ಕೂಡ್ಲಿಗಿ04: ತಾಲ್ಲೂಕಿನಾದ್ಯಾಂತ ಮುಂಗಾರು ಮಳೆ ಅಬ್ಬರದಿಂದ ಪ್ರಾರಂಭವಾಗಿ ಕಳೆದ ಹದಿನೈದು ದಿನಗಳಿಂದ ಕಣ್ಮರೆಯಾಗಿರುವ ವರುಣನ ಕೃಪೆಗಾಗಿ ಪಟ್ಟಣದಲ್ಲಿ ಮಳೆ ಮಲ್ಲಪ್ಪನ ಪೂಜೆ ಮಾಡಲಾಯಿತು.
ಬೆಳಿಗ್ಗೆ ಎಲ್ಲಾ ಗ್ರಾಮಸ್ಥರು ಸೇರಿ ಗ್ರಾಮ ದೇವತೆಗೆ ಪೂಜೆ ಮಾಡಿ ಗ್ರಾಮ ದೇವತೆಯ ಹೊಂಡದಿಂದ 101 ಕೊಡ ತಂದು ಊರ ಮುಂದಿನ ಬುಡ್ಡೇಕಲ್ಲಿಗೆ ನೀರಿನ ಅಭಿಷೇಕ ಮಾಡಲಾಯಿತು. ನಂತರ ದೈವಸ್ಥರು ಸೇರಿ ಊರಮ್ಮನ ಹೊಂಡದಲ್ಲಿ ಗಂಗೆ ಪೂಜೆಯನ್ನು ನೆರವೇರಿಸಿ, ಹೊಸ ಮಡಿಕೆಯಲ್ಲಿ ಗಂಗೆಯನ್ನು ತಂದು ಊರಮ್ಮನ ದೇವಸ್ಥಾನದ ಪ್ರಾಂಗಣದಲ್ಲಿ ವಿದಿ ವಿಧಾನಗಳ ಮೂಲಕ ಜೋಳದ ಕಾಳುಗಳ ರಾಶಿ ಹಾಕಿ ಅದರ ಮೇಲೆ ನೀರು ತುಂಬಿದ ಮಡಿಕೆಯನ್ನು ಮಳೆ ಮಲ್ಲಪ್ಪನ ಹೆಸರಿನಲ್ಲಿ ಪ್ರತಿಷ್ಠಾಪನೆ ಮಾಡಿದರು. ಮಡಿಕೆಯ ಮೇಲೆ ಹೊಸ ಮೊರವನ್ನು ಬೋರಲು ಹಾಕಿ, ಅದರ ಮೇಲೆ ಈ ಮೊದಲೇ ಪೂಜಿಸಿ ಕರೆತಂದಿರುವ ಬಣಕಾರ ವಂಶಸ್ಥರ ಬಾಲಕನೊಬ್ಬನನ್ನು ಕೂಡಿಸಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಪೂಜೆಯನ್ನು ನಡೆಸಲಾಯಿತು. ನಂತರ ಪಟ್ಟಣದ ಪ್ರಮುಖರು ಮಳೆಮಲ್ಲಪನ ಆವಾಹನೆಯಾಗಿರುವ ಬಾಲಕನ ಮಳೆಯ ಕುರಿತು ಹೇಳಿಕೆಯನ್ನು ಕೇಳಿದರು.
ಮಡಕೆ ಬಲ ದಿಕ್ಕಿಗೆ ತಿರುಗಿದರೆ ಉತ್ತಮ ಮಳೆಯಾಗುವುದು ಎಂದು ಮಳೆಯ ಭವಿಷ್ಯವನ್ನು ನಿರ್ಧರಿಸಲಾಗುವುದು. ಈ ಬಾರಿ ಮಡಕೆ ಉತ್ತಮವಾಗಿ ಬಲದಿಕ್ಕಿಗೆ ತಿರುಗಿದ್ದರಿಂದ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಊರಿನ ದೈವಸ್ಥರು ಮಳೆ ಮಲ್ಲಪ್ಪನ ಪೂಜೆಯನ್ನು ಸಂಪನ್ನಗೊಳಿಸಿ ಸೇರಿದ್ದ ಜನತೆಗೆ ಪ್ರಸಾದ ವಿನಿಯೋಗ ಮಾಡಿದರು.
ಪಟ್ಟಣದ ಪ್ರಮುಖರಾದ ಹಿ.ಮ. ತಿಪ್ಪೇಸ್ವಾಮಿ, ಬಣಕಾರ ಮಂಜುನಾಥ, ಮಲ್ಲಾಪುರ ಭರಮಣ್ಣ, ಸಣ್ಣ ತಿಮ್ಮಣ್ಣ, ಅಂಗಡಿ ಗಣೇಶ್, ಅಕ್ಕಸಾಲಿ ನಾಗರಾಜ, ಪೂಜಾರಿ ಈರಣ್ಣ, ಬಾಣದ ಮೂತರ್ಿ, ಸಣ್ಣ ಕೊತ್ಲಪ್ಪ, ಸೋಗಿ ಗುರುಸಿದ್ದಪ್ಪ, ನರಸಿಂಹಪ್ಪ ಸೇರಿದಂತೆ ಅನೇಕರ ದೈವಸ್ಥರು ಪಾಲ್ಗೊಂಡಿದ್ದರು.