ಲೋಕದ ಡೊಂಕನ್ನು ತಿದ್ದುವ ಸಂತೆಪ್ರಿಯನ ವಚನಗಳು

ಮುಸ್ಲಿಂ ಸಮುದಾಯದಿಂದ ಬರವಣಿಗೆ ಕ್ಷೇತ್ರಕ್ಕೆ ಕಾಲಿಟ್ಟು ಅತ್ಯಂತ ಸಂವೇದನಾಶೀಲವಾಗಿ ಬರೆಯುತ್ತಿರುವವರ ಸಾಲಿನಲ್ಲಿ ಸಂತೆಬೆನ್ನೂರು ಫೈಜ್ನಟ್ರಾಜ್ ಕೂಡ ಪ್ರಮುಖರು. ಕಥೆ, ಕವಿತೆ, ಪ್ರಬಂಧ, ಮಕ್ಕಳ ಕಥೆ, ಹೊಸ ವಚನಗಳು ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ‘ಲೋಕದ ಡೊಂಕು’ ಎಂಬ ಆಧುನಿಕ ವಚನಗಳ ಸಂಕಲನ ಪ್ರಕಟಿಸಿದ್ದಾರೆ. ‘ಹಿಂದಣ ಹೆಜ್ಜೆಗಳನರಿಯದೆ ಮುಂದಣ ದಾರಿಯ ಪಯಣ ಕಷ್ಟ ಸಾಧ್ಯ’ ಎಂಬ ಶರಣರ ಮಾತಿನಂತೆ, ವಚನ ರಚನೆ ಅಷ್ಟು ಸುಲಭದ ಮಾತಲ್ಲ ಎಂಬ ಸೂಕ್ಷ್ಮ ಪ್ರಜ್ಞೆ ಇಟ್ಟುಕೊಂಡೇ ಕೊಂಚ ಅಂಜುತ್ತ, ಅಳುಕುತ್ತಲೇ ಆಧುನಿಕ ವಚನಗಳ ಬರವಣಿಗೆಯತ್ತ ಹೊರಳಿರುವುದು ಖುಷಿಯ ಸಂಗತಿ. ‘ಸಂತೆಪ್ರಿಯ’ ಎಂಬ ಅಂಕಿತನಾಮದೊಂದಿಗೆ ಮುಖಾಮುಖಿಯಾಗುವ ಫೈಜ್ ಅವರ ಆಧುನಿಕ ವಚನಗಳು ಹಲವಾರು ಪತ್ರಿಕೆಗಳಲ್ಲಿ ಬೆಳಕು ಕಂಡಿರುವುದು ಗಮನಾರ್ಹ. ಇಲ್ಲಿನ ವಚನಗಳಲ್ಲಿ ನಿನಗೇ ನೀನೇ ಗೆಳೆಯ ಎಂಬ ಸತ್ಯ, ನೆಲ-ನಾಣ್ಯ-ನಾರಿಯ ಹಿಂದೆ ಹೋದರೆ ಆಗುವ ದುರ್ಗತಿ, ಹೊಂದಾಣಿಕೆಯ ಪಾಠ, ದೇವರನ್ನು ಕಾಣುವ ಬಗೆ, ಬದುಕಿನ ಸಾರ್ಥಕತೆಯ ಅರಿವು, ಕ್ಷಣಿಕತೆಯ ಸಾಕ್ಷಾತ್ಕಾರ, ನಡೆ-ನುಡಿಯ ಪರಿಶುದ್ಧತೆ ಎಲ್ಲವುಗಳನ್ನು ತೆರೆದಿಟ್ಟಿದ್ದಾರೆ ಫೈಜ್‌. 

