‘ಭಾರತೀಯ ಲಲಿತ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಅಗತ್ಯವಿದೆ’

‘ಭಾರತೀಯ ಲಲಿತ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಅಗತ್ಯವಿದೆ’ ‘There is a need to take Indian fine arts to the next generation’

ಲೋಕದರ್ಶನ ವರದಿ 

ಹುಬ್ಬಳ್ಳಿ 09: ಭಾರತೀಯ ಕಲೆಗಳಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ ಹಾಗೂ ಇತರ ಲಲಿತ ಕಲೆಗಳ ಉಳಿವು, ಬೆಳವಣಿಗೆಗಾಗಿ ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಇಂತಹ ಕಾರ್ಯವನ್ನು ಇನ್ಫೋಸಿಸ್ ಫೌಂಡೇಶನ್ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಮೂಲಕ ನೆರವೇರಿಸುತ್ತಿರುವುದು ಶ್ಲಾಘನೀಯವಾದುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ.ಎಂ.ವೆಂಕಟೇಶಕುಮಾರ್ ಹೇಳಿದರು.   

ದಿ. 07 ರಂದು ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಇನ್ಫೋಸಿಸ್ ಫೌಂಡೇಶನ್ ಹಾಗೂ ಇನ್ಫೋಸಿಸ್ ಹುಬ್ಬಳ್ಳಿ ಡೆಲಿವರಿ ಸೆಂಟರ್ ಸಹಯೋಗದಲ್ಲಿ ಏರಿ​‍್ಡಸಿದ್ದ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಪಂ. ಎಂ. ವೆಂಕಟೇಶಕುಮಾರ್ ಅವರು ಭಾರತೀಯ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಅತ್ಯಗತ್ಯವಾಗಿದೆ.  ಪಠ್ಯಶಿಕ್ಷಣದ ಜೊತೆಗೆ ಕಲೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಲಲಿತಕಲೆಗಳ ಬೆಳವಣಿಗೆಯಿಂದ ನಮ್ಮ ಸಂಸ್ಕೃತಿ ಶ್ರೀಮಂತವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂ. ಬಾಲಚಂದ್ರ ನಾಕೋಡ ಮಾತನಾಡುತ್ತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಿರುವುದು ಮತ್ತು ಇಷ್ಟೊಂದು ದೊಡ್ಡ ಪ್ರಮಾಣದ ಶಾಸ್ತ್ರೀಯ ಸಂಗೀತ ಕೇಳುಗರಿರುವುದು ಹೆಮ್ಮೆಯ ಸಂಗತಿಯಾಗಿದೆ.  ಶಾಸ್ತ್ರೀಯ ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುತ್ತದೆ.  ಇಂತಹ ಸಂಗೀತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಇನ್ಫೋಸಿಸ್ ನಂತಹ ಸಂಸ್ಥೆಯ ಸಹಕಾರ ಅಗತ್ಯವಾಗಿದೆ ಎಂದರು.    

ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅವರು ಮಾತನಾಡುತ್ತ ನಮ್ಮ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಸಾಹಿತ್ಯಿಕ, ಸಾಂಸ್ಕೃತಿಕ,  ರಂಗಭೂಮಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತ ಬಂದಿದೆ.  ಸಂಗೀತದಲ್ಲಿ ಸಾಹಿತ್ಯ ಇದೆ, ಮನರಂಜನೆ ಇದೆ, ಸಂಸ್ಕೃತಿ ಇದೆ, ಸಾಮಾಜಿಕ ವ್ಯತ್ಯಾಸ ಬೆಸೆಯುವ ಕೊಂಡಿ ಇದೆ, ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಸಂಗೀತಕ್ಕಿದೆ. ಯುವ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.  ಇಂತಹ ಕಾರ್ಯದಲ್ಲಿ ಇನ್ಫೋಸಿಸ್ ಸಂಸ್ಥೆಯ ಜೊತೆಗೂಡಿ ಕೆಲಸ ಮಾಡಲು ನಮಗೆ ಹೆಮ್ಮೆ ಇದೆ ಎಂದು ಹೇಳಿದರು.   

