ಬನ್ನಿ ಬನ್ನಿ ತಾಜಾ ತರಕಾರಿ! ಕುರ್ಲಿ ಶಾಲೆಯಲ್ಲಿ ಮಕ್ಕಳ ಸಂತೆ: ಮಾರಾಟದಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮೆರಗು!

 ಬನ್ನಿ ಬನ್ನಿ ತಾಜಾ ತರಕಾರಿ! ಕುರ್ಲಿ ಶಾಲೆಯಲ್ಲಿ ಮಕ್ಕಳ ಸಂತೆ: ಮಾರಾಟದಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮೆರಗು! fresh vegetables! Children's festival at Kurli School: Students' confidence in sales soars!

ಲೋಕದರ್ಶನ ವರದಿ  

ಮುಂಡಗೋಡ  18: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಸಾಮಾನ್ಯವಾಗಿ ತರಕಾರಿ ಮತ್ತು ದಿನಸಿ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸುತ್ತಾರೆ. ಆದರೆ ಇದೇ ತರಕಾರಿ ಹಾಗೂ ವಿವಿಧ ವಸ್ತುಗಳನ್ನು ಶಾಲಾ ಆವರಣದಲ್ಲೇ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಮಾರಾಟ ಮಾಡುತ್ತಿರುವುದು ವಿಶೇಷವಾಗಿ ಗಮನಸೆಳೆಯಿತು.   ಮುಂಡಗೋಡ ತಾಲ್ಲೂಕಿನ ಕುರ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಮಕ್ಕಳ ಸಂತೆ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮಕ್ಕಳಿಗೆ ಪಾಠ್ಯಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನ, ಹಣಕಾಸು ಅರಿವು ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕುರ್ಲಿ ಶಾಲೆಯಲ್ಲಿ ನಡೆದ ಈ ಸಂತೆ ಸಾರ್ವಜನಿಕರು ಹಾಗೂ ಪಾಲಕರಿಂದ ಮೆಚ್ಚುಗೆ ಪಡೆದಿತು. ಮಕ್ಕಳು ಟೊಮೆಟೊ, ಮೂಲಂಗಿ, ಬದನೆಕಾಯಿ, ಬೀನ್ಸ್‌, ತೆಂಗಿನಕಾಯಿ ಸೇರಿದಂತೆ ವಿವಿಧ ತರಕಾರಿಗಳು, ಹಣ್ಣುಗಳು, ಗೆಡ್ಡೆ-ಗೆಣಸುಗಳು, ತಿಂಡಿ-ತಿನಿಸುಗಳು, ತಂಪು ಪಾನೀಯಗಳು ಹಾಗೂ ರೈತರು ಬೆಳೆದ ವಿವಿಧ ಉತ್ಪನ್ನಗಳನ್ನು ಸುಂದರವಾಗಿ ಅಳವಡಿಸಿ ಮಾರಾಟಕ್ಕೆ ಇಟ್ಟಿದ್ದರು. ಕೆಲವರು ಪಠ್ಯಪುಸ್ತಕಗಳು ಮತ್ತು ಪೆನ್ನುಗಳನ್ನೂ ಮಾರಾಟ ಮಾಡಿದರು. “ಬನ್ನಿ ಬನ್ನಿ ತಾಜಾ ತರಕಾರಿ” ಎಂದು ಕೂಗಿ ಗ್ರಾಹಕರನ್ನು ಆಕರ್ಷಿಸಿದ ವಿದ್ಯಾರ್ಥಿಗಳ ಚಟುವಟಿಕೆ ನೈಜ ಮಾರುಕಟ್ಟೆಯ ಅನುಭವವನ್ನು ಮೂಡಿಸಿತು. ವಿದ್ಯಾರ್ಥಿಗಳು ಸ್ವತಃ ದರ ನಿಗದಿ ಮಾಡಿ, ಲೆಕ್ಕಪತ್ರ ನೋಡಿಕೊಂಡು, ಬದಲಾವಣೆ ಹಣ ನೀಡುವ ಮೂಲಕ ವ್ಯವಹಾರಿಕ ಕೌಶಲ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹಕರಿಸಿದರು. ಎಸ್‌ಡಿಎಂಸಿ ಅಧ್ಯಕ್ಷರಾದ ಸಂತೋಷ್ ಹೆಗಡೆ, ಮಾಜಿ ಅಧ್ಯಕ್ಷ  ಗಣೇಶ್ ನಾಯ್ಕ, ಶಿವಪ್ಪ ಅಟ್ಟಣಗಿ, ಅಶೋಕ್ ನಾಯ್ಕ, ಗಾಯತ್ರಿ ನಾಯ್ಕ್‌, ಸಂದೀಪ್ ಮೇಲಿನಕೇರಿ ಸೇರಿದಂತೆ ಗ್ರಾಮಸ್ಥರು, ಪಾಲಕ,ಪೋಷಕರು ಮತ್ತು ಬಿಸಿಊಟದ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.