ಲೋಕದರ್ಶನ ವರದಿ
ಯಲ್ಲಾಪುರ: ಪರಿಸರ ಕಾಪಾಡುವ ಮನಃಸ್ಥಿತಿ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕುಎಂದು ಯಲ್ಲಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಸುಬ್ರಹ್ಮಣ್ಯ ಎಂ. ಹೇಳಿದರು.
ಅವರು ಇಂದು ಆನಗೋಡ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ ಬೆಂಗಳೂರು ಇವರ ಹಕ್ಕಿಗಳು ಹಾರುತಿವೆ ನೋಡಿದಿರಾ?! ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಕ್ಕಿಗಳು ಎಷ್ಟು ಪರಿಸರ ಸ್ನೇಹಿ ಆಗಿವೆ. ಹಣ್ಣುಗಳನ್ನು ತಿಂದು ಬೀಜ ಪ್ರಸಾರ ಮಾಡುವ ಮೂಲಕ ಗಿಡಮರಗಳು ನಿರಂತರವಾಗಿ ಬೆಳೆದುಕೊಂಡು ಬರುವಂತೆ ಮಾಡುತ್ತವೆ. ಹಾಗೆಯೇ ನಾವೂ ಕೂಡ ಮನೆಯಲ್ಲಿ ಹಣ್ಣುಗಳನ್ನು ತಿಂದಾದ ಮೇಲೆ ಬೀಜಗಳನ್ನು ಸಂರಕ್ಷಿಸಿ ನೆಟ್ಟು ಪರಿಸರವನ್ನು ಬೆಳೆಸಬೇಕು. ಮಕ್ಕಳಿಗೆ ಈಗಲೇ ಪಕ್ಷಿಗಳ ಕುರಿತು ಮಾಹಿತಿ ನೀಡಿ ಪರಿಸರ ಪ್ರೇಮ ಬೆಳೆಸುವಂಥ ಯೋಜನೆ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಯೋಗ್ಯವಾಗಿದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾ.ಪಂ. ಉಪಾಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ಪರಿಸರ ಸಂರಕ್ಷಣೆಯ ಕೆಲಸ ಪ್ರತಿಯೊಬ್ಬರ ಕರ್ತವ್ಯವೆಂಬ ಭಾವನೆ ಮೂಡುವುದು ಅವಶ್ಯವಾಗಿದೆ ಎಂದರು.
ಆರಂಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಸುಧಾಕರ ನಾಯಕ ಸ್ವಾಗತಿಸಿದರು. ಐಎಫ್ಎ ಗ್ರ್ಯಾಂಟಿ, ಮಕ್ಕಳ ಸಾಹಿತಿ ಗಣೇಶ ಪಿ. ನಾಡೋರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯ ಕೆ.ಟಿ. ಹೆಗಡೆ, ಶಿಕ್ಷಣ ಪ್ರೇಮಿ ಜಿ.ಜಿ. ಭಟ್ಟ ಅರಣ್ಯ ಸಿಬ್ಬಂದಿಗಳಾದ ಜಿ.ಡಿ. ನಾಯ್ಕ, ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಶಿಕ್ಷಕಿ ಕುಸುಮಾ ನಾಯಕ ವಂದಿಸಿದರು.