ಸುಧಾ ಭಂಡಾರಿಯವರ ‘ಅಮ್ಮ’ ಮಕ್ಕಳ ಕಿರುಕಾದಂಬರಿ

ಸ್ವತಃ ಶಿಕ್ಷಕಿಯಾಗಿರುವ ಹಡಿನಬಾಳದ  ಶ್ರೀಮತಿ ಸುಧಾ ಭಂಡಾರಿಯವರು ಮಕ್ಕಳ ಮನಸ್ಸನ್ನು ಅರಿತವರು. ಮಕ್ಕಳ ಮನೋವಿಕಾಸಕ್ಕೆ ಎಂತಹ ಸಾಹಿತ್ಯ ಅಗತ್ಯವೆನ್ನುವುದು ಅವರಿಗೆ ಗೊತ್ತು. ಅದಕ್ಕೆ ತಕ್ಕಂತೆ ಅವರೀಗ ಮಕ್ಕಳಿಗಾಗಿ ಎರಡು ಕಿರು ಕಾದಂಬರಿಗಳನ್ನು ಒಳಗೊಂಡ "ಅಮ್ಮ" ಎಂಬ ಕೃತಿಯನ್ನು ಹೊರತಂದಿದ್ದಾರೆ.   

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ರಚನೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗುತ್ತಿಲ್ಲವಾದರೂ ಅದಕ್ಕೆ ಸಾಕಷ್ಟು ದೀರ್ಘವಾದ ಇತಿಹಾಸವಿದ್ದೇಇದೆ. ಪಂಜೆ ಮಂಗೇಶರಾಯರು, ಜಿ. ಪಿ. ರಾಜರತ್ನಂ, ದಿನಕರ ದೇಸಾಯಿ ಮೊದಲಾದ ಹಿರಿಯರಿಂದ ಸಿಸು ಸಂಗಮೇಶ, ಬಿ. ಎ. ಸನದಿ, ಬಸು ಬೇವಿನಗಿಡದ, ಆನಂದ ಪಾಟೀಲ ತಮ್ಮಣ್ಣ ಬೀಗಾರ ಮೊದಲಾದವರತನಕ ಹಲವರು ಮಕ್ಕಳ ಸಾಹಿತ್ಯ ರಚನೆ ಮಾಡಿದ್ದಾರೆ. ಈಚೆಗೆ ರಚನೆಯಾಗುತ್ತಿರುವ  ಮಕ್ಕಳ ಕವನಗಳಲ್ಲಿ ಅಂತಹ ಸತ್ವ ಕಂಡುಬರುತ್ತಿಲ್ಲವೆನ್ನುವುದೂ ಅಷ್ಟೇ ನಿಜ.   

ಮಕ್ಕಳಿಗಾಗಿ ಯಾವ ಬಗೆಯ ಸಾಹಿತ್ಯ ರಚನೆಯಾಗಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದಗತ್ಯ. ರಂಜನೆಯ ಜತೆಗೆ ವಿವಿಧ ವಿಷಯಗಳ ಪರಿಜ್ಞಾನವನ್ನೂ ಮಾಡಿಕೊಡುವಂತಹ "ಎಜ್ಯುಕೇಟಿವ್" ಆದ ಕತೆ ಕವನ ಕಾದಂಬರಿ ನಾಟಕಗಳನ್ನು ಬರೆಯುವತ್ತ ಬರೆಹಗಾರರು ಗಮನ ಹರಿಸಬೇಕಾಗಿದೆ. ಮಕ್ಕಳಿಗೆ ಸಾಹಸ ಕತೆಗಳು ಇಷ್ಟ. ಅಂತಹ ಸಾಹಸ ಕತೆಗಳೊಂದಿಗೆ ಬೇರೆ ಬೇರೆ ವಿಷಯಗಳ ಅರಿವನ್ನೂ ಉಂಟುಮಾಡಲು ಪ್ರಯತ್ನಿಸಬೇಕು.   

