ಕ್ಷೇತ್ರದ ಮಂಡಲಗಳ ನೂತನ ಅಧ್ಯಕ್ಷರಾಗಿ ಸಿ.ಡಿ.ಮಹಾದೇವ ಮದಿರೆ.ಕುಮಾರಸ್ವಾಮಿ
ಕಂಪ್ಲಿ 04: ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಸರಣಿ ನಡೆದರೂ, ಮಂತ್ರಿ ಆಗಲಿ, ಸರ್ಕಾರವಾಗಲೀ ಇದರ ಬಗ್ಗೆ ನಿಗಾವಹಿಸಲಿಲ್ಲ. ಆದ್ದರಿಂದ ಈಗ ಬಳ್ಳಾರಿಯಲ್ಲಿ ಬಾಣಂತಿಯರು ಆಸ್ಪತ್ರೆಯಿಂದ ವಾಪಸ್ಸು ಮನೆಗೆ ಬಾರದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತುಂಗಭದ್ರಾ ನಿಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಂಪ್ಲಿ ಮತ್ತು ಕುರುಗೋಡು ಮಂಡಲಗಳ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಡಿ.ಮಹಾದೇವ ಮತ್ತು ಮದಿರೆ ಕುಮಾರಸ್ವಾಮಿ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಇತ್ತೀಚೆಗೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ 7-8 ಜನ ಬಾಣಂತಿಯರು ಮೃತಪಟ್ಟಿದ್ದರು. ಆದರೆ, ಜಿಲ್ಲಾ ಮಂತ್ರಿ ಕಣ್ಮರೆಯಾಗಿದ್ದರು. ಇವರು ಅಧಿಕಾರದ ದಾಹದಿಂದ ಮೆರೆಯುತ್ತಿದ್ದಾರೆ. ಕಂಪ್ಲಿ ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಕಟಾವು ವೇಳೆ ಖರೀದಿ ಕೇಂದ್ರ ತೆರೆಯದೇ, ನಂತರ ಆರಂಭಿಸಿ, ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದಂತಾಗಿದೆ. ಬಳ್ಳಾರಿಯಲ್ಲಿ ಚಿಲ್ಲಿ ಮಾರುಕಟ್ಟೆ ಸ್ಥಾಪಿಸಲು ಮುಂದಾಗಿದ್ದಾಗ, ಕಾಂಗ್ರೆಸ್ ರಾಜಕಾರಣದಿಂದಾಗಿ ನೆನೆಗುದಿಗೆ ಬಿದ್ದಿದೆ. ಕಂಪ್ಲಿ ಕ್ಷೇತ್ರದಲ್ಲಿ ಕಳೆದ ಬಿಜೆಪಿ ಸರ್ಕಾರದಿಂದ ಬಂದಂತಹ ಅನುದಾನದಲ್ಲೇ ಈಗಲು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸ್ಥಳೀಯ ಶಾಸಕರು ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ರೈತರ ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಡುತ್ತಿಲ್ಲ. ಹೊಸ ಸೇತುವೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ವೇಳೆ ಅನುದಾನದೊಂದಿಗೆ ಜಿವೋ ಪ್ರತಿ ನೀಡಲಾಗಿತ್ತು. ಆದರೆ, ಇದುವರೆಗೂ ಕೆಲಸ ಆರಂಭಿಸದೇ, ಜಿವೋ ಕಾಪಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ವಾಮ ಮಾರ್ಗದಿಂದ ಪುರಸಭೆ ಅಧಿಕಾರ ಹಿಡಿದಿದ್ದಾರೆ. ಹೀಗೆ ಪ್ರತಿಯೊಂದು ಹಂತದಲ್ಲಿ ಕಾಂಗ್ರೆಸ್ ಹಣ ಮತ್ತು ತೋಳ್ ಬಲದಿಂದ ಅಧಿಕಾರಿಗಳನ್ನು ಹಿಡಿಯುವ ಪ್ರವೃತಿ ಹೊಂದಿದ್ದಾರೆ. ಆದ್ದರಿಂದ ಬರುವ ದಿನದಲ್ಲಿ ಬಿಜೆಪಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಜವಾಬ್ದಾರಿ ನೂತನ ಮಂಡಲ ಅಧ್ಯಕ್ಷರ ಕೈಯಲ್ಲಿದೆ ಎಂದರು. ನಂತರ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಶ್ರೀರಾಮುಲು ಅವರು ಅಂದಿನ ಸಚಿವರಾಗಿದ್ದಾಗ ಬಿಡುಗಡೆಯಾಗಿದ್ದ ಅನುದಾನದಲ್ಲೇ ಅಭಿವೃದ್ಧಿ ಮಾಡಲಾಗುತ್ತಿದೆ. ಚುನಾವಣೆ ವೇಳೆ ಗ್ಯಾರಂಟಿ ತಂದು, ಜನತೆಗೆ ಮೋಸ ಮಾಡಿ, ಅಧಿಕಾರ ಪಡೆದಿದ್ದಾರೆ. ಗ್ಯಾರಂಟಿಯಿಂದ ಜನರಿಗೆ ಏನು ಪ್ರಯೋಜನೆ ಇಲ್ಲ. ಕಾಂಗ್ರೆಸ್‌ನವರು ಜನರ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಆದ್ದರಿಂದ ಈಗಲಿಂದಲೇ ಬೂತ್ ಮಟ್ಟದಿಂದ ಬೇರು ಸಮೇತವಾಗಿ ಪಕ್ಷದ ಸಂಘಟನೆ ಮಾಡಬೇಕಾಗಿದೆ ಎಂದರು.
ತದನಂತರ ಎಂಎಲ್‌ಸಿ ವೈ.ಸತೀಶ್‌ರೆಡ್ಡಿ ಮಾತನಾಡಿದರು. ಕಂಪ್ಲಿ ಮತ್ತು ಕುರುಗೋಡು ನೂತನ ಮಂಡಲ ಅಧ್ಯಕ್ಷರಿಗೆ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎನ್.ರಾಮಾಂಜನೇಯ, ಹೂಗಾರ ರಮೇಶ, ಆರ್.ಆಂಜನೇಯ, ಮುಖಂಡರಾದ ಯರ‌್ರಂಗಳಿ ತಿಮ್ಮಾರೆಡ್ಡಿ, ಪಿ.ಬ್ರಹ್ಮಯ್ಯ, ಮುರಳಿಧರ, ಶ್ರೀಧರಶ್ರೇಷ್ಠಿ, ವೆಂಕಟರಾಮರಾಜು, ಚಂದ್ರಕಾಂತ್, ಬಿ.ಚಂದ್ರಶೇಖರಗೌಡ, ಸಿ.ಎ.ಚನ್ನಪ್ಪ, ರಬಿಯಾ ನಿಸಾರ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಫೆ.02ಕಂಪ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪ್ಲಿ ಮತ್ತು ಕುರುಗೋಡು ಮಂಡಲಗಳ ನೂತನ ಅಧ್ಯಕ್ಷರಿಗೆ ಬಿಜೆಪಿ ಧ್ವಜ ನೀಡಿ, ಅಧಿಕಾರ ನೀಡಲಾಯಿತು.