ದಾದಾಪೀರ್ ನವಿಲೇಹಾಳ್ ಬೆನ್ನುಡಿಯ ಮಾತುಗಳಲ್ಲಿ ಅಭಿವ್ಯಕ್ತಿಸಿದಂತೆ ಫೈಜುಲ್ಲಾ ಅವರ ವಚನಗಳು ವಸ್ತು-ವೈವಿಧ್ಯತೆಯಿಂದಾಗಿ ಗಮನ ಸೆಳೆಯುತ್ತವೆ. ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧಗಳು ಕ್ಷುದ್ರಗೊಳ್ಳುತ್ತಿರುವಾಗ ಸಂವೇದನಾ ಶೀಲನೊಬ್ಬನ ಆತಂಕದ ಪ್ರತಿಕ್ರಿಯೆಗಳಾಗಿ ಈ ವಚನಗಳು ಮಾತನಾಡುತ್ತವೆ. ಇಲ್ಲಿನ ಅಕ್ಷರಗಳು ವ್ಯಕ್ತಿಗತ ನೋವಿನ ನೆಲೆಯನ್ನು ದಾಟಿ ಜೀವ ಸಮುದಾಯದ ಸದಾಶಯಗಳನ್ನು ಕವಿಮನಸಿನ ಮಧುರ ಯಾತನೆಯನ್ನಾಗಿಸಿದ ಶಕ್ತಿರೂಪಗಳಾಗಿವೆ. 150 ವಚನಗಳನ್ನು ಹೊಂದಿದ, ಇಂದ್ರಕುಮಾರ್ ಎಚ್‌.ಬಿ. ಅವರ ಮುಖಪುಟ ವಿನ್ಯಾಸದೊಂದಿಗೆ ಮೂಡಿಬಂದಿರುವ ಈ ಸಂಕಲನ ಮೊದಲ ನೋಟಕ್ಕೆ ಓದುಗನನ್ನು ಆಕರ್ಷಿಸುತ್ತದೆ. ಜಗದ ಒಲವಿಗೆ ಬಾಗುವ ಅಕ್ಷರ ಮೋಹಿಯಾದ ಫೈಜ್ ತಮ್ಮ ಮೊದಲನೇ ವಚನದಲ್ಲಿ ಹೀಗೆ ಗಮನ ಸೆಳೆಯುತ್ತಾರೆ. 

ನಡೆಯುವ ತನಕ ನಾಣ್ಯ 

ಓಡುವ ತನಕ ಕುದುರೆ 

ಅಡಗಿದ ಮೇಲೆ ರಟ್ಟೆಯ ಬಲ 

ಸಂಬಳ ಸೀಟೊಗೆವ 

ತುಂಡು ಬಟ್ಟೆ ನೀ ಸಂತೆಪ್ರಿಯ! 

ನನಗೆ ಈ ವಚನ, ಮತದಾನ ಚಲನಚಿತ್ರದಲ್ಲಿ ಸಿ. ಅಶ್ವಥ್ ಅವರು ಹಾಡಿರುವ ಹಾಡೊಂದನ್ನು ನೆನಪಿಸುತ್ತದೆ. ಹೊಳೆ ತುಂಬಿ ಹರಿವಾಗ/ದೊಣೆಗಾರ ದೇವರು/ಹೊಳೆಯ ದಾಟಿದ ಮ್ಯಾಲೆ/ಅವನ್ಯಾರೋ ತಮ್ಮ ಇವನ್ಯಾರೋ? ಬದುಕೆಂದರೆ ಇಷ್ಟೇ... ಉಪಯೋಗಕ್ಕೆ ಬರುವವರೆಗೆ ಮಾತ್ರ ಎಲ್ಲರೂ ನಮ್ಮವರು, ತಮ್ಮವರು ಎನ್ನುತ್ತಾರೆ. ನಿಷ್ಪ್ರಯೋಜಕನಾದಾಗ ತನ್ನವರೆನ್ನುವವರಾರಿಲ್ಲ. ಬದುಕಿನ ಮಾರ್ಮಿಕ ಸತ್ಯವನ್ನು ಬಲು ಸರಳವಾಗಿ ಹಿಡಿದಿಡುವ ಈ ವಚನ ಕಾಡುತ್ತದೆ. ಕುವೆಂಪು ಅವರು ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂದು ಕರೆ ಕೊಡುತ್ತಾರೆ. ಜಿ.ಎಸ್‌. ಶಿವರುದ್ರ​‍್ಪನವರು ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’ ಎಂದು ದೇವರನ್ನು ಗುಡಿಯೊಳಗೆ ಕಾಣುವ ವ್ಯರ್ಥ ಪ್ರಯತ್ನ ಕೈಬಿಡಲು ತಿಳಿಸುತ್ತಾರೆ. ಹಾಗಿದ್ದರೆ ದೇವರನ್ನು ಕಾಣುವ ಬಗೆ ಹೇಗೆ? ಎಂಬುದಕ್ಕೆ ಸಂಕಲನದ ಈ ವಚನ ಉತ್ತರ ನೀಡುತ್ತದೆ ಗಮನಿಸಿ. 

