ಬೇಂದ್ರೆಯವರ ಭಾವಗೀತೆಗಳಿಗೆ ಸಂಗೀತ, ನೃತ್ಯ ಕೂಡಿದ ಅಪರೂಪದ ನಾಟಕ
ಬೆಳಗಾವಿ 13 - ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ದಿ. 23 ಸೋಮವಾರದಂದು ಮುಂ. 11 ಗಂಟೆಗೆ ರಂಗಸಂಪದ ನಾಟಕ ತಂಡದವರು ‘ಗಂಗಾವತರಣ’ ನಾಟಕ ಕುರಿತಂತೆ ಮಾಧ್ಯಮಗೋಷ್ಠಿಯನ್ನು ಕರೆದಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಹಲವಾರು ವಿಷಯಗಳನ್ನು ಪತ್ರಿಕಾ ಮಿತ್ರರಾದ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ ಆದರೆ ಇಂದಿನ ಈ ಪತ್ರಿಕಾ ಗೋಷ್ಠಿ ನನಗೆ ಅತ್ಯಂತ ವಿಶೇಷ ಪತ್ರಿಕಾಗೋಷ್ಠಿಯೆಂದು ನನಗನ್ನಿಸುತ್ತಿದೆ ಏಕೆಂದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ. ರಾ. ಬೇಂದ್ರೆಯವರ ಕುರಿತಾದ ‘ಗಂಗಾವತರಣ’ ನಾಟಕ ಪ್ರದರ್ಶನ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
. ಮುಂದೆ ಮಾತನಾಡುತ್ತ ಡಾ. ಕುಲಕರ್ಣಿ, ಸುಮಾರು ಏಳೆಂಟು ವರ್ಷಗಳ ಹಿಂದೆಯೇ ‘ಗಂಗಾವತರಣ’ ನಾಟಕ ಕುರಿತು ನಾನು ಕೇಳಿದ್ದೆ. ಅದನ್ನು ಬೆಳಗಾವಿ ಜನತೆಗೆ ತೋರಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದೆ. ಈ ನಾಟಕವನ್ನು ಪ್ರಸಿದ್ಧ ನಾಟಕಕಾರ ರಾಜೇಂದ್ರ ಕಾರಂತ ಅವರು ರಂಗರೂಪಕ್ಕೆ ತಂದಿದ್ದು ಅವರದೇ ನಿರ್ದೇಶನವಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ 65 ಕಲಾವಿದರನ್ನು ಸೇರಿಸಿಕೊಂಡು ಈ ನಾಟಕದ ನೂರಾರು ಪ್ರದರ್ಶನವನ್ನು ನೀಡಿದ್ದಾರೆ. ಆದರೆ ಈ ನಾಟಕದಲ್ಲಿದ್ದ ಬಹಳಷ್ಟು ಕಲಾವಿದರು. ದೂರದರ್ಶನ ಮತ್ತು ಚಲನಚಿತ್ರವನ್ನು ಸೇರಿಕೊಂಡಿದ್ದರಿಂದ 2-3 ವರ್ಷಗಳ ಕಾಲ ಈ ನಾಟಕ ನಿಂತಿತ್ತು. ಈಗ ಮತ್ತೆ ಹೊಸ ಕಲಾವಿದರನ್ನು ಸೇರಿಸಿಕೊಳ್ಳುವುದರ ಮೂಲಕ ಆ ನಾಟಕಕ್ಕೆ ಕಾರಂತರು ಮರುಜೀವ ಕೊಟ್ಟಿದ್ದಾರೆ.
45 ಕಲಾವಿದರನ್ನು ಕೂಡಿಕೊಂಡು ಬೇರೆ ಊರುಗಳಲ್ಲಿ ಈ ನಾಟಕ ಪ್ರದರ್ಶನ ಮಾಡುವುದು ಹಣಕಾಸು ಹಾಗೂ ಬೇರೆ ಬೇರೆ ಕಾರಣದಿಂದ ಕಷ್ಟಕರವಾಗಿತ್ತು. ಬೆಂಗಳೂರು ಮತ್ತು ಮೈಸೂರು ಬಿಟ್ಟು ಬೇರೆ ಊರಗಳಲ್ಲಿ ಈ ನಾಟಕ ಪ್ರದರ್ಶನಗೊಂಡಿರಲಿಲ್ಲ. ರಂಗಸಂಪದದ ಆಪೇಕ್ಷೆ ಮೇರೆಗೆ ಅಲ್ಲದೇ ಅವರ ಒತ್ತಡಕ್ಕೆ ಒಪ್ಪಿಕೊಂಡು ಬೆಳಗಾವಿ ಬರಲು ಒಪ್ಪಿಕೊಂಡಿದ್ದಾರೆ. ಸುಮಾರು ನಾಲ್ವತ್ತು ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ, ಸಾಹಿತಿ ಡಾ. ಗೀರೀಶ ಕಾರ್ನಾಡ ಅವರು ಬೇಂದ್ರೆಯವರ ಕುರಿತಾದ ಒಂದು ಸಾಕ್ಷಿಚಿತ್ರವನ್ನು ಬಿಟ್ಟರೆ ಬೇರಾವ ನಾಟಕವಾಗಲಿ, ಚಲನಚಿತ್ರವಾಗಲಿ ಬಂದಿರಲಿಲ್ಲ. ಈಗ ರಂಗಸಂಪದ ನಾಟಕ ಮೂಲಕ ಬೇಂದ್ರೆಯವರನ್ನು ಪ್ರೇಕ್ಷಕರ ಕಣ್ಮುಂದೆ ತಂದು ನಿಲ್ಲಿಸುತ್ತಿದೆ ಎಂದು ಹೇಳಿದರು.
