ರಾಯಬಾಗ 06: ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಬಿಇಒ ಬಸವರಾಜಪ್ಪ ಆರ್. ಹೇಳಿದರು.
ಬುಧವಾರ ಸಾಯಂಕಾಲ ತಾಲೂಕಿನ ಜಲಾಲಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆ ಎಸ್‌ಡಿಎಮ್‌ಸಿ ಮತ್ತು ಸ್ಥಳೀಯರ ಪ್ರೋತ್ಸಾಹದಿಂದ ಗಡಿಭಾಗದ ಕನ್ನಡ ಶಾಲೆಗಳು ಗಟ್ಟಿಯಾಗಿ ನಿಂತಿವೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಾಧನೆಗೆ ಒಳ್ಳೆಯ ವೇದಿಕೆ ಕಲ್ಪಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಟಿ.ಎಸ್.ವಂಟಗೂಡಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಬೇಕು. ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಮತ್ತು ಟಿವ್ಹಿಗಳಿಂದ ದೂರ ಇಡಬೇಕೆಂದು ಸಲಹೆ ನೀಡಿದರು.
ಶಾಲೆ ಎಸ್‌ಡಿಎಮ್‌ಸಿ ಅಧ್ಯಕ್ಷ ನಾಮದೇವ ಕಾಂಬಳೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿದ್ಯಾ ಜಗದಾಳೆ, ಉಪಾಧ್ಯಕ್ಷ ಮೌಲಾಲಿ ನದಾಫ, ಸಿಆರ್‌ಸಿ ವಿವೇಕಾನಂದ ಭೋಸಲೆ, ಮಹಾವೀರ ಪಾಟೀಲ, ವಿ.ಬಿ.ಅರಗೆ, ರಾಜು ಜಾಧವ, ಸದಾಶಿವ ಜಗದಾಳೆ, ಬಸವರಾಜ ಅವ್ವನ್ನವರ, ನಾನಾಸಾಬ ಸೋನಾರ, ಆನಂದ ಚೌಗಲಾ, ಮಲ್ಲು ಮುರಚಟ್ಟಿ, ಆನಂದ ಹವಾಲ್ದಾರ, ನಿತಿನ ದೊಡಮನಿ ಸೇರಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.
ಶಾಲೆ ಮುಖ್ಯ ಗುರುಮಾತೆ ವೀಣಾ ಬಿ.ಎಸ್. ಸ್ವಾಗತಿಸಿ, ವರದಿ ವಾಚನ ಮಾಡಿದರು.