ವೇದಿಕೆಯಲ್ಲಿ ಇನ್ಫೋಸಿಸ್ ಹುಬ್ಬಳ್ಳಿ ಕ್ಯಾಂಪಸ್ ಮುಖ್ಯಸ್ಥರಾದ ಅಲ್ಲಾಬಕ್ಷ ಅಸಾದುಲ್ಲಾ, ರೀಜನಲ್ ಹೆಡ್ ಪೆಸಿಲೀಟೀಸ್ ಗಣಪತಿ ಸಿ.ಪಿ., ಸೆಕ್ಯೂರಿಟಿ ರೀಜನಲ್ ಹೆಡ್ ಕರ್ನಲ್ ಕರಂಬೈ, ಇನ್ಫೋಸಿಸ್ ಹುಬ್ಬಳ್ಳಿ ಡಿಸಿ ಎಚ್‌.ಆರ್‌. ಅಮರನಾಥ ಬಿಸ್ವಾಸ್, ಸೀನಿಯರ್ ಇಂಜನಿಯರಿಂಗ್ ಮ್ಯಾನೇಜರ ಶಿವಾನಂದ ಕೂಡ್ಲಮಠ, ಸೊಲುಷನ್ ಆರ್ಕಿಟೆಕ್ಟ್‌ ರಾಘವೇಂದ್ರ ನಾಕೋಡ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ಪ್ರತಿಭಾನ್ವಿತ ವಿಶೇಷ ಚೇತನ ಕಲಾವಿದರಾದ ಪ್ರೇರಣಾ ಮತ್ತು ರೇಣುಶ್ರೀ ಕೊಡ್ಲಿ ಇವರು ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು.  ಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಅವರು ಗಾಯನದಲ್ಲಿ ಪ್ರಸ್ತುತಪಡಿಸಿದ ರಾಗ ಭೂಪ್ ಮತ್ತು ದಾಸವಾಣಿ ಹಾಗೂ ವಚನ ಗಾಯನವು ನೆರೆದಿದ್ದ ಪ್ರೇಕ್ಷಕರ ಹೃಣ್ಮನವನ್ನು ತಣಿಸಿತು.  ತಬಲಾದಲ್ಲಿ ಶ್ರೀಧರ ಮಾಂಡ್ರೆ, ಡಾ.ನಾಗಲಿಂಗ ಮುರಗಿ, ರಾಘವೇಂದ್ರ ನಾಕೋಡ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು.   

ಪ್ರೇಮಾ ಹೆಗಡೆ, ಸಂಜನಾ ಶಿವಪೂರಮಠ ನಿರೂಪಿಸಿದರು. ಶಿವಾನಂದ ಕೂಡ್ಲಮಠ ಸ್ವಾಗತಿಸಿದರು. ರಶ್ಮಿ ಬ್ಯಾಹಟ್ಟಿ ವಂದಿಸಿದರು.   

ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ.ಮೃತ್ಯುಂಜಯ ಶೆಟ್ಟರ, ಡಾ.ಶಶಿಧರ ನರೇಂದ್ರ, ಶ್ರೀನಿವಾಸ ಘೋಷ್, ವೀರಭದ್ರಯ್ಯ ಹಿರೇಮಠ, ರವೀಂದ್ರ ಕಾವಟೇಕರ, ಜಿ.ಜಿ.ಹಿರೇಮಠ, ವೀರಣ್ಣ ಪತ್ತಾರ, ರಮೇಶ ನಾಡಗಿರ, ಮನೋಹರ ಆರ್‌., ಡಾ.ಗುರುಬಸವ ಮಹಾಮನೆ ಮುಂತಾದವರು ಉಪಸ್ಥಿತರಿದ್ದರು.