'ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ ಎರಡಂಕಿಗೆ ಇಳಿಕೆ'

ಬೆಂಗಳೂರು: ಬಿಜೆಪಿ ಸದನದಲ್ಲಿ ಹಾಗು ಹೊರಗಡೆ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ - ಜೆಡಿಎಸ್ ಶಾಸಕರ ಸಂಖ್ಯೆ ನೂರಕ್ಕಿಂತ ಕಡಿಮೆಯಾಗಿ ಎರಡಂಕಿಗೆ ಇಳಿಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

  ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಬಹುಮತವಿದೆ ಎಂಬುದು ಜಗತ್ತಿಗೆ ಗೊತ್ತಿದೆ. ಮೈತ್ರಿ ಪಕ್ಷಗಳ ಸಂಖ್ಯೆ 100ಕ್ಕೆ ಕುಸಿದಿದೆ. ಬಿಜೆಪಿಗೆ 107 ಶಾಸಕರ ಬೆಂಬಲವಿದೆ. ಹೀಗಿದ್ದರೂ ಮೈತ್ರಿ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ನಾಚಿಕೆಗೇಡಿನದ್ದು ಎಂದು ಹರಿಹಾಯ್ದರು.

   ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ನಡೆದುಕೊಂಡ ರೀತಿ ಪ್ರಜಾತಂತ್ರ ವ್ಯವಸ್ಥೆಗೆ ಅತ್ಯಂತ ಗೌರವ ಕೊಡುವಂತಹದ್ದು. ಆಡಳಿತ ಪಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿಯುವುದು, ಸುಳ್ಳು ಆರೋಪ ಮಾಡುವುದು ಮತ್ತು ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸುವ ಕೆಲಸ ಮಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರವೆಸಗಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್ ನವರು ಏನು ಬೇಕಾದರು ಮಾಡುತ್ತಾರೆ ಎಂದು ಕಿಡಿಕಾರಿದರು. ನಾಳೆ ಸುಪ್ರೀಂಕೋರ್ಟ ನ್ಯಾಯದ ಪರ ತೀಪು ನೀಡಲಿದೆ.

   ಬಿಜೆಪಿ ನ್ಯಾಯಬದ್ಧವಾಗಿ ನಡೆದುಕೊಂಡಿದೆ. ಇನ್ನೆರಡು ದಿನಗಳಲ್ಲಿ ಮೈತ್ರಿ ಪಕ್ಷಗಳ ಸಂಖ್ಯೆ ಇನ್ನಷ್ಟು ಇಳಿಯಲಿದೆ. ಎರಡಂಕಿಗೆ ಅವರ ಸಂಖ್ಯೆ ಇಳಿಕೆಯಾಗಲಿದೆ ಎಂದು ಭವಿಷ್ಯ ನುಡಿದರು.

  ಸರ್ಕಾರ ಸೋಮವಾರ ವಿಶ್ವಾಸಮತ ಯಾಚಿಸದಿದ್ದರೆ ಬಿಜೆಪಿಯ ಮುಂದೆ ಹಲವು ಮಾರ್ಗಗಳಿವೆ. ಸಂವಿಧಾನಾತ್ಮಕವಾಗಿ  ಹೋರಾಟ ಮಾಡುತ್ತೇವೆ, ರಾಜ್ಯಪಾಲರು, ರಾಷ್ಟ್ರಪತಿ, ಸುಪ್ರೀಂಕೋರ್ಟ ಕಡೆ ಗಮನ  ಹರಿಸುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು.

  ಬರ, ರೈತರ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು,    ರಾಷ್ಟ್ರಪತಿ ಆಳ್ವಿಕೆ ಬಂದರೂ ಕುದುರೆ ವ್ಯಾಪಾರ ನಿಲ್ಲುವುದಿಲ್ಲ. ಬಿಜೆಪಿ ಸರ್ಕಾರ ಬಂದರೆ ಮಾತ್ರ ಎಲ್ಲಕ್ಕೂ ಅಂತ್ಯ ಬೀಳುತ್ತದೆ. ಮಧ್ಯಂತರ ಚುನಾವಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತದೆ. ಆದ್ದರಿಂದ ಮಧ್ಯಂತರ ಚುನಾವಣೆಗೆ ನಮ್ಮ ವಿರೋಧವಿದೆ ಎಂದು ಸದಾನಂದ ಗೌಡ ಹೇಳಿದರು.