ಲೋಕದರ್ಶನ ವರದಿ
ಹೂವಿನಹಡಗಲಿ 23: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ರಾತ್ರಿ ದಾಖಲೆ ಮಳೆ ಸುರಿದಿದೆ. ಹಡಗಲಿ, ಹಿರೇಹಡಗಲಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದ್ದರೆ ,ಇಟ್ಟಿಗಿ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ.
ತಾಲೂಕಿನ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಿರೇಕೊಳಚಿ ಮತ್ತು ಚಿಕ್ಕಕೊಳಚಿಯಲ್ಲಿ ಹಳ್ಳದ ನೀರು ನುಗ್ಗಿ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು.ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮೆಕ್ಕೆಜೋಳ,ನವಣೆ, ಭತ್ತ ಬೆಳೆಗಳಿಗೆ ನೀರು ನುಗ್ಗಿ ನೂರಾರು ಎಕರೆಗಳಲ್ಲಿ ಬೆಳೆಗಳು ಹಾನಿಯಾಗಿವೆ. ನಾನಾ ಗ್ರಾಮಗಳಲ್ಲಿ 67ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.
ತಾಲೂಕಿನ ಬೂದನೂರು ಗ್ರಾಮದ ಹೊರವಲಯದಲ್ಲಿ ಕಳೆದ ವರ್ಷ ನಿರ್ಮಿಸಿರುವ ಹೊಸ ಕೆರೆ ಸೋಮವಾರ ರಾತ್ರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿ ರೈತರ ಹೊಲಗಳಿಗೆ ನೀರು ನುಗ್ಗಿದೆ. ಇದೀಗ ಕೆರೆ ಒಡೆದು ಸಂಪೂರ್ಣ ಖಾಲಿಯಾಗಿದೆ. ಹಿರೇಹಡಗಲಿ, ದೇವಗೊಂಡನಹಳ್ಳಿ, ಹೊಳಗುಂದಿ ಕೆರೆಗಳು ತುಂಬಿ ಕೋಡಿ ಮೂಲಕ ಅಪಾರ ಪ್ರಮಾಣದ ನೀರು ಹೊರ ಹರಿಯಿತು. ದೇವಗೊಂಡನಹಳ್ಳಿ ಕೆರೆ ಕೋಡಿಯ ಮೂಲಕ ಹರಿದ ನೀರು ಹೊಲಗದ್ದೆಗಳಿಗೆ ನುಗ್ಗಿ, ಬೆಳೆಗಳು ಕೊಚ್ಚಿ ಕೊಂಡು ಹೋದವು.
ಒಂದು ವಾರದಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕೊಳ್ಳ, ಚೆಕ್ ಡ್ಯಾಂಗಳು ಭರ್ತಿಯಾಗಿವೆ.ಕೃಷಿ ಜಮೀನಗಳಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳು ತುಂಬಿವೆ. ಮಳೆಯಿಂದ ಈರುಳ್ಳಿ, ಶೇಂಗಾ, ಸಜ್ಜೆ ಒಕ್ಕಣೆ ನಡೆಸಿರುವ ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ.
ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಿಸಿರುವ ಸಿಮೆಂಟ್ ಪ್ಲಾಟ್ಫಾರಂ ಅವೈಜ್ಞಾನಿಕವಾಗಿದ್ದು, ಮಳೆ ನೀರು ಹೊರಗೆ ಹರಿದು ಹೋಗದೇ ರೈತರು ಮೆಕ್ಕೆಜೋಳದ ರಾಶಿಗೆ ನೀರು ನುಗ್ಗಿದ್ದರಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದೀಗ ಮೆಕ್ಕೆಜೋಳರಾಶಿ ತೊಯ್ದು ಹೋಗಿದೆ. ಮಳೆಗೆ ನೆನೆದಿರುವ ಫಸಲನ್ನು ದಲ್ಲಾಳಿಗಳು ತೀರಾ ಅಗ್ಗದ ಬೆಲೆಗೆ ಕೇಳುತ್ತಿದ್ದಾರೆ. ಇಲ್ಲಿನ ವ್ಯವಸ್ಥೆಗೆ ರೈತ ಮಹಿಳೆ ಗಂಗಮ್ಮ ಕಣ್ಣೀರು ಹಾಕಿದರು.