ಲೋಕದರ್ಶನವರದಿ
ರಾಣೇಬೆನ್ನೂರು 19 : ನಗರದಲ್ಲಿ ಮಾ.23ರಂದು ನಡೆಯಲಿರುವ ಹೋಳಿ ಆಚರಣೆಯು ಶಾಂತಿ ಸುವ್ಯವಸ್ಥೆಯಿಂದ ಜರುಗಬೇಕು, ಯಾವುದೇ ಕಾರಣಕ್ಕೂ ಶಾಂತಿಗೆ ಭಂಗ ಮಾಡುವವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಡಿವೈಎಸ್ಪಿ ಟಿ.ವಿ.ಸುರೇಶ ಹೇಳಿದರು.
ಶಹರ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಶಾಂತಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತಿ ಸುವ್ಯವಸ್ಥೆಗೆ ಹೆಸರಾದ ನಗರದಲ್ಲಿ ಸೌಹಾರ್ದಯುತವಾಗಿ ಹೋಳಿ ಜರುಗಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಹೋಳಿ ಹಬ್ಬವನ್ನು ನಗರದ ಜನತೆ ಶಾಂತಿಯುತವಾಗಿ ಆಚರಿಸಬೇಕು. ನಗರದ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಯಿಲ್ಲ. ಹೀಗಾಗಿ ಎಲ್ಲ ಕಡೆಗೂ ಪೊಲೀಸರನ್ನು ನಿಯೋಜಿಸುವುದು ಬಹಳಷ್ಟು ಕಷ್ಟಕರವಾಗಿದೆ. ನಾಗರೀಕರು ಸಹಕರಿಸಲು ಮುಂದಾಗಬೇಕು ಎಂದರು.
ಹೋಳಿಯಲ್ಲಿ ಸಾಮಾನ್ಯವಾಗಿ ಯುವ ಜನತೆ ಹೆಚ್ಚಾಗಿ ಭಾಗವಹಿಸುತ್ತಿದ್ದು, ಯಾವುದೇ ಕಾರಣಕ್ಕೂ ಕರ್ಕಷ ಶಬ್ದ ಮಾಡುತ್ತಾ ಬೈಕ್ಗಳನ್ನು ಚಲಾಯಿಸಬಾರದು. ರಾಸಾಯನಿಕ ಮಿಶ್ರದ ಬಣ್ಣವನ್ನು ಬಳಸಬಾರದು, ಒತ್ತಾಯದ ಬಣ್ಣ ಎರಚಬಾರದು ಎಂದರು.
ನಗರಸಭೆ ಆಯುಕ್ತ ಡಾ. ಮಹಾಂತೇಶ ಎನ್. ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಪಾಲನೆ ಪ್ರಕಾರ ಕಾಮಣ್ಣನನ್ನು ಕುಳ್ಳಿರಿಸುವ ಜಾಗೆಯಲ್ಲಿ ಬ್ಯಾನರ್, ಬಂಟಿಂಗ್ಸ್ ಕಟ್ಟಲು ಅವಕಾಶ ಇಲ್ಲ. ಹಬ್ಬದ ಆಚರಣೆ ವೇಳೆ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪುಡಿ ಬಣ್ಣವನ್ನು ಬಳಸುವಂತೆ ಸೂಚಿಸಿದರು.
ಶಹರ ಪಿಎಸ್ಐ ಟಿ.ಮಂಜಪ್ಪ, ನಗರಸಭೆ ಸದಸ್ಯರುಗಳಾದ ಶೇಖಪ್ಪ ಹೊಸಗೌಡ್ರ, ಪುಟ್ಟಪ್ಪ ಮರಿಯಮ್ಮನವರ, ಪ್ರಭಾವತಿ ತಿಳವಳ್ಳಿ, ಶಶಿಧರ ಬಸೆನಾಯ್ಕರ, ಪ್ರಕಾಶ ಪೂಜಾರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ವಹಾಬ್ ಶಾಫಿ, ಪಿಕೆ ಲಕ್ಷ್ಮೇಶ್ವರ, ಮೈಲಪ್ಪ ಗೋಣಿಬಸಮ್ಮನವರ ಸೇರಿದಂತೆ ಇತರರು ಇದ್ದರು.