ವರಕವಿ ಬೇಂದ್ರೆಯವರ ಕವನ ಮತ್ತು ಜೀವನ ಘಟನೆಗಳನ್ನಾಧಿರಿಸಿದ ‘ಗಂಗಾವತರಣ’ ನಾಟಕದ ಮುಖ್ಯ ಅಂಶವೆಂದರೆ ಬೇಂದ್ರೆಯವರ ಪದ್ಯಗಳಿಗೆ ಸಂಗೀತ ಅಳವಡಿಸಿ ಅದಕ್ಕೆ ತಕ್ಕಂತೆ ನೃತ್ಯ ಸಂಯೋಜನೆ ಮಾಡಿರುವುದು. ಇದರಿಂದ ಈ ನಾಟಕವನ್ನು ಸಂಗೀತ ನೃತ್ಯ ನಾಟಕವೆಂದೂ ಕರೆಯಬಹುದು.
ನಮ್ಮ ಕವಿವರ್ಯರನ್ನು ಇತಿಹಾಸ ಮರೆಯುತ್ತಿದೆ. ಹಿರಿಯ ಸಾಹಿತಿಗಳು, ಕವಿ, ಕಲಾವಿದರನ್ನು ನಾಟಕದ ಮೂಲಕವಾದರೂ ಇಂದಿನ ಯುವಬಳಗಕ್ಕೆ ಪರಿಚಯಿಸುವ ಕೆಲಸವಾಗಬೇಕಾಗಿದ್ದು ಅದು ರಂಗಭೂಮಿಯಿಂದ ಮಾತ್ರ ಸಾಧ್ಯವೆಂಬುದಕ್ಕೆ ‘ಗಂಗಾವತರಣ’ ಸಾಕ್ಷಿಯಾಗಿದೆ. ಈ ನಾಟಕದಲ್ಲಿ ಬರುವ ಪಾತ್ರಧಾರಿಗಳಲ್ಲಿ ಕೇವಲ ಮೂರನಾಲ್ಕು ಜನರನ್ನು ಬಿಟ್ಟರೆ ಉಳಿದೆಲ್ಲ ಕಲಾವಿದರು ಕಾಲೇಜ ವಿದ್ಯಾರ್ಥಿಗಳೆಂಬುದು ವಿಶೇಷ ಅಂದರೆ ಯುವಕರನ್ನು ಮತ್ತೆ ರಂಗಭೂಮಿ ಸೆಳೆಯುತ್ತಿದೆಯನ್ನುವುದು ಸಂತೋಷ ಸಂಗತಿ ಎಂದು ಹೇಳಿದರು.
ಅಭಿಷೇಕ ಅಲಾಯ್ಸ ಸಹಯೋಗದೊಂದಿಗೆ ಬೆಳಗಾವಿಯ ರಂಗಸಂಪದ ನಾಟಕ ‘ಗಂಗಾವತರಣ’ ನಾಟಕವನ್ನು ಇದೇ ದಿ. 25 ಬುಧವಾರದಂದು ಸಾಯಂಕಾಲ 6 ಗಂಟೆಗೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ನೀಡಲಿದೆ. ಬೆಂಗಳೂರಿನ ರಂಗಸೌರಭ ನಾಟಕ ತಂಡ ರಂಗಪ್ರದರ್ಶನ ನೀಡುತ್ತಿದೆ. ರಾಜೇಂದ್ರ ಕಾರಂತರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿರುವ ಅಪರೂಪದ ನಾಟಕವಿದಾಗಿದೆ. ರಂಗಾಸಕ್ತರು ಇದರ ಸದುಪಯೋಗ ಪಡೆಯುವಂತೆ ಡಾ. ಅರವಿಂದ ಕುಲಕರ್ಣಿಯವರು ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಚಿದಾನಂದ ವಾಳಕೆ , ರಾಮಚಂದ್ರ ಕಟ್ಟಿ, ಗುರುರಾಜ ಕುಲಕರ್ಣಿ, ಎ.ಎಂ. ಕುಲಕರ್ಣಿ ಉಪಸ್ಥಿತರಿದ್ದರು.
‘ಗಂಗಾವತರಣ’ ನಾಟಕವನ್ನು ನೋಡುವಾಗ ಬೇಂದ್ರೆ ಅಜ್ಜ ನಮ್ಮ ಮೈಯಾಗ ಬರುತ್ತಾನೆ. ನಮ್ಮ ಬಾಯಲ್ಲಿ ಹಾಡಾಗಿ ಹರಿಯುತ್ತಾನೆ. ಬದುಕಿನ ತತ್ವಾದಶನ ಮಾಡಿಸುತ್ತಾನೆ. ಬೇಂದ್ರೆ ಸಾಹಿತ್ಯ ಲೋಕದ ಬೆಳಕು. ಬೆಳಗಾವಿಯ ರಂಗಸಂಪದ ಅತ್ಯಂತ ಕಷ್ಟಪಟ್ಟು ಇಂಥ ಬೆಳಕನ್ನು ಬೆಳಗಾವಿ ಕಲಾರಸಿಕರಿಗೆ ತೋರಿಸುವ ಪ್ರಯತ್ನ ಮಾಡಿದೆ. ನೀವು ಬನ್ನಿ ಇದರ ಸದುಪಯೋಗ ಪಡಿದುಕೊಳ್ಳಿ