ಪುರಸಭೆ ಅಧ್ಯಕ್ಷೆಯಾಗಿ ಜುಬೇದಾ ಜಮಾದಾರ, ಉಪಾಧ್ಯಕ್ಷೆಯಾಗಿ ಗೌರಮ್ಮ ಕುಂಬಾರ ಆಯ್ಕೆ

Zubeda Jamadara was elected as Municipal President and Gouramma Kumbara as Vice President

ತಾಳಿಕೋಟಿ, 10;  ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜುಬೇದಾ ಹುಸೇನ ಭಾಷಾ ಜಮಾದಾರ ಅಧ್ಯಕ್ಷೆ ಹಾಗೂ ಗೌರಮ್ಮ ಅವಣ್ಣ ಕುಂಬಾರ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬಂದಂತಾಗಿದೆ. 

ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಟ್ಟಣದ 20ನೇ ವಾರ್ಡ್‌ ನ ಜುಬೇದಾ ಹುಸೇನ್ ಭಾಷಾ ಜಮಾದಾರ ಇವರು ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡಿನ ಸದಸ್ಯೆ ಗೌರಮ್ಮ ಅವಣ್ಣ ಕುಂಬಾರ ಹಾಗೂ ಎಂಟನೇ ವಾರ್ಡಿನ ಸದಸ್ಯೆ ಶಾಂತಾಬಾಯಿ ನಿಂಗಪ್ಪ ಹೊಟ್ಟಿ ಇವರು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಸಮಯದಲ್ಲಿ ಉಪಾಧ್ಯಕ್ಷ ಸ್ಥಾನದ ಶಾಂತಾಬಾಯಿ ನಿಂಗಪ್ಪ ಹೊಟ್ಟಿ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದರಿಂದ ಜುಬೇದಾ ಜಮಾದಾರ ಅಧ್ಯಕ್ಷರಾಗಿ ಹಾಗೂ ಗೌರಮ್ಮ ಕುಂಬಾರ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಸಿಲ್ದಾರ್ ಕೀರ್ತಿ ಚಾಲಕ್ ಘೋಷಿಸಿದರು.  

ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಚುನಾವಣಾ ಸಭೆಯಲ್ಲಿ ಒಟ್ಟು 17 ಜನ ಸದಸ್ಯರು ಭಾಗವಹಿಸಿದ್ದರು. ಶುಭ ಕೋರಿದ ಶಾಸಕ ನಾಡಗೌಡ: ಸದರಿ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯ ಘೋಷಣೆಯಾಗುತ್ತಿದ್ದಂತೆಯೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಪುರಸಭೆಗೆ ಆಗಮಿಸಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದಿಸಿ ಶುಭ ಕೋರಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 22 ತಿಂಗಳುಗಳಿಂದ ಅಧಿಕಾರದ ಕೊರತೆಯಿಂದ ಪಟ್ಟಣದಲ್ಲಿ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿತ್ತು. ಸದ್ಯ ಆಡಳಿತ ರಚನೆಯಾಗಿದ್ದು ಸಂತಸ ಮೂಡಿಸಿದೆ. ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಇನ್ನುಳಿದ ಸದಸ್ಯರನ್ನು ಒಮ್ಮತಕ್ಕೆ ಪಡೆದು ಪಟ್ಟಣದ ಅಭಿವೃದ್ಧಿ ಮಾಡಬೇಕು ಇದರಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುವುದು ಬೇಡ, ಈಗಾಗಲೇ ಎಸ್‌ಎಫ್ಸಿ ಯೋಜನೆ ಅಡಿ ಏಳು ಕೋಟಿ ಅನುದಾನದ ಇದೆ, ಇದಕ್ಕೆ ಕ್ರಿಯಾಯೋಜನೆಯನ್ನು ಆದಷ್ಟು ಬೇಗ ರೂಪಿಸಿ ಕೆಲಸ ಆರಂಭಿಸಿ ನಾನು ಸಹ ಸರ್ಕಾರದ ಅನುದಾನವನ್ನು ಪ್ರಾಮಾಣಿಕವಾಗಿ ಒದಗಿಸಲು ಪ್ರಯತ್ನಿಸುತ್ತೇನೆ ಎಂದ ಅವರು ಜನರು ನಮ್ಮ ಪಕ್ಷದ ಮೇಲೆ ಇಟ್ಟ ಭರವಸೆ ನಮ್ಮ ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟರಾಗಿದ್ದರಿಂದ ಜನರು ನಮಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದ ಅವರು ಪಟ್ಟಣಕ್ಕೆ ನಿಮ್ಮಿಂದ ಒಳ್ಳೆಯದಾಗಲೆಂದು ಹಾರೈಸುತ್ತೇನೆ ಎಂದರು.  

ಈ ವೇಳೆ ಪಕ್ಷದ ಮುಖಂಡರಾದ ಬಿ.ಎಸ್‌. ಪಾಟೀಲ ಯಾಳಗಿ, ಪ್ರಭುಗೌಡ ಮದರ್ಕಲ್, ಸಿದ್ದನಗೌಡ ಪಾಟೀಲ ನಾವದಗಿ, ಶರಣು ದಣಿ ದೇಶಮುಖ, ಸಂಗನಗೌಡ ಅಸ್ಕಿ, ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ಪರಶುರಾಮ ತಂಗಡಗಿ, ಅಣ್ಣಪ್ಪ ಜಗತಾಪ, ಡಿ.ವಿ.ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಾಸೂಮಸಾಬ್ ಕೆಂಭಾವಿ, ಹುಸೇನ ಜಮಾದಾರ, ಅಬ್ದುಲ್ ಸತ್ತಾರ ಅವಟಿ, ಕಾಶಿನಾಥ್ ಕುಂಬಾರ, ಸದ್ದಾಂ ಮನಗೂಳಿ, ಫಯಾಜ್ ಉತ್ನಾಳ, ಮುನ್ನಾ ಅರ್ಜುಣಗಿ, ಮೆಹಬೂಬ್ ಕೆಂಭಾವಿ, ಆಸಿಫ್ ಕೆಂಭಾವಿ ಮತ್ತಿತರರು ಇದ್ದರು.