ಕಾರವಾರ , ಏ 18 ಮೇ 23 ರ ಚುನಾವಣೆ ಫಲಿತಾಂಶದ ಬಳಿಕ ಎಲ್ಲಿದ್ದೀಯಪ್ಪ ಅನಂತಕುಮಾರ್ ಎನ್ನಬೇಕಾಗುತ್ತದೆ ಎಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹ್ಯಾಶ್ ಟ್ಯಾಗ್ ಮೂಲಕ ಸಾಮಾಜಿಕ ಜಾಲ ತಾಣದಲ್ಲಿನ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಕುಮಟಾದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರ ಮಾಡಿದ ಅವರು, ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ.
ತಮ್ಮ ಮಗ ಈ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುತ್ತಾನೆ. ಚುನಾವಣೆ ಮುಗಿದ ಬಳಿಕ ಇವರೆಲ್ಲಾ ಎಲ್ಲಿರುತ್ತಾರೋ ಗೊತ್ತಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ದ ಟೀಕಾ ಪ್ರಹಾರ ನಡೆಸಿದರು. ಮಾಧ್ಯಮದಲ್ಲಿ ಕೇವಲ ಮಂಡ್ಯ ಮತ್ತು ಸುಮಲತಾ ಮಾತ್ರ ತೋರಿಸಲಾಗುತ್ತಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳಲ್ಲಿ ಸ್ಥಾನ ಸಿಗದೇ ಕಳೆದುಹೋಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಬಿಜೆಪಿ ಅಭ್ಯರ್ಥಿಗಳು ಮೋದಿ ಅವರ ಫೋಟೋ ಇಟ್ಟುಕೊಂಡೇ ಮತ ಕೇಳಲು ಹೋಗಬೇಕು. ಕಳೆದೆರಡು ತಿಂಗಳಿಂದ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕರು ಮೆರೆಸುತ್ತಿದ್ದಾರೆ. ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.