ಲೋಕದರ್ಶನವರದಿ
ಬ್ಯಾಡಗಿ 16: ತಾಲ್ಲೂಕಿನ ಆಣೂರ ಕೆರೆಗೆ ನೀರು ತುಂಬಿಸುವಂತ ಹೋರಾಟವನ್ನು ರೈತ ಸಂಘವು ಕೈಬಿಟ್ಟಿರುವುದಿಲ್ಲಾ ಹಾಗೂ ಮತದಾನ ಬಹಿಷ್ಕಾರದಿಂದ ಹಿಂದೆ ಸರಿದಿಲ್ಲವೆಂದು ಗ್ರಾಮ ರೈತ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಂಗಳವಾರ ಅವರು ಸ್ಥಳೀಯ ವ್ಯವಸಾಯ ಸಹಕಾರಿ ಸಂಘದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ತಿಳಿಸಿದರು. ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ಕೇಂದ್ರ ಚುನಾವಣಾ ವೀಕ್ಷಕರು ಮತದಾನ ಮಾಡುವಂತೆ ಜನತೆಗೆ ಮನವಿ ಮಾಡಿದ್ದರು.
ಆ ಸಂದರ್ಭದಲ್ಲಿ ಜನರು ಕೆರೆಗೆ ನೀರು ಬರುವವರೆಗೆ ಮತದಾನದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಲಾಗಿದೆ, ಆದರೇ ಅಂದು ಗ್ರಾಮಕ್ಕೆ ಆಗಮಿಸಿದ್ದ ಅಧಿಕಾರಿಗಳು ಮತದಾನದಲ್ಲಿ ಭಾಗವಹಿಸದೇ ಇದ್ದಲ್ಲಿ ಗ್ರಾಮಕ್ಕೆ ದೊರೆಯಲಿರುವ ಸರಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಜನರಿಗೆ ಎಚ್ಚರಿಕೆ ನೀಡಿದ್ದರ ಪರಿಣಾಮವಾಗಿ ಕೆಲ ಗ್ರಾಮಸ್ಥರು ಮೌನವಾಗಿದ್ದರೆಂದು ಹೇಳಿದರು.
ನಮ್ಮ ಗ್ರಾಮಕ್ಕೆ ಬರುವ ಸರಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ವಿಚಾರವನ್ನು ಗ್ರಾಮದ ಮುಗ್ದ ಜನತೆಗೆ ಅಧಿಕಾರಿಗಳು ಹೇಳಿದ್ದು ಮತದಾರರನ್ನು ಸುಮ್ಮಿನಿರಿಸುವ ಕ್ರಮದ ಒಂದು ಭಾಗವಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಿ ಗ್ರಾಮಸ್ಥರು ಮತದಾನದ ಬಹಿಷ್ಕಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದರಲ್ಲದೇ ಕೇಂದ್ರ ಚುನಾವಣಾ ವೀಕ್ಷಕರು ಪತ್ರಿಕಾ ಹೇಳಿಕೆಯಲ್ಲಿ ಆಣೂರ ಗ್ರಾಮಸ್ಥರು ಮತದಾನ ಮಾಡುವುದಾಗಿ ಹೇಳಿಕೆ ಕೊಟ್ಟಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಹಸಿರು ಸೇನೆಯ ಅಧ್ಯಕ್ಷ ಗಂಗಣ್ಣ ಯಲಿ, ಸುರೇಶ ಚಲವಾದಿ, ಜಿ.ಆರ್.ಬಡ್ಡಿಯವರ, ಪಿ.ಬಿ.ಬಣಕಾರ, ಸಿ.ಕೆ.ಬಡ್ಡಿವರ, ಮುರಿಗೆಪ್ಪ ಗಾಣಿಗೇರ, ಎಸ್.ಎಸ್.ಹಲಗೇರಿ, ಎನ್.ಎನ್,ಬಡ್ಡಿಯವರ ಸೇರಿದಂತೆ ಇನ್ನಿತರರಿದ್ದರು.