ಲೋಕದರ್ಶನ ವರದಿ
ಹೂವಿನಹಡಗಲಿ 18: ತಾಲೂಕಿನ ಹುಗಲೂರು ಗ್ರಾಮದ ಮುಸ್ಲಿಂ ಜನಾಂಗದ ಯುವಕ ಮಹ್ಮದ್ ರಫಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಈಚೆಗೆ ಸಾವನ್ನಪ್ಪಿದ್ದರಿಂದ ಮೃತ ಕುಟುಂಬಕ್ಕೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ತಹಶೀಲ್ದಾರ ಕೆ.ರಾಘವೇಂದ್ರರಾವ್ ಭಾನುವಾರ 5ಲಕ್ಷ ರೂ.ಪರಿಹಾರದ ಚಕ್ನ್ನು ವಿತರಿಸಿದರು.
ಕೃಷಿ ಕೂಲಿ ಕಾರ್ಮಿಕ ಮೃತ ಮಹ್ಮದ್ ರಫಿ(24) ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದರಿಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕೃತಿ ವಿಕೋಪ ನಿಧಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ನೆರವನ್ನು ಶಾಸಕರು ನೀಡಿದರು.
ನಂದಿಹಳ್ಳಿ ರಥ ನಿರ್ಮಾಣಕ್ಕೆ 5ಲಕ್ಷ ರೂ: ತಾಲೂಕಿನ ನಂದಿಹಳ್ಳಿ ಗ್ರಾಮದ ಕಂಠಿ ಬಸವೇಶ್ವರ ಸ್ವಾಮಿಯ ನೂತನ ರಥ ನಿರ್ಮಾಣಕ್ಕೆ 5ಲಕ್ಷ ರೂ. ನೆರವು ನೀಡುವುದಾಗಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದ ಅವರು ದುರಗಮ್ಮನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ 2.50ಲಕ್ಷ ರೂ.ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಸೋಗಿಹಾಲೇಶ,ವಕ್ತಾರ ಬಿ.ಎಲ್.ಶ್ರೀಧರ, ನಂದಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಕಂಠಿ ವೀರೇಶ, ಗ್ರಾಮಸ್ಥರು ಇದ್ದರು.