ಲೋಕದರ್ಶನ ವರದಿ
ಹೂವಿನ ಹಡಗಲಿ 22: ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಹೂವಿನ ಹಡಗಲಿ ತಾಲೂಕಿನ ಹಿರೆಕೊಳಚಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ತೀವ್ರ ಮಳೆಯಾಗಿ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ಹರಿದಿದೆ. ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಚಿಕ್ಕ ಕೊಳಚಿ ಗ್ರಾಮದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಗ್ರಾಮದ ರಸ್ತೆ ಬದಿ, ಮತ್ತು ಕಣಗಳಲ್ಲಿ ರೈತರು ಸಂಗ್ರಹಿಸಿದ್ದ ಬೆಳೆಗಳ ರಾಶಿ ಜಲಾವೃತವಾಗಿವೆ.
ತುಂಗಭದ್ರಾ ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಇದರಿದ ಜಿಲ್ಲೆಯ ತುಂಗಭದ್ರಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಣೆಕಟ್ಟೆಯಿಂದ ನದಿಗೆ 1.05 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಹೊರಹರಿವು 1.50 ಲಕ್ಷ ಕ್ಯೂಸೆಕ್ ಗೆ ಹೆಚ್ಚುವ ನಿರೀಕ್ಷೆ ಇದೆ. ಅಣೆಕಟ್ಟೆಗೆ ಕೆಳಭಾಗದ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.