ಭೋಪಾಲ್/ಶಾಜಾಪುರ್,ನ.29- ನಿನ್ನೆ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ವೇಳೆ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ವ್ಯಾಪಕ ದುರುಪಯೋಗವಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಇದನ್ನು ಸಾಬೀತು ಮಾಡುವ ಘಟನೆಯೊಂದು ನಡೆದಿದೆ.
ಶಾಜಾಪುರ್ನ ಶುಜಾಲ್ಪುರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿ ಖಾಸಗಿ ಹೋಟೆಲ್ ಒಂದರಲ್ಲಿ ಇವಿಎಂ ಮತ್ತು ಇತರ ಚುನಾವಣಾ ಸಾಮಗ್ರಿಗಳೊಂದಿಗೆ ಸಿಕ್ಕಿಬಿದ್ದಿರುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನದ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಶುಜಾಲ್ಪುರ್ನ ರಾಜಮಹಲ್ ಹೋಟೆಲ್ನಲ್ಲಿ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತ ಯಂತ್ರಗಳು ಮತ್ತು ಇತರ ಚುನಾವಣಾ ಸಾಮಗ್ರಿಗಳೊಂದಿಗೆ ವಾಸ್ತವ್ಯ ಹೂಡಿರುವುದು ಈ ದೃಶ್ಯಗಳಲ್ಲಿವೆ. ಇದು ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಹೋಟೆಲ್ ಎಂಬುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ನಿನ್ನೆ ನಡೆದ ಚುನಾವಣೆಗೆ ಹಿಂದಿನ ದಿನ ಅಂದರೆ ನ.27ರಂದು ರಾತ್ರಿ ಚುನಾವಣಾ ಸಿಬ್ಬಂದಿ ಇವಿಎಂಗಳ ಮತ್ತು ಮತದಾನಕ್ಕೆ ಸಂಬಂಧಪಟ್ಟ ಇತರ ಯಂತ್ರೋಪಕರಣಗಳೊಂದಿಗೆ ಅಲ್ಲಿ ವಾಸ್ತವ್ಯ ಹೂಡಿದ್ದರು.
ಈ ಸಂಬಂಧ ಮೋಹನ್ಲಾಲ್ ಮತ್ತು ಇತರ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇವಿಎಂಗಳನ್ನು ಚುನಾವಣಾ ಆಯೋಗ ನಿಗದಿಗೊಳಿಸಿರುವ ಸ್ಥಳದಲ್ಲೇ ವ್ಯಾಪಕ ಬಂದೋಬಸ್ತ್ ನಡುವೆ ಇರಿಸಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಖಾಸಗಿ ಹೋಟೆಲ್ನಲ್ಲಿ ಇವು ಪತ್ತೆಯಾಗಿರುವುದು ವಿರೋಧಪಕ್ಷಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಚುನಾವಣೆ ವೇಳೆ ಕೆಲವು ಮತಗಟ್ಟೆಗಳಲ್ಲಿ ಇವಿಎಂ ದೋಷಗಳು ಮತ್ತು ಅಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ವ್ಯಾಪಕ ದೂರುಗಳು ಈಗಾಗಲೇ ಕೇಳಿಬಂದಿವೆ. ಮತ ಯಂತ್ರಗಳನ್ನು ತಿರುಚಬಹುದಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಆರೋಪಿಸಿ ಮರುಮತದಾನಕ್ಕೆ ಆಗ್ರಹಿಸಿವೆ.