ಪ್ರವಾಹ ಎದುರಿಸಲು ಸಕಲ ಸಿದ್ಧತೆ: ಕೌಲಗಿ

ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದ ಪ್ರದೇಶಕ್ಕೆ ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿ



ಚಿಕ್ಕೋಡಿ 13: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರೆದಿರುವ ಹಿನ್ನಲ್ಲೆಯಲ್ಲಿ ಗಡಿ ಭಾಗದ ನದಿಗಳು ಉಕ್ಕಿ ಹರಿಯುತ್ತವೆ. ಇದರಿಂದ ನದಿಗಳಿಗೆ ಸಾರ್ವಜನಿಕರು ಇಳಿಯಬಾರದು ಎಂದು ಉಪವಿಭಾಗಾಧಿಕಾರಿ ಗೀತಾ ಕೌಲಗಿ ಮನವಿ ಮಾಡಿದ್ದಾರೆ.

ಶುಕ್ರವಾರ ಕೃಷ್ಣಾ, ದೂಧಗಂಗಾ ನದಿ ತೀರ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಪ್ರತಿ ವರ್ಷ ಮುಂಗಾರಿನ ಹಂಗಾಮಿನಲ್ಲಿ ಮಹಾರಾಷ್ಟ್ರದಲ್ಲಿ ಮಳೆ ಆಗುವದರಿಂದ ನೀರು ನದಿಗಳಿಗೆ ಹರಿದು ಬರುತ್ತದೆ. ಮಹಾರಾಷ್ಟ್ರದಿಂದ ಈಗ ಹರಿದು ಬರುವ ನೀರಿನ ಪ್ರಮಾಣದಷ್ಟೇ ಹಿಪ್ಪರಗಿ ಬ್ಯಾರೇಜದಿಂದ ಆಲಮಟ್ಟಿಗೆ ನೀರನ್ನು ಹರಿದು ಬಿಡಲಾಗುತ್ತದೆ. ಇದರಿಂದ ನದಿ ನೀರಿನ ಮಟ್ಟದಲ್ಲಿ ಅಷ್ಟೊಂದು ಏರಿಕೆ ಆಗುದಿಲ್ಲ, ಒಂದು ವೇಳೆ ನೀರಿನ ಮಟ್ಟದಲ್ಲಿ ಏರಿಕೆಯಾದರೆ ಪ್ರವಾಹ ಎದುರಿಸಲು ಕಂದಾಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.

ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳ ಕೆಳಮಟ್ಟದ ಸೇತುವೆಗಳು ಜಲಾವೃತಗೊಂಡಿವೆ. ಮೂರು ನದಿಗಳು ಒಡಲುಕ್ಕಿ ಹರಿಯುತ್ತವೆ. ಆದ್ದರಿಂದ ರೈತರು ಮತ್ತು ಸಾರ್ವಜನಿಕರು ನದಿ ದಾಟುವ ಸಾಹಸಕ್ಕೆ ಹೋಗಬಾರದು. ನದಿ ತೀರದ ಸಾರ್ವಜನಿಕರು ನದಿಗೆ ಇಳಿಯದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.