ಬೆಳಗಾವಿ: ಸಂಭ್ರಮದ ವುಮೇನಿಯಾ ಹೋಳಿ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 22: ಭಾರತೀಯ ಸಂಸ್ಕೃತಿಯ ಸಂಗಮವಾಗಿರುವ ಕುಂದಾನಗರಿಯಲ್ಲಿ ಸಾವಿರಾರು ಮಹಿಳೆಯರು ಒಂದೇ ಸ್ಥಳದಲ್ಲಿ ಬಣ್ಣದೋಕುಳಿ ಆಡಿ, ಐದು ಘಂಟೆಗಳ ಕಾಲ ಸಾಮೂಹಿಕವಾಗಿ ಹೆಜ್ಜೆ ಹಾಕಿ ಸಂಭ್ರಮಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹರ್ಷ ಶುಗರ್ಸ ಮಹಿಳೆಯರಿಗಾಗಿಯೇ ಆಯೋಜಿಸಿದ ವುಮೇನಿಯಾ ಹೋಳಿ ಮುಖ್ಯ ವೇದಿಕೆಯಾಯಿತು. ಪುರುಷರಂತೆ ಮಹಿಳೆಯರು ನಿಶ್ಚಿಂತವಾಗಿ ನಿರಾತಂಕವಾಗಿ ಬಣ್ಣದ ಹಬ್ಬ ಆಚರಿಸಬೇಕು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷದ ಹಿಂದೆ ಲಕ್ಷ್ಮೀ ಹೆಬ್ಬಾಳಕರ ಅವರು ಮಹಿಳೆಯರ ಸಂಭ್ರಮಕ್ಕಾಗಿ ವುಮೇನಿಯಾ ಹೋಳಿ ಕಾರ್ಯಕ್ರಮ ಆರಂಭಿಸಿದರು ಈ ಕಾರ್ಯಕ್ರಮ ಈ ವರ್ಷ ಸಾವಿರಾರು ಮಹಿಳೆಯರು ಒಟ್ಟಿಗೆ ಬಣ್ಣದಾಟವಾಡಿ ಕುಣಿದು ಕುಪ್ಪಳಿಸಲು ಕಾರಣವಾಯಿತು. 

ಬೆಳಿಗ್ಗೆ 9 ಘಂಟೆಗೆ ಬೆಳಗಾವಿಯ ಕ್ಲಬ್ ರಸ್ತೆಯ ಬೆಲಗಾಮ್ ಕ್ಲಬ್ ನಲ್ಲಿ ಆರಂಭವಾದ ವುಮೇನಿಯಾ ಹೋಳಿಗೆ ಮಹಿಳೆಯರು, ಯುವತಿಯರು ತಂಡೋಪ ತಂಡವಾಗಿ ಬಂದು ಭಾಗವಹಿಸಿ ವುಮೇನಿಯಾ ಹೋಳಿಯ ರಂಗೇರಿಸಿದರು. 

ವುಮೇನಿಯಾ ಆವರಣದಲ್ಲಿ ವಿವಿಧ ಬಣ್ಣ ತುಂಬಿದ ಬುಟ್ಟಿಗಳು, ಕಲರ್ ತುಂಬಿದ ಬಲೂನ್ ಗಳು, ಸೆಲ್ಫಿ ಕಾರ್ನರ್, ರೇನ್ ಡ್ಯಾನ್ಸ  ಸೇರಿದಂತೆ ವಿವಿಧ ಬಗೆಯ ವ್ಯವಸ್ಥೆ ಮಾಡಲಾಗಿತ್ತು ಒಟ್ಟಾರೆ ಸಾವಿರಾರು ಮಹಿಳೆಯರು ವುಮೇನಿಯಾ ಬಣ್ಣದ ಹೊಂಡದಲ್ಲಿ ಮಿಂದೆದ್ದರು. 

ಮುಂಬೈ ಮೂಲದ ಪ್ರಸಿದ್ದ ಡಿಜೆ ಕಂಪನಿಯ ಭಾಂಗಡಾ ವಾದ್ಯಕ್ಕೆ ಮಹಿಳೆಯರು ಯುವತಿಯರು ಮಕ್ಕಳು ನಿರಾತಂಕವಾಗಿ ಹೆಜ್ಜೆ ಹಾಕಿ ಬಣ್ಣದ ಹಬ್ಬಕ್ಕೆ ಮೆರಗು ತಂದಿದ್ದು ವಿಶೇಷವಾಗಿತ್ತು. 

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಭಾರತೀಯ ಸಂಸ್ಕೃತಿಯ ಕೂಡಲ ಸಂಗಮ ಇಲ್ಲಿ ವೈಶಿಷ್ಟಪೂರ್ಣವಾಗಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ ಜಾತಿ,ಭಾಷೆಯ ಬೇಧಭಾವ ಇಲ್ಲದೇ ಇಲ್ಲಿಯ ಜನ ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಾರೆ ಪುರುಷರಂತೆ ಮಹಿಳೆಯರೂ ಸಂಭ್ರಮಿಸಬೇಕು ಅವರೂ ನಿರಾತಂಕವಾಗಿ ಸಾಮೂಹಿಕವಾಗಿ ಹಬ್ಬ ಆಚರಿಸಬೇಕು ಎನ್ನುವ ಉದ್ದೇಶದಿಂದ ವುಮೇನಿಯಾ ಹೋಳಿ ಆಚರಿಸಲಾಗುತ್ತಿದೆ ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ವುಮೇನಿಯಾ ಹೋಳಿಯಲ್ಲಿ ವರ್ಷ ಕಳೆದಂತೆ ಭಾಗವಹಿಸುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಹರ್ಷ  ಶುಗರ್ಸ ಪ್ರಾಯೋಜಕತ್ವದಲ್ಲಿ ನಡೆದ ವುಮೇನಿಯಾ ಹೋಳಿಯಲ್ಲಿ ಸಂಗ್ರಹವಾದ ಪ್ರವೇಶ ಶುಲ್ಕವನ್ನು ಹುತಾತ್ಮ ಯೋದರ ನಿಧಿಗೆ ಸಮರ್ಪಿಸಲಾಗುವದು ಎಂದು ಹೆಬ್ಬಾಳಕರ ತಿಳಿಸಿದರು. 

ವುಮೇನಿಯಾ ಹೋಳಿಯಲ್ಲಿ ಹೆಬ್ಬಾಳಕರ ಅವರ ತಾಯಿ ಮತ್ತು ಸಹೋದರಿಯರು ಎಲ್ಲರ ಗಮನ ಸೆಳೆದರು ಮಾಜಿ ಶಾಸಕ ಫಿರೋಜ್ ಸೇಠ ಅವರ ವುಮೇನಿಯಾ ಹೋಳಿಯ ಮುಖ್ಯ ಅತಿಥಿಯಾಗಿದ್ದು ವಿಶೇಷ.