ಅಥಣಿ 10: ಜಾನುವಾರುಗಳ ಮಾರಾಟ ಹಾಗೂ ಖರೀದಿಯಂತಹ ಬಹುದೊಡ್ಡ ಮಾರುಕಟ್ಟೆ ಇತ್ತೀಚಿಗೆ ಸಾಕಷ್ಟು ಪ್ರಮಾಣದಲ್ಲಿ ಕುಸಿಯುತ್ತಿದೆ ಎನ್ನುವ ಮಾತಿಗೆ ಅಪವಾದವೆನ್ನುವಂತೆ ತಾಲೂಕಿನ ಮುರಗುಂಡಿಯ ಮುರಸಿದ್ದೇಶ್ವರ ದೇವರ ಜಾತ್ರೆಯಲ್ಲಿ ನೆರೆದ ಸಾವಿರಾರು ದನಗಳ ಹಿಂಡೆ ಸಾಕ್ಷಿಯಾಗಿತ್ತು.
ದೊಡ್ಡ ಬಯಲಿನಲ್ಲಿ ಸಾವಿರಾರು ದನಗಳು, ಅವುಗಳೊಂದಿಗೆ ದನಗಳ ಮಾಲಿಕರು, ಅವರ ಪರಿವಾರ ಹೀಗೆ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ಊರುಗಳಿಂದ ದನಗಳ ಜಾತ್ರೆಗೆ ಆಗಮಿಸಿದ ರೈತರಿಗೆ ತಾಲೂಕಿನ ಮುರಗುಂಡಿ ಮುರಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಐದನೇ ಬಾರಿಗೆ ನಡೆದ ದನಗಳ ಜಾತ್ರೆ ಬಹುದೊಡ್ಡ ಮಾರುಕಟ್ಟೆ ಒದಗಿಸಿಕೊಟ್ಟಿತು.
ಸಾವಿರಾರು ಸಂಖ್ಯೆಯಲ್ಲಿ ಬಂದ ನೂರಾರು ತರಹದ ತಳಿಗಳ ದನಗಳನ್ನು ಅವುಗಳ ವಿಶೇಷತೆಗಳೊಂದಿಗೆ ಮಾರಾಟಮಾಡಲು ಸಾಕಷ್ಟು ಸಂಖ್ಯೆಯಲ್ಲಿ ರೈತಬಾಂಧವರು ಆಗಮಿಸಿದ್ದರು. ದನಗಳ ಜಾತ್ರೆಗೆ ಆಗಮಿಸಿದ್ದ ದನಗಳಿಗೆ ಹುಲ್ಲು, ಹಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಜಾತ್ರೆಗೆಂದೆ ಬಂದ ರೈತ ಕುಟುಂಬದವರಿಗೂ ಸಹ ಲೈಟು, ನೀರು, ಶೌಚಾಲಯ, ಸ್ನಾನಗೃಹಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಜಾತ್ರಾ ಕಮೀಟಿಯ ವತಿಯಿಂದ ಮಾಡಲಾಗಿತ್ತು.
ಜಾತ್ರೆಯಲಿ ಮುರಗುಂಡಿಯ ಮಹಾದೇವ ಪಾಟೀಲ ಇವರ ದನದ ತಳಿ ಅತ್ಯಂತ ಹೆಚ್ಚಿನ ಮೊತ್ತ ಒಂದು ಲಕ್ಷ ಹತ್ತು ಸಾವಿರ ರೂ ಗಳಿಗೆ ಮಾರಾಟವಾದರೆ, ತಾಲೂಕಿನ ತೆವರಟ್ಟಿ ಗ್ರಾಮದ ರಾಜು ಅನಗಾತಿ ಇವರು ದನಗಳನ್ನು ಖರೀದಿಸಿದರು. ಅಲ್ಲದೆ ಸಾಕಷ್ಟು
ಇತ್ತೀಚಿಗೆ ಮಾಯವಾಗುತ್ತಿರುವ ಕೆಲವೊಂದು ಅಪರೂಪದ ತಳಿಗಳೂ ಸಹ ಖರೀದಿ ಹಾಗೂ ಮಾರಾಟವಾದವು. ಇದೇ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ವತಿಯಿಂದ ವಿವಿಧ ತಳಿಯ ಉತ್ತಮ ಜಾನಾವಾರುಗಳಿಗೆ ಪ್ರಶಸ್ತಿ ನೀಡಲಾಯಿತು. ಭರಮಾ ಮಗಾಡಿ, ಕುಮಾರ ಸಣಮುರಿ, ನಿಂಗಪ್ಪ ಗವಡಿ, ನಿಂಗಪ್ಪ ಮಗಾಡಿ,ಬಲಾಜಿ ಸಣಮುರೆ, ಹನಮಂತ ಶೆಷುಗೋ ಳ, ಮಾಹಾದೇವ ಪಾಟೀಲ, ಕಲ್ಲಪ್ಪ ನಿಂಗನೂರೆ, ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜಾನುವಾರುಗಳಿಗೆ ಸಂಬಂಧಿಸಿದಂತರೆ ಅವುಗಳಿಗೆ ಕಟ್ಟಲು ಬೇಕಾದ ಕಂಡೆ, ಸರಪಳಿ, ಹಗ್ಗಗಳು, ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳು, ಕೋಡುಗಳಿಗೆ, ಕಾಲುಗಳಿಗೆ ಕಟ್ಟುವಂತಹ ಗೆಜ್ಜೆಗಳು ಹೀಗೆ ದನಗಳ ಜಾತ್ರೆಗೆ ಸಂಬಂಧಿಸಿದ ಎಲ್ಲ ವಸ್ತುಗಳಿಗೂ ಸಹ ಜೋರಾದ ವ್ಯಾಪಾರ ನಡೆಯಿತು, ಸಾಕಷ್ಟು ಪ್ರಮಾಣದಲ್ಲಿ ಈ ವಸ್ತುಗಳು ಖರೀದಿಯಾದವು.
ಸೇವಸ್ಥಾನದ ಹಿಂದಿನ ಆವರಣದಲ್ಲಿ ಬಹುದೊಡ್ಡ ಜಾಗೆಯಲ್ಲಿ ಜಾನುವಾರಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯಿತು, ಐದನೇ ಬಾರಿಗೆ ಆಯೋಜಿಸಿದ ದನಗಳ ಈ ಜಾತ್ರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮುಂದಿನ ದಿನಗಳಲ್ಲಿ ನಡೆಯಲಿ, ಜಾತ್ರೆಯಲ್ಲಿ ಬೇರೆ, ಬೇರೆ ರಾಜ್ಯಗಳ ದನಗಳ ತಳಿಗಳೂ ಸಹ ಭಾಗವಹಿಸುವಂತಹ ಪ್ರಯತ್ನವಾಗಬೇಕು ಎನ್ನುತ್ತಾರೆ ಗ್ರಾಮದ ಹಿರಿಯರು.