ಫನಿ ಚಂಡಮಾರುತ; ಒಡಿಶಾದ ಹಲವು ರೈಲುಗಳ ಸಂಚಾರ ಸ್ಥಗಿತ


ನವದೆಹಲಿ, ಮೇ 2  ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಫನಿ ಚಂಡಮಾರುತ ನಾಳೆ ಮಧ್ಯಾಹ್ನ ಒಡಿಶಾ ಕರಾವಳಿ ಪ್ರದೇಶವನ್ನು ಹಾದು ಹೋಗಲಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾ ಮಾರ್ಗವಾಗಿ ಸಾಗುವ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.  

ಫನಿ ಚಂಡಮಾರುತ ಶುಕ್ರವಾರ ಮಧ್ಯಾಹ್ನದ ನಂತರ, ಒಡಿಶಾದ ಕರಾವಳಿಯ ಗೋಪಾಲ್ಪುರ ಹಾಗೂ ಚಾಂದ್ ಬಲಿ ಪ್ರದೇಶಗಳ ಮೂಲಕ ಈಶಾನ್ಯ ದಿಕ್ಕಿನೆಡೆಗೆ ಗಂಟೆಗೆ 170ರಿಂದ 180 ಕಿಮೀ ವೇಗದಲ್ಲಿ ಚಲಿಸುವ ಕುರಿತು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ  ಮಾರ್ಗವಾಗಿ ಮೇ 2ರಂದು ಸಂಚರಿಸಬೇಕಿದ್ದ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.  ನವದೆಹಲಿ-ಭುವನೇಶ್ವರ್ ರಾಜಧಾನಿ ಎಕ್ಸ್ ಪ್ರೆಸ್ ಮಾರ್ಗದ ಎರಡು ರೈಲುಗಳು ಹಾಗೂ ಆನಂದ ವಿಹಾರ ನಿಲ್ದಾಣ-ಪುರಿ ನಂದನ್ ಕಣನ್ ಎಕ್ಸ್ ಪ್ರೆಸ್ ರೈಲು ಸೇರಿ ಹಲವು ರೈಲುಗಳು ಇಂದು ಪ್ರಯಾಣ ಬೆಳೆಸಿಲ್ಲ ಎಂದು ಉತ್ತರ ರೈಲ್ವೇ ಇಲಾಖೆಯ ಹೇಳಿಕೆ ತಿಳಿಸಿದೆ.  ಬಂಗಾಳಕೊಲ್ಲಿಯಲ್ಲಿ ಕಳೆದ ಆರು ವರ್ಷಗಳಲ್ಲೇ ಅತಿ ತೀವ್ರವಾದ ಚಂಡಮಾರುತ ಬೀಸಲಿದ್ದು, ಈಶಾನ್ಯ ಭಾಗಕ್ಕೆ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಿಂದ 510 ಕಿಮಿ ದೂರದಲ್ಲಿರುವ ಒಡಿಶಾದ ಪುರಿ, 260 ಕಿಮೀ ದೂರದ ಆಂಧ್ರಪ್ರದೇಶದ ವಿಶಾಖಪಟ್ಟಣಂ, 700 ಕಿಮೀ ಅಂತರದ ಪಶ್ಚಿಮ ಬಂಗಾಳದ ದಿಘ ಪ್ರದೇಶಗಳ ಮೇಲೆ ಫನಿ ತೀವ್ರ ಪ್ರಭಾವ ಬೀರಲಿದೆ. ಈ ಚಂಡಮಾರುತ ಶುಕ್ರವಾರ ಮಧ್ಯಾಹ್ನ ಗಂಟೆಗೆ 3ರ ಸುಮಾರಿಗೆ  170ರಿಂದ 180 ಕಿಮೀ ವೇಗದಲ್ಲಿ ಪುರಿ ಜಿಲ್ಲೆಯನ್ನು ಹಾದು ಈಶಾನ್ಯ ದಿಕ್ಕಿನೆಡೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಗ್ಗು ಪ್ರದೇಶದ 8 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಚೆನ್ನೈ, ವಿಶಾಖಪಟ್ಟಣಂ ಹಾಗೂ ಮಚಿಲಿಪಟ್ಟಣಂನಲ್ಲಿ ಕೂಡ ರಡಾರ್ ನೆರವಿನಿಂದ ಚಂಡಮಾರುತದ ದಿಕ್ಕನ್ನು ಪರಿಶೀಲಿಸಲಾಗುತ್ತಿದೆ. ಗುರುವಾರ ಹಾಗೂ ಶುಕ್ರವಾರ ಈ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.