ಗುಡಿಯೊಳಗೆ ಕೈ ಮುಗಿದು ನಿಂತೆ 

ಮಡಿ ಮಡಿ ಮನವ 

ಉಡಿಯೊಡ್ಡಿ ಬೇಡಿದರೂ ದಕ್ಕದ ನೀನು 

ದುಡಿದ ಬೆವರ ಹನಿಯಲ್ಲಿ ದರುಶನ 

ನೀಡಿದ್ದು ಸೋಜಿಗ ಸಂತೆಪ್ರಿಯ! 

ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂದದ್ದು ಕೂಡ ಇದೇ ಅರ್ಥದಲ್ಲಿ. ಬಹಳಷ್ಟು ಸರಳವಾಗಿ ಬದುಕಿನ ತತ್ವವನ್ನು ಎದೆಯಿಂದಲೆದೆಗೆ ದಾಟಿಸುವ ಶಕ್ತಿ ಈ ವಚನಗಳಲ್ಲಿದೆ. ‘ನಿನ್ನೊಳಗಿನ ನಿನ್ನನ್ನು ನೀನು ಕಂಡುಕೊಳ್ಳದೇ ಹೋದರೆ ಉದ್ಧಾರವೆಲ್ಲಿಯದು?’ ಎಂದರು ಶರಣರು. ದೇಶ ಸುತ್ತಿದರೇನು, ಕೋಶ ಓದಿದರೇನು, ನೂರು ನದಿಗಳಲಿ ಮಿಂದೆದ್ದು ಬಂದರೇನು, ಕಲ್ಲ ದೇವರಿಗೆ ಕೈ ಮುಗಿದು ಬೇಡಿಕೊಂಡರೇನು? ನಿನ್ನ ನೀನರಿಯದೆ ಮುಕ್ತಿ ಸಿಗದೆಂದಿಗೂ ಎಂಬ ಸತ್ಯ ಮನುಷ್ಯ ಮರೆತಿದ್ದಾನೆ. ಅದನ್ನು ನೆನಪಿಸುವ ಹಾಗೆ ಇಲ್ಲಿನ ಒಂದು ವಚನ ಹೀಗೆ ಬಣ್ಣಿಸುತ್ತದೆ. 

ಪುಸ್ತಕಗಳು ನೂರು 

ಮಸ್ತಕಗಳು ಸಾವಿರಾರು 

ಯಾರು ಏನು ಓದಿದರೇನು 

ತನ್ನೊಳಗಿನ ಅಕ್ಷರವ 

ತಾ ತಿಳಿಯದಿದ್ದರೆ ನೀ 

ಚಪ್ಪಡಿ ಕೆಳಗಿನ ಕಪ್ಪೆಯಂತೆ ಸಂತೆಪ್ರಿಯ! 

