ಕಬ್ಬು ಬಾಕಿ: ತೀವ್ರಗೊಂಡ ರೈತ ಹೋರಾಟ

ಬೆಳಗಾವಿ 15, ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರತಿಪಕ್ಷಗಳು ಹಾಗೂ ರೈತ ಸಂಘಟನೆಗಳು ಇಂದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ನೇರವಾಗಿ ಮನವಿ ಸ್ವೀಕರಿಸದಿದ್ದರೆ ಡಿ.ಸಿ. ಕಚೇರಿ ಒಳಗಡೆ ನುಗ್ಗಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದರು. 

ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ ಮಾತನಾಡಿದ ಅವರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ರಾಜಕೀಯ ನಾಯಕರು ಭಾಗವಹಿಸಿದರೆ ಪಕ್ಷಕ್ಕೆ ಪಕ್ಷಗಳ ನಡುವೆ ವಾದಗಳು ಸೃಷ್ಠಿಯಾಗುತ್ತವೆ. ರೈತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಅವರ ಧ್ವನಿ ಸರಕಾರಕ್ಕೆ ಕೇಳಿಸುತ್ತದೆ ಎಂದರು.

ಬೆಳಗಾವಿ ಡಿಸಿಯವರು ರೈತರ ಮುಂದೆ ಬರಿ ಸರಕಾರದ ತುತ್ತೂರಿ ಊದಿದಾರೆ. ರೈತರ ಸಮಸ್ಯೆಗಳನ್ನು, ವಿಚಾರಗಳನ್ನು ಡಿಸಿ ಕೇಳಬೇಕು ಇಲ್ಲವಾದಲ್ಲಿ ರೈತರು ಗೇಟ್ ಒಳಗಡೆ ನುಗ್ಗಬೇಕಾಗುತ್ತದೆ ಎಂದರಲ್ಲದೆ, ಕಾರಖಾನೆಗಳನ್ನು ರಾಜಕೀಯ ನಾಯಕರು ರೈತರ ಹಿತಕಾಯದೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸುತ್ತಿದ್ದಾರೆ ಎಂದರು. 

ಸಿಎಂ ಕುಮಾರಸ್ವಾಮಿಯವರು ಡಿಸೆಂಬರನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಹೇಗೆ ನಡೆಸುತ್ತಾರೆ ನಾನು ನೋಡುವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೆಟಿ ಗಂಗಾಧರ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಸಂವಿಧಾನ ಕಾನೂನು ಪ್ರಕಾರ ರೈತರು ತಪ್ಪು ಮಾಡಿದರೆ ಯಾವ ರೀತಿ ಕೇಸ್ ಹಾಕುತ್ತಿರೋ ಅದೇ ರೀತಿ ಕಬ್ಬಿನ ಬಿಲ್ ನೀಡದ ಕಾರಖಾನೆ ಮಾಲೀಕರ ವಿರುದ್ಧವೂ ಕೇಸ್ ದಾಖಲು ಮಾಡಿ ಕ್ರಮ ಕೈಗೊಳ್ಳಿ. ಸರಕಾರ ಈ ಸಮಸ್ಯೆಗೆ ಸ್ಪಂದಿಸದಿದ್ದರೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಹೇಗೆ ನಡೆಸುತ್ತೀರಾ ಎಂದು ಸವಾಲು ಹಾಕಿದರು.