ಹೊಸದಿಲ್ಲಿ: ಕೆಲವು ನಾಯಕರು ಕೇವಲ ಐಷಾರಾಮಿ ಸ್ನಾನದ ಮನೆ ಮತ್ತು ಸ್ಟೈಲಿಶ್ ಶವರ್ ಗಳ ಮೇಲೆ ಕೇಂದ್ರೀಕರಿಸಿದ್ದಾರೆ ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪ್ರತಿ ಮನೆ, ಮನೆಗೂ ನೀರು ಲಭ್ಯವಾಗುವಂತೆ ಹರ್ ಘರ್ ಜಲ್ ಯೋಜನೆಗೆ ಆದ್ಯತೆ ನೀಡಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ವಿಶೇಷವಾಗಿ ದೇಶದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ರಾಹುಲ್ ಗಾಂಧಿಗೂ ಪ್ರತ್ಯುತ್ತರ: ಬಡವರ ಗುಡಿಸಲುಗಳಲ್ಲಿ ಫೋಟೋ ಸೆಷನ್‌ಗಳನ್ನು ಮಾಡುವ” ನಾಯಕರಿಗೆ ಸಂಸತ್ತಿನಲ್ಲಿ ಬಡತನದ ಬಗ್ಗೆ ಚರ್ಚೆ ಮಾಡುವುದು ಅತ್ಯಂತ “ನೀರಸ”ವಾಗಿರುತ್ತದೆ. ತಮ್ಮ ಮನೋರಂಜನೆಗಾಗಿ ಬಡವರ ಗುಡಿಸಲಿನೆದುರು ಹೋಗಿ ಫೋಟೋಶೂಟ್ ಮಾಡಿಸಿಕೊಳ್ಳುವವರಿಗೆ ಸಂಸತ್ನಲ್ಲಿ ಬಡವರ ಕುರಿತಾದ ಚರ್ಚೆ, ಆ ಕುರಿತಾದ ಭಾಷಣ ನೀರಸ ಅಥವಾ ಬೋರಿಂಗ್ ಆಗಿಯೇ ಇರುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ನೀರಸವಾಗಿತ್ತು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಮೋದಿ ತಿರುಗೇಟು ನೀಡಿದರು.
ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನಮ್ಮ ಸರ್ಕಾರ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ ಮತ್ತು 12 ಕೋಟಿ ಶೌಚಾಲಯಗಳನ್ನು ಒದಗಿಸಿದೆ ಎಂದು ಮೋದಿ ಹೇಳಿದರು.
"ಮಳೆಗಾಲದಲ್ಲಿ, ಜನರು ತಾತ್ಕಾಲಿಕ ಛಾವಣಿಗಳ ಅಡಿಯಲ್ಲಿ ವಾಸಿಸುವುದು ಕಷ್ಟಕರವಾಗಿತ್ತು. ಈಗ 4 ಕೋಟಿ ಕುಟುಂಬಗಳು ತಮ್ಮದೇ ಆದ ಮನೆಗಳನ್ನು ಹೊಂದುವಂತೆ ನಾವು ಖಚಿತಪಡಿಸಿಕೊಂಡಿದ್ದೇವೆ" ಎಂದು ಪ್ರಧಾನಿ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಅವರ ದೀರ್ಘಕಾಲದ ಘೋಷಣೆಯಾದ "ಗರೀಬಿ ಹಟಾವೋ"(ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಡತನ ನಿರ್ಮೂಲನೆ ಘೋಷಣೆ) ಅನ್ನು ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಲಾಗಿದೆ. ಆದರೆ "ನಾವು ಸುಳ್ಳು ಘೋಷಣೆಗಳನ್ನು ನೀಡಿಲ್ಲ. ಜನರಿಗೆ ನಿಜವಾದ ಅಭಿವೃದ್ಧಿ" ಮಾಡಿದ್ದೇವೆ ಎಂದರು.
ದೇಶದ ಬಡ ಜನರಿಗೆ ಮನೆ ಕಟ್ಟಿಕೊಡುವ ನಮ್ಮ ಉದ್ದೇಶವನ್ನು ಹಲವರು ಅಣಕಿಸುತ್ತಿದ್ದಾರೆ. ಆದರೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್ ಹೊಂದುವ ಬಡಜನರ ಕನಸಿನ ಮಹತ್ವ ಅರಮನೆಯಂತಹ ಮನೆಗಳಲ್ಲಿ ವಾಸಿಸುವ ಜನರಿಗೆ ತಿಳಿಯುವುದಿಲ್ಲ..ಎಂದು ಮೋದಿ ವಿಪಕ್ಷ ನಾಯಕರನ್ನು ತಿವಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಉಲ್ಲೇಖಿಸಿದ ಪ್ರಧಾನಿ, "ಒಬ್ಬ ಪ್ರಧಾನಿಯನ್ನು ಮಿಸ್ಟರ್ ಕ್ಲೀನ್ ಎಂದು ಕರೆಯುವ ಫ್ಯಾಷನ್ ಇತ್ತು. ಆದರೆ ದೆಹಲಿಯಿಂದ 1 ರೂಪಾಯಿ ಕಳುಹಿಸಿದರೆ ಜನರಿಗೆ ಕೇವಲ 15 ಪೈಸೆ ಮಾತ್ರ ಸಿಗುತ್ತದೆ ಎಂದು ಅವರೇ ಒಪ್ಪಿಕೊಂಡಿದ್ದರು ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಸರ್ಕಾರಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜೀವ್ ಗಾಂಧಿಯವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ಪಂಚಾಯತ್ ಮಟ್ಟದಿಂದ ಕೇಂದ್ರ ಮಟ್ಟದವರೆಗೆ ಅದೇ ಕಾಂಗ್ರೆಸ್ ಪಕ್ಷವಿತ್ತು ಎಂದು ಮೋದಿ ಟೀಕಿಸಿದ್ದಾರೆ.