ಕವಿ ದೊಡ್ಡರಂಗೇಗೌಡರು ತಮ್ಮ ಒಂದು ಭಾವಗೀತೆಯಲ್ಲಿ ಹೀಗೆ ಹೇಳುತ್ತಾರೆ, “ಏಳು-ಬೀಳು ಇರುವುದೇನೆ/ಇಲ್ಲಿ ಹುಟ್ಟಿ ಬಂದ ಮೇಲೆ/ಸುಖ-ದುಃಖ ಕಾಡೋದೇನೆ/ಉಪ್ಪು-ಖಾರ ತಿಂದ ಮೇಲೆ/ಕಷ್ಟ ಮೆಟ್ಟಿ ಸಾಗಬೇಕಯ್ಯ ಓ ಗೆಳೆಯ/ಕೈಯ ಚೆಲ್ಲಿ ಕೊರಗಬೇಡಯ್ಯ.... ಅದೆಷ್ಟು ಪರಿಪೂರ್ಣವಾದ, ಎಲ್ಲರೂ ಅರಿತುಕೊಳ್ಳಲೇಬೇಕಾದ ಕಾವ್ಯದ ಸಾಲುಗಳಲ್ಲವೆ? ಹಾಗೆಯೇ ಇಲ್ಲಿನ ವಚನವೊಂದು ಇದೇ ಧ್ವನಿಯನ್ನು ಅನುರಣಿಸುತ್ತದೆ. 

ಮುಳ್ಳ ಬೆನ್ನ ಮೇಲೆಯೇ ಗುಲಾಬಿ 

ಕೆಸರ ಸೊಂಟದ ಪಕ್ಕದಲ್ಲಿಯೇ ಕಮಲ 

ಮಣ್ಣ ಕಾಲಡಿಯಲ್ಲೇ ಅನ್ನ 

ಕಷ್ಟವೆಂದೇಕೆ ಅಳುವೆ; 

ಅದರ ಹಿಂದೆಯೇ ಇದೆ ಹಿತ 

ನಗುತ ಮುಂದೆ ಸಾಗು ಸಂತೆಪ್ರಿಯ! 

ಎಷ್ಟು ಸುಂದರವಾಗಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬುದನ್ನು ಈ ವಚನ ಅರ್ಥೈಸುತ್ತದೆ. ಈ ಜಗತ್ತಿನಲ್ಲಿ ಎಲ್ಲರೂ ಒಂದಿಲ್ಲೊಂದು ಕೊರತೆಗಳಿಂದ ನರಳುತ್ತಿದ್ದಾರೆ. ನೆಮ್ಮದಿಗಾಗಿಯೇ ಅಂಗಲಾಚುತ್ತಿದ್ದಾರೆ. ಗಾಯ ಮರೆಯಲೆಂದೇ ನಗೆ ಧರಿಸಿಕೊಂಡು ತಿರುಗುತ್ತಿದ್ದಾರೆ. ನೋವಿಲ್ಲದ, ಸಾವಿಲ್ಲದ ಒಬ್ಬರನ್ನಾದರೂ ತೋರಿಸಬಹುದೇ? ಖಂಡಿತ ಇಲ್ಲ. ಬಂದಂತೆ ಬದುಕ ನಡೆಸಬೇಕು, ಇಲ್ಲಗಳ ನಡುವೆಯೇ ಹಳಹಳಿಸುತ್ತ ಕೂರುವುದಕ್ಕಿಂತ ಇರುವುದರಲ್ಲಿಯೇ ತೃಪ್ತಿಯಿಂದಿರಬೇಕು. ಅದೇ ಭಾವವನ್ನು ಅಭಿವ್ಯಕ್ತಿಸುವ ಈ ವಚನವನ್ನು ಗಮನಿಸಿ. 

ಎದೆಯಲಿ ಬಂಡೆಯಿಟ್ಟುಕೊಂಡು 

ನಗಲಾದೀತೆ 

ಕಣ್ಣ ತುಂಬ ಕಡಲ ನೀರ ಹೊತ್ತು 

ಕೊಂಡು ಎವೆ ಮುಚ್ಚಲಾದೀತೆ 

ಇಲ್ಲಿ ಎಲ್ಲವೂ ನಂಜುಂಡರೇ ಮಾರಾಯಾ 

ನುಂಗಿ ನಡೆ 

ಶಿವ ಪಥ ಕಂಡೀತು ಸಂತೆಪ್ರಿಯ! 

