ಪಶ್ಚಿಮ ಘಟ್ಟಗಳತ್ತ ತೆರಳಿದ್ದ ಕುರಿಗಾರರು ಇದೀಗ ವಿಜಯಪೂರದತ್ತ

ಕುರಿಗಳ ಪಾಲನೆ ಪೋಷಣೆಗಾಗಿ ಕುರಿಗಾರರು ಬಿಡಾರ ಸಹಿತ ತೆರಳುತ್ತಿದ್ದಾರೆ.

ಮಾಂಜರಿ 02: ಕುರಿಗಳ ಪಾಲನೆ ಪೋಷಣೆಗಾಗಿ ಕುರಿಗಾರರು ಸಂಸಾರ ಸಮೇತರಾಗಿ ವಲಸೆ ಹೋಗುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಋತುಮಾನಕ್ಕೆ ತಕ್ಕಂತೆ ಕುರಿಗಾರರು ಪ್ರವಾಸ ಕೈಗೊಳ್ಳುತ್ತಾರೆ. ಇಂದು ಇಲ್ಲಿದ್ದರೆ ನಾಳೆ ಬೇರೆಡೆಗೆ ಇರುತ್ತಾರೆ. ಮತ್ತೊಂದು ದಿನ ಇನ್ನೊಂದೆಡೆಗೆ ಇರುತ್ತಾರೆ.

ಚಿಕ್ಕೋಡಿ ತಾಲೂಕಿನ ಕುರಿಗಾರರು ಮಳೆಗಾಲ ಪ್ರಾರಂಭವಾಗಿರುವುದರಿಂದ ಮತ್ತು ಮಹಾರಾಷ್ಟ್ರದಲ್ಲಿನ ಪಶ್ಚಿಮ ಘಟ್ಟಗಳಲ್ಲಿ ಅಬ್ಬರದ ಮಳೆ ಪ್ರಾರಂಭಗೊಂಡಿರುವುದರಿಂದ ಪಶ್ಚಿಮ ಘಟ್ಟಗಳತ್ತ ತೆರಳಿದ್ದ ಕುರಿಗಾರರು ಇದೀಗ ವಿಜಯಪೂರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಳೆದ ಸುಮಾರು ಮೂರನಾಲ್ಕು ತಿಂಗಳುಗಳಿಂದ ಘಟ್ಟ ಪ್ರದೇಶದಲ್ಲಿ ಕುರಿಗಳಿಗೆ ಮೇವಿಗಾಗಿ ತೆರಳಿ ಊರೂರು ಅಲೆದಾಡಿ ಕುರಿಗಾರರು ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ ಪ್ರವಾಸ ಬೆಳೆಸುತ್ತಿದ್ದಾರೆ. 

 ಚಿಕ್ಕೋಡಿ ತಾಲೂಕಿನ ಅಕ್ಕೋಳ, ಖಡಕಲಾಟ, ಹಿರೇಕೋಡಿ, ವಾಳಕಿ, ಜೋಡಕುರಳಿ, ಕುಲರ್ಿ, ನಾಗರಾಳ, ನನದಿ, ಯಕ್ಸಂಬಾ ಮುಂತಾದ ಗ್ರಾಮಗಳ ನೂರಾರು ಕುರಿಗಾರ ಕುಟುಂಬಗಳು ಪ್ರತಿವರ್ಷ ಮಳೆಗಾಲ ಆರಂಭವಗುತ್ತಿದಂತೆಯೇ, ವಿಜಯಪುರ, ಬಾಗಲಕೋಟ, ರಾಯಚೂರು, ಬಳ್ಳಾರಿ ಜಿಲ್ಲೆಗಳತ್ತ ಕುರಿಮಂದಿಯೊಂದಿಗೆ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ವಲಸೆ ಹೊಗುತ್ತಾರೆ. ಮಳೆಗಾಲದಲ್ಲಿ ಹುಲ್ಲು ಮತ್ತಿತ್ತರ ಮೇವಿನ ಮೇಲೆ ಮಳೆ ಹನಿಗಳು ಸಂಗ್ರಹವಾಗುದರಿಂದ ಕುರಿಗಳು ಚನ್ನಾಗಿ ಮೆಯಲು ಆಗುವುದಿಲ್ಲಾ. ಮಳೆಗಾಲದಲ್ಲಿ ಸಿಡಿಲು ಗುಡುಗು ಜೋರಾಗಿ ಬಿಸಸುವ ಮಳೆ ಮತ್ತು ಗಾಳಿಗಳಲ್ಲಿ ಕುರಿಗಳನ್ನು ರಕ್ಷಿಸಿವುದು ಕಷ್ಟಕರವಾಗುತ್ತಿದೆ. ಅದಕ್ಕೆ ಮಳೆಗಾಲದಲ್ಲಿ  ವಿಜಯಪುರ, ಬಾಗಲಕೋಟದತ್ತ ವಲಸೆ ಹೊಗುತ್ತೇವೆ ಎಂದು ಕುರಿಗಾರರು ಹೇಳುತ್ತಾರೆ. 

