ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಡಿಸಿ ಸೂಚನೆ


ಲೋಕದರ್ಶನ ವರದಿ 

ಬೆಳಗಾವಿ : ಕಾಮಗಾರಿ ವಿವರಗಳನ್ನೊಳಗೊಂಡ ಫಲಕಗಳನ್ನು ಕಡ್ಡಾಯವಾಗಿ ಹಾಕಿ, ಗುಣಮಟ್ಟದ ಕಾಮಗಾರಿ ಮಾಡಿ ಅಲ್ಲದೇ ಅಪೂರ್ಣ ಹಾಗೂ ಇನ್ನು ಆರಂಭವಾಗದ ಕಾಮಗಾರಿಗಳನ್ನು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್, ಅವರು ಅಧಿಕಾಗಳಿಗೆ ಇಂದಿಲ್ಲಿ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ 18 ವಿಧಾನ ಸಭೆ ಮತಕ್ಷೇತ್ರಗಳ ಅಲ್ಪ ಸಂಖ್ಯಾತರ ಕಾಲಿನಿಯ ಸಿಸಿ ರಸ್ತೆ ಕಾಮಗಾರಿ ಸಾರ್ವಜನಿಕ ಶೌಚಾಲಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸುಮಾರು 50 ಸಾವಿರ ರೂ ವೆಚ್ಚದ ಕಾಮಗಾರಿಗಳು ಇನ್ನು ಕೆಲವು ಕಡೆ ಆರಂಭವಾಗಿಯೇ ಆಗಿಲ್ಲ. ಅಧಿಕಾರಿಗಳು ಶೀಘ್ರ ಕಾಮಗಾರಿ ಆರಂಭಿಸಿ ಒಂದು ತಿಂಗಳಲ್ಲಿ ಮುಗಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ ಕೆಲವು ಕಡೆ ಪೈಪಲೇನ್ ಕಾಮಗಾರಿ ಸಂಬಂಧ ಕಾಮಗಾರಿಗಳು ವಿಳಂಭವಾಗಿವೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲವು ಕಡೆ ಅರ್ಧದಷ್ಟು ಕಾಮಗಾರಿಗಳು ಮುಗಿದಿದ್ದರೂ ಬಹಳಷ್ಟು ಕಡೆ ಕಾಮಗಾರಿಗಳು ಆರಂಭವಾಗಿಲ್ಲ. ಅಧಿಕಾರಿಗಳು ಸಬೂಬು ಹೇಳದೇ ಕೆಲಸ ಮಾಡಬೇಕೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಲವು ಕ್ಷೇತ್ರಗಳಲ್ಲಿ ಹೊಸ ಶಾಸಕರು ಬಂದಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲ ಅಧಿಕಾರಿಗಳು ಕಾಮಗಾರಿಗಳಲ್ಲಿ ಬದಲಾವಣೆ ಕೇಳುತ್ತಿರುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಚಂದ್ರನ್ ಆರ್, ಅವರು ಉಪಸ್ಥಿತರಿದ್ದು ಅಧಿಕಾರಿಗಳಿಗೆ ಸೂಚನೆ ನೀಡಿದರು.