ಪ್ರಸ್ತುತ ಸುಧಾ ಭಂಡಾರಿಯವರ ಈ ಕಿರುಕಾದಂಬರಿ ಅಥವಾ ನೀಳ್ಗತೆ ಎನ್ನಬಹುದಾದ ಈ ಕೃತಿಯಲ್ಲಿ ಮೊದಲನೆಯದು 26 ಪುಟಗಳ "ಅಮ್ಮ" ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಕತೆಯನ್ನು ಹೊಂದಿದೆ. ಗಗನ ಎಂಬ ಹೆಸರಿನ ಬಾಲಕ ತನ್ನ ಹೆತ್ತ ತಾಯಿಯನ್ನು ಕಳೆದುಕೊಂಡಿರುತ್ತಾನೆ. ಊರಿನ ನದೀತಟದಲ್ಲಿ ಕುಳಿತು ಅವನು ಓದುತ್ತಿರುವಾಗ ಜಲದೇವತೆ ಕಾಣಿಸಿಕೊಂಡು "ನಾನೇ ನಿನ್ನ ಅಮ್ಮನೆಂದು ತಿಳಿದುಕೋ" ಎಂದು ಹೇಳುವುದರೊಂದಿಗೆ ಅವನ ಪ್ರೀತಿ ಗಳಿಸಿಕೊಂಡು  ಹಲವು ಬಗೆಯಲ್ಲಿ ಜನರು ತನ್ನನ್ನು (ನದಿಯನ್ನು) ಕಲುಷಿತಗೊಳಿಸುತ್ತಿರುವುದನ್ನು ತಿಳಿಸಿ ನಿನ್ನ ಗೆಳೆಯರೊಂದಿಗೆ ಸೇರಿಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಂತೆ ಸೂಚಿಸುತ್ತಾಳೆ. ಗಗನ ಮತ್ತು ಅವನ ಗೆಳೆಯರು ಸೇರಿ ತಮ್ಮ ಶಿಕ್ಷಕರ ಸಹಕಾರದೊಡನೆ ಸಂಬಂಧ ಪಟ್ಟವರಿಗೆ ಪತ್ರ ಬರೆದು ಈ ಬಗ್ಗೆ ಗಮನ ಸೆಳೆಯುತ್ತಾರೆ. ಮಕ್ಕಳ ಪ್ರಯತ್ನ ಯಶಸ್ವಿಯಾಗುತ್ತದೆ. ನದಿಯನ್ನು ಸ್ವಚ್ಛಗೊಳಿಸಲಾಗುತ್ತದೆ. ಎಲ್ಲರೂ ಮಕ್ಕಳ ಕಾರ್ಯ ಮೆಚ್ಚಿಕೊಳ್ಳುತ್ತಾರೆ. ಗಗನ ತನ್ನ ವಿದ್ಯಾಭ್ಯಾಸದ ನಂತರ ಸೈನ್ಯವನ್ನು ಸೇರಿ ದೇಶಸೇವೆಗೆ ಮುಂದಾಗಿ ಅಲ್ಲಿಯೂ ತನ್ನ ಆದರ್ಶವನ್ನು ಮೆರೆಯುತ್ತಾನೆ.   

ಎರಡನೆಯ ಕತೆ "ದಲಿತಕೇರಿಯ ಬೆಳಕು" ಸಹ ರಂಗಾಪುರವೆಂಬ ಹಳ್ಳಿಯ ದಲಿತ ಕೆರಿಯಲ್ಲಿ ಹುಟ್ಟಿಬೆಳೆದ   

ಹನುಮಂತು ಎಂಬ ಹುಡುಗ ವಿದ್ಯಾವಂತನಾಗಿ ವಿದೇಶದಲ್ಲಿ ಉದ್ಯೋಗ ಪಡೆದರೂ ತನ್ನ ಹಳ್ಳಿಯನ್ನು ಮರೆಯದೇ ತನ್ನ ಹಣದಿಂದಲೇ ಹಳ್ಳಿಯ ಉದ್ಧಾರಕ್ಕೆ ಶ್ರಮಿಸಿ ಎಲ್ಲರ ಪ್ರೀತಿ ಪ್ರಶಂಸೆ ಗಳಿಸುತ್ತಾನೆ.  

ಈ ಎರಡೂ ಕತೆಗಳು ಮಕ್ಕಳೆದುರು ಎರಡು ಬಗೆಯ ಆದರ್ಶಗಳನ್ನು ಇಡುವ ಮೂಲಕ ಮಕ್ಕಳ ಸಾಹಿತ್ಯ ಯಾವ ಬಗೆಯದಾಗಿರಬೇಕು ಎನ್ನುವುದನ್ನು ಸೂಚಿಸುವುದು ಗಮನಾರ್ಹ. ವಿಶೇಷವಾಗಿ ಶಿಕ್ಷಕರಾಗಿದ್ದವರು ಮಾಡಬೇಕಾದ ಕೆಲಸ ಇದು. ಶಿಕ್ಷಕರು ತಾವು ಸ್ವತಃ ಓದುವ ಅಭ್ಯಾಸ ಬೆಳೆಸಿಕೊಂಡು ಮಕ್ಕಳಲ್ಲೂ ಓದುವ ಆಸಕ್ತಿ ಬೆಳೆಸಬೇಕು. ಸಂಗಡ ಮಕ್ಕಳ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಅಗತ್ಯವಾದಂತಹ ಸಾಹಿತ್ಯ ರಚನೆಯನ್ನೂ ಮಾಡಬೇಕು. ದೇಶದ ಭವಿಷ್ಯದ ಪೀಳಿಗೆಯನ್ನು ಸಶಕ್ತವಾಗಿಸಲು ಇಂದಿನ ಮಕ್ಕಳನ್ನು ಸಿದ್ಧಪಡಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದೇ ಆಗಿದೆ.  ಸುಧಾ ಭಂಡಾರಿಯವರಲ್ಲಿರುವ ಅಂತಹ ಸಾಮಾಜಿಕ ಕಾಳಜಿ ಇತರರಿಗೂ ಪ್ರೇರಣೆ ನೀಡುವಂತಹದಾಗಿದೆ. ಅವರಿಂದ ಮುಂದೆ ಮತ್ತಷ್ಟು ಉಪಯುಕ್ತ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.   

- * * * -