ರಾಯ್ಪುರ್/ಭೂಪಾಲ್ 16, ಛತ್ತೀಸ್ಘಡ ಮತ್ತು ಮಧ್ಯಪ್ರದೇಶದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಸ್ಪರ ಆರೋಪ-ಪ್ರತ್ಯಾರೋಪಗಳ ವಾಕ್ಬಾಣ ಪ್ರಯೋಗಿಸಿದ್ದಾರೆ.
ನ.20ರಂದು ಎರಡನೇ ಹಂತದ ಚುನಾವಣೆ ನಡೆಯಲಿರುವ ಛತ್ತೀಸ್ಘಡದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಪ್ರಧಾನಿ ಮೋದಿ ರ್ಯಾಲಿವೊಂದರಲ್ಲಿ ಗಾಂಧಿ ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿ ಭಾಷಣ ಮಾಡುವುದು ಗಾಂಧಿ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ದೇಶದ ಮತದಾರರು ಸಾಬೀತು ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಲ್ಕು ತಲೆಮಾರುಗಳ ವಂಶಪಾರಂಪರ್ಯ ಆಡಳಿತ ನಡೆಸಿದೆ. ಈ ಸಂದರ್ಭದಲ್ಲಿ ಅವರು ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಮೋದಿ ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷವು ಒಂದೇ ಕುಟುಂಬದ ಸ್ವತ್ತಾಗಿದೆ. ಸೋನಿಯಾ ಗಾಂಧಿ ನಂತರ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾದರು. ಗಾಂಧಿ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಕನಿಷ್ಠ 5 ವರ್ಷಗಳ ಕಾಲ ಪಕ್ಷದ ಹುದ್ದೆಯನ್ನು ನೀಡಬೇಕು ಎಂದು ಮೋದಿ ಸವಾಲು ಹಾಕಿದರು.
ನಕ್ಸಲರ ದಾಳಿ ಬೆದರಿಕೆಗೆ ಹೆದರದೆ ಮೊದಲ ಹಂತದಲ್ಲಿ ದಾಖಲೆ ಮತ ಚಲಾಯಿಸಿದ ಛತ್ತೀಸ್ಘಡ ಜನತೆಯನ್ನು ಮೋದಿ ಅಭಿನಂದಸಿದರು.
ಇತ್ತ ಮಧ್ಯಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ವಿರುದ್ದ ಮತ್ತೆ ಹರಿಹಾಯ್ದರು.
ಇತ್ತೀಚಿನ ದಿನಗಳಲ್ಲಿ ಮೋದಿಯವರ ಭಾಷಣಗಳನ್ನು ಕೇಳುತ್ತಿದ್ದರೆ ಅವರು ಭ್ರಷ್ಟಾಚಾರ ವಿಷಯ ಹೊರತುಪಡಿಸಿ ಅನಗತ್ಯ ವಿಚಾರಗಳ ಬಗ್ಗೆಯೇ ಮಾತನಾಡುತ್ತಾರೆ ಎಂದು ಟೀಕಿಸಿದರು. ನೋಟು ಅಮಾನೀಕರಣ ಭಾರತದ ಅತಿದೊಡ್ಡ ಹಗರಣ. ಇದೇ ಮೋದಿಯವರ ದೊಡ್ಡ ಸಾಧನೆ ಎಂದು ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದರು.