ಹೂವಿನಹಡಗಲಿ: ಮೈಲಾರ ಕಾರ್ಣಿಕೋತ್ಸವಕ್ಕೆ ಹರಿದು ಬಂದ ಜನಸಾಗರ

ಮುದೇಗೌಡ್ರ ಅಶೋಕ  

ಹೂವಿನಹಡಗಲಿ 11: ನಾಡಿನ ಐತಿಹಾಸಿಕ ಹಾಗೂ ಧಾರ್ಮಿಕ,ಪೌರಾಣಿಕ ಕ್ಷೇತ್ರವಾದ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಮಂಗಳವಾರ ಡೆಂಕನ ಮರಡಿ ವಿಶಾಲವಾದ ಪ್ರದೇಶದಲ್ಲಿ ನಾಡಿನ ಲಕ್ಷಾಂತರ ಆಗಮಿಸಿ ಭಕ್ತರು ಹರಕೆ ತೀರಿಸುವ ಮೂಲಕ ಮಣ್ಣಿನ ರಾಶಿ, ಕಲ್ಲು, ಕಟ್ಟಿಗೆಯಲ್ಲಿ ಮನೆ ಕಟ್ಟಿ ಬಿಟ್ಟರು!.

ಮೈಲಾರ ಜಾತ್ರೆಗೆ ಜನಸಾಗರವೇ ಆಗಮಿಸಿದ್ದರೂ ಅದರಲ್ಲಿ ಬೆಟ್ಟದಷ್ಟು ಆಸೆಗಳನ್ನಿಟ್ಟುಕೊಂಡು ಬಂದ ಭಕ್ತರು ಡೆಂಕನ ಮರಡಿ ವಿಶಾಲವಾದ ಪ್ರದೇಶದಲ್ಲಿ ಅಲ್ಲಿಯ ಮಣ್ಣಿನ ಮನೆ ಕಟ್ಟುವ, ಕಲ್ಲು ಒಂದುಗೂಡಿಸುವ,ಕೆರೆ ಕಾಲುವೆ, ಬಾವಿ ನಿರ್ಮಿಸಿ, ಹೊಲ ಗದ್ದೆಗಳ ಹಸಿರು ಕನಸುಕಾಣುವ ಗುಡಿಗೋಪಾರ ನಿಮರ್ಿಸುವ ಗಿಡ-ಗಂಟೆ ಹುಲ್ಲು ಸೇರಿಸಿ ಪುಟ್ಟ ಚಪ್ಪರ ಹಾಕುವ, ಮಗಳ, ಮಗನ ಮದುವೆಗೆ ಹಂದರ ಹಾಕುವುದು, ರೈತರು ಮಣ್ಣಿನಲ್ಲಿ ರಾಶಿ ಮಾಡುವುದು ಸೇರಿದಂತೆ ಕನಸು ಕಾಣುವ ಅದೇ ವರ್ಷವೇ ಎಲ್ಲ ಈಡೇರುತ್ತವೆ ಎಂಬದು ಮನಸ್ಸಲ್ಲಿ ಅಂದುಕೊಂಡಿದ್ದು ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ ಅಷ್ಟೇ.

ಮೈಲಾರನ ಮೇಲೆ ಜನತೆಗೂ,ಜನತೆಯ ಮೇಲೆ ಮೈಲಾರನಿಗೂ ಅಂತಹ ಪ್ರಾಕೃತಿಕವಾದ ಬಾಳಿನ ಅವಿನಾಭಾವ ಸಂಬಂಧವಿದೆ.ನಾಡಿನ ಭವಿಷ್ಯವಾಣಿ ಎಂದೇ ಬಿಂಬಿತವಾಗಿರುವ ಕಾರಣಿಕ ನುಡಿಯನ್ನು ಆಲಿಸಲು  ತಾಲ್ಲೂಕಿನ ಮೈಲಾರ ಸುಕ್ಷೇತ್ರಕ್ಕೆ  ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ. ಈ ಬಾರಿಯ ಫಸಲು ರೈತನ ಕೈ ಹಿಡಿದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು  ಕೊಲಾರಿ ಬಂಡಿ ಕಟ್ಟಿಕೊಂಡು ತಮ್ಮ ಪರಿವಾರದೊಂದಿಗೆ ಬಂದಿರುವುದರಿಂದ ಜಾತ್ರಾ ಪ್ರದೇಶದಲ್ಲಿ ವಾಸ್ತವ್ಯ ಹೂಡಲು ಸ್ಥಳಸಿಗದೇ ಪರದಾಡುವ ಸ್ಥಿತಿ ಕಂಡುಬಂತು.ಜಾತ್ರಾ ವಿಶೇಷ ಬಸ್ಗಳು ಹಾಗೂ ಖಾಸಗಿ ವಾಹನ, ಟ್ರ್ಯಾಕ್ಟರ್ಗಳು, ತ್ರಿಚಕ್ರ ವಾಹನಗಳಲ್ಲಿ ಭಕ್ತರು ಸುಕ್ಷೇತ್ರಕ್ಕೆ ಆಗಮಿಸುತ್ತಿದ್ದು, ನಿರೀಕ್ಷೆಗಿಂತ ಹೆಚ್ಚು  ಜನಸಂದಣಿ ಸೇರಿತ್ತು.

ನಾಲ್ಕು ದಿನಗಳ ಕಾಲ  ಸುಕ್ಷೇತ್ರದಲ್ಲಿಯೇ ಬಿಡಾರ ಹೂಡಿರುವ ಭಕ್ತರು, ಮನೋ ಇಷ್ಟಾರ್ಥ ಸಿದ್ಧಿಗಾಗಿ  ಮೈಲಾರಲಿಂಗ ಸ್ವಾಮಿಗೆ ವಿವಿಧ ಸೇವೆ, ಹರಕೆಗಳನ್ನು ತೀರಿಸಿ ವಾಪಾಸ್ಸಾದರು. ರೈತರಿಗೆ ಅಗತ್ಯವಾದ ಕೃಷಿ ಸಲಕರಣಿಗಳು ಇಲ್ಲಿ ಮಾರಾಟಕ್ಕೆ ಲಭ್ಯವಿರುವುದರಿಂದ  ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಿದರು.ಜಾತ್ರಾ ಸಮಯದಲ್ಲಿ  ಮನೋರಂಜನೆ ನೀಡಲು ಸರ್ಕಸ್, ನಾಟಕ ಕಂಪೆನಿಗಳು, ಇನ್ನಿತರೆ ಸಾಂಸ್ಕೃತಿಕ ತಂಡಗಳು ಬಿಡಾರ ಹೂಡಿದ್ದವು.ನಾನಾ ಇಲಾಖೆಗಳಿಂದ ವಸ್ತು ಪ್ರದರ್ಶನ ಜಾತ್ರೆಯಲ್ಲಿ ಗಮನ ಸೆಳೆಯಿತು. 

ಮೈಲಾರ ಲಿಂಗೇಶ್ವರ ದೇವಸ್ಥಾನ ಮುಂದೆ ಅವ್ವ, ಅಪ್ಪ, ಬಂಧು-ಬಾಂಧವರು ಕೈಮುಗಿದು, ನಿಲ್ಲುತ್ತಿದ್ದ ಚಾಟಿಸೇವೆ, ಕಾಯಿ-ಹಣ್ಣು ಸೇವೆ ಹರಕೆ ಸಲ್ಲಿಸುತ್ತಿದ್ದರು. ಇಂತಹ ಪವಿತ್ರ ಜಾಗದಲ್ಲಿ ಮೈಲಾರನನ್ನು ಆಧುನಿಕವಾಗಿ ಕಣ್ತುಂಬಿಕೊಳ್ಳುತ್ತಿದ್ದರು.