ಚೆನ್ನೈ, ಮೇ 8 ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫಯರ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೆ 6 ವಿಕೆಟ್ಗಳಿಂದ ಗೆಲುವು ಪಡೆದು ಐಪಿಎಲ್ ಫೈನಲ್ ತಲುಪಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು 54 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ , " ಸ್ಪಿನ್ ಬೌಲಿಂಗ್ಗೆ ಸೂರ್ಯಕುಮಾರ್ ಯಾದವ್ ಒಬ್ಬ ಅದ್ಭುತ ಬ್ಯಾಟ್ಸ್ಮನ್. ಅವರನ್ನು ಬಹಳ ಹತ್ತಿರದಿಂದ ವೀಕ್ಷಿಸಿದ್ದು, ಸ್ಪಿನ್ ಬೌಲಿಂಗ್ ಅನ್ನು ಅವರು ಉತ್ತಮವಾಗಿ ಎದುರಿಸುತ್ತಾರೆ. ಕೆಲವೊಂದು ಶಾಟ್ಗಳನ್ನು ಅವರು ವಿಕೆಟ್ ಹಿಂದೆ ಆಡುತ್ತಾರೆ. ಈ ರೀತಿ ಆಡುವುದು ಸುಲಭವಲ್ಲ" ಎಂದು ಮುಂಬೈ ಬ್ಯಾಟ್ಸ್ಮನ್ಗೆ ಬೆನ್ನು ತಟ್ಟಿದರು. "ಎಂ.ಎಸ್ ಧೋನಿ ಅವರು ಸುಲಭವಾಗಿ ಸೋಲು ಒಪ್ಪಿಕೊಳ್ಳುವವರಲ್ಲ. ಎಷ್ಟೇ ಕಡಿಮೆ ಮೊತ್ತವಿದ್ದರೂ ಗೆಲುವಿಗಾಗಿ ಕೊನೆಯ ಎಸೆತದವರೆಗೂ ಅವರು ಹೋರಾಟ ನಡೆಸುತ್ತಾರೆ. ಹಾಗಾಗಿ, ಇದನ್ನೂ ನಾವು ಮೊದಲೇ ಲೆಕ್ಕಚಾರ ಹಾಕಿದ್ದೆವು. ಸಿಎಸ್ಕೆ ತಂಡವನ್ನು 140 ರನ್ಗಳಿಗೂ ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಬೌಲರ್ಗಳ ಪಾತ್ರ ಅತ್ಯಂತ ವಿಶೇಷವಾದದ್ದು ಎಂದು ಹೊಗಳಿದರು.
ಚೆನ್ನೈ ವಿರುದ್ಧದ ಗೆಲುವಿನ ಗುಟ್ಟು ಬಿಟ್ಟುಕೊಟ್ಟ ರೋಹಿತ್, ಯಾವುದೇ ಪಿಚ್ಗಳಿದ್ದರೂ ಅದಕ್ಕೆ ತಕ್ಕಂತೆ ಅಂತಿಮ 11 ಆಟಗಾರರನ್ನು ಸಮಯೋಜನೆ ಮಾಡುವುದು ಅತ್ಯಂತ ಮುಖ್ಯ. ಪಂದ್ಯಕ್ಕೂ ಮುನ್ನ ಪಿಚ್ ಗಮನಿಸಿ ತಂಡವನ್ನು ಅಂತಿಮಗೊಳಿಸಲಾಗುತ್ತದೆ. ಆದ್ದರಿಂದಲೇ ನಾವು ಚೆನ್ನೈ ಪಿಚ್ನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಅಲ್ಲದೇ, ಪಿಚ್ ಪರಿಸ್ಥಿಯನ್ನೂ ನಾವು ಅರ್ಥ ಮಾಡಿಕೊಂಡು ಅದಕ್ಕೇ ತಕ್ಕಂತೆ ಆಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.