ ಯಾರಿಗರ ಅರ್ಥ ಆಕೈತೇನ ಹೇಳು', 'ಉಸಿರಿಗೆ ಒಮ್ಮೆ ಉಸಿರು ತಾಗಿಸು ಜೀವ ಮರಳುತ್ತದೆ' ಹೀಗೆ ಸಂಕಲನ ಕವಿತೆಗಳಲ್ಲಿನ ಒಂದಷ್ಟು ಸಾಲುಗಳು ಕಣ್ಣುಗಳು ಗಕ್ಕನೆ ಅವುಗಳ ಮೇಲೆ ನೆಲೆಗೊಳ್ಳಲು ಕಾರಣವಾಗುತ್ತವೆ. ವಿಭಿನ್ನ ಬಗೆಯ ಅರ್ಥ ಹೊಮ್ಮಿಸಿ ಆಲೋಚನೆಗಿಳಿಯುವಂತೆ ಮಾಡುತ್ತವೆ. ತುಂಬ ಗಾಢವಾಗಿ ತಟ್ಟುವ, ಓದಿಸಿಕೊಂಡು ಹೋಗುವ ಕವಿತೆಗಳನ್ನು ನೀಡಿದ ಡಾ. ಸದಾಶಿವ ದೊಡಮನಿ ಅವರನ್ನು ಅಭಿನಂದಿಸುವೆ.  

ಇರುವುದು ಒಂದೇ ರೊಟ್ಟಿ-ಕವನ ಸಂಕಲನ 

ಲೇಖಕರು-ಡಾ. ಸದಾಶಿವ ದೊಡಮನಿ 

ಪ್ರಕಾಶಕರು-ಚಂದ್ರಭಾಗ ಪ್ರಕಾಶನ ಬಾಗಲಕೋಟ 

ವರ್ಷ-2021  ಪುಟಗಳು-96  ಬೆಲೆ-120/-