‘ಮಾನವ ಕುಲಂ ತಾನೊಂದೇ ವಲಂ’ ಎಂದು ಪಂಪ ಮಹಾಕವಿ ನುಡಿದು ಯುಗಗಳೇ ಉರುಳುದಿವು. ‘ಸಬ್ ಕಾ ಮಾಲೀಕ್ ಏಕ್ ಹೈ’ ಎಂಬುದು ಬರೀ ಬಾಯಿ ಮಾತಾಯಿತೇ ವಿನಹ ಹೃದಯದ ನುಡಿಯಾಗಲಿಲ್ಲ. ‘ನಾವೆಲ್ಲರೂ ಮನುಷ್ಯರು’ ಎಂಬ ಏಕತ್ರತೆ, ಸೂತ್ರ ಕಿತ್ತ ಗಾಳಿಪಟದಂತಾಗಿದೆಯೇ ಹೊರತು ಮನಸುಗಳು ಬೆರೆಯಲಿಲ್ಲ, ಹೃದಯಗಳು ಬೆಸೆಯಲಿಲ್ಲ, ಭಾವಗಳು ಎಂದಿಗೂ ಒಂದಾಗಲೇ ಇಲ್ಲ. ಇಂದಿಗೂ ಧರ್ಮ-ಜಾತಿಯ ದಳ್ಳುರಿಯಲ್ಲಿ ದಹಿಸುತ್ತಿರುವ ಅದೆಷ್ಟೋ ಮನಸುಗಳ ಮಾತಾಗಿ ಈ ಕೆಳಗಿನ ವಚನ ಒಡಮೂಡಿದೆ. 

ನೀನು ನಾನು ಒಂದೆಂದು 

ಮಸೀದಿ ಮಂದಿರ ಇಗರ್ಜಿಗೆ ಬಂದೆ 

ನಿನ್ನ ಸುತ್ತಲ ಜನ 

ಹಳದಿ ಚಷ್ಮಾ ತೆಗೆಯದೇ 

ನನ್ನ ನೋಡಿದರು; 

ನೀ ದೂರವೇ ಉಳಿದೆ 

ನಾ ನಿನಗಾಗಿ ಈಗಲೂ 

ಅಲೆಯುತ್ತಿದ್ದೇನೆ ಕಣೋ ಸಂತೆಪ್ರಿಯ! 

ಲೋಕವನ್ನು ಸದಾ ಎಚ್ಚರಗಣ್ಣಿಂದ ನೋಡುವ ಸೂಕ್ಷ್ಮಪ್ರಜ್ಞೆಯ ಬರಹಗಾರ ಮಾತ್ರ ಇಂತಹ ಅಪರೂಪದ, ವಾಸ್ತವತೆಯ ಬೆಂಕಿಕಿಡಿಗಳಂಥ ವಚನಗಳನ್ನು ಬರೆಯಬಲ್ಲ. ಆ ಕೆಲಸವನ್ನು ಸಂತೆಬೆನ್ನೂರು ತಮ್ಮ ಆಧುನಿಕ ವಚನಗಳಲ್ಲಿ ಮಾಡಿದ್ದಾರೆ. ಒಮ್ಮೆ ಓದಲೇ ಬೇಕಾದ, ನಮ್ಮೊಳಗಿನ ಅಂಧಕಾರದ ಪೊರೆಯನ್ನು ಕಳಚಬಲ್ಲ ವಚನಗಳನ್ನು ನೀಡಿದ ಗೆಳೆಯ ಫೈಜ್ನಟ್ರಾಜ್‌ರನ್ನು ಅಭಿನಂದಿಸುವೆ.   

* * * 

ಲೋಕದ ಡೊಂಕು-ಆಧುನಿಕ ವಚನಗಳು 
ಲೇಖಕರು-ಸಂತೆಬೆನ್ನೂರು ಫೈಜ್ನಟ್ರಾಜ್ 
ಪ್ರಕಾಶಕರು-ಅಕ್ಷರ ಪ್ರಕಾಶನ ಬೆಂಗಳೂರು 
ವರ್ಷ-2021  
ಪುಟಗಳು-88 : ಬೆಲೆ-80/-