ಜೂನನಿಂದ ಸಪ್ಟೆಂಬರ ವರೆಗೆ ಈ ಭಾಗದಲ್ಲಿ ಮಳೆ ಸುರಿಯುತ್ತದೆ. ಇಂತಹ ಮಳೆಗಾಳಿಯಲ್ಲಿ ಕುರಿಗಳನ್ನು ರಕ್ಷಿಸುವುದು ತುಂಬಾ ಕಷ್ಟಕರವಾಗುತ್ತದೆ. ವಿಜಾಪೂರ, ಬಾಗಲಕೋಟೆ ಕಡೆಗಳಲ್ಲಿ ಮಳೆ ಸ್ವಲ್ಪ ಕಡಿಮೆ ಇರುತ್ತದೆ. ಅಲ್ಲದೇ ಆ ಜಿಲ್ಲೆಗಳಲ್ಲಿ ಬೇಸಿಗೆಯ ಬಿಳಿಜೋಳ ರಾಶಿ ಮುಗಿದು ಕುರಿಗಳಿಗೆ ಮೇಯಲು ಮೇವು ಸಿಗುತ್ತದೆ. ಅದಕ್ಕಾಗಿ ಕುರುಬರು ಸುಮಾರು ನಾಲ್ಕು ತಿಂಗಳು ಕುರಿಗಳನ್ನು ಹೊಡೆದುಕೊಂಡು ಅತ್ತ ಹೋಗುವುದಾಗಿ ಹೇಳುತ್ತಾರೆ. ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಹಾಲುಮತ ಕುಟುಂಬಗಳು ಕುರಿಗಳೊಂದಿಗೆ ಊರು ಬಿಡುವ ಮುನ್ನ ಆರಾಧ್ಯ ದೇವರಿಗೆ ಕವಲು ಹಚ್ಚಿ ದೇವರ ಅಪ್ಪಣೆ ಪಡೆದುಕೊಂಡೇ ಹೋಗುವ ಸಂಪ್ರದಾಯವಿದೆ.  

ಇತ್ತೀಚಿನ ದಿನಗಳಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದ ಕುರಿಗಾರರು ತಮ್ಮವರೊಂದಿಗೆ ಸತತ ಸಂಪರ್ಕದಲ್ಲಿರುತ್ತಾರೆ. ದಿನವಿಡೀ ಕುರಿಗಳೊಂದಿಗೆ ಸುತ್ತಾಡಿ, ರಾತ್ರಿಯೂ ನಿಶ್ಚಿಂತೆಯಿಂದ ಮಲಗದೇ ಕಣ್ಣಲ್ಲಿ ಕಣ್ಣಿಟ್ಟು ಕುರಿಗಳನ್ನು ಸಾಕುತ್ತಾರೆ. 

ಗುಡ್ಡಗಾಡು, ಹಳ್ಳಕೊಳ್ಳ ಅಡವಿಗಳಲ್ಲಿ ಕುರಿಗಳೊಂದಿಗೆ ಅಲೆದಾಡುವ ಕುರಿಗಾರರು ಮಳೆಗಾಳಿ, ಬಿಸಿಲಿನ ಅರಿವೂ ಇಲ್ಲದೇ ಕುರಿಗಳ ಪಾಲನೆ, ಪೋಷಣೆ ಮಾಡುತ್ತಾರೆ. ಕುರಿಸಾಕಾಣಿಕೆ ತೀರ ಕಷ್ಟದಾಯಕ ಕಸುಬಾಗಿದ್ದು, ಕುರಿಗಾರರು ಆ ವೃತ್ತಿಯೊಂದಿಗೆ ಮೈಯೊಡ್ಡಿಕೊಂಡು ಬದುಕು ನಡೆಸುತ್ತಾರೆ. ಒಟ್ಟಿನಲ್ಲಿ ಈ ವರ್ಷ ಮೇವಿನ ಕೊರತೆ ಉಂಟಾಗಿದ್ದು, ಮೇವಿದ್ದ ಕಡೆಗೆ ಕುರಿಗಾರರು ವಲಸೆ ಹೋಗುತ್ತಿರುವುದು ಸವರ್ೇ ಸಾಮಾನ್ಯವಾಗಿದೆ.