ಬೆಂಗಳೂರು, ಜ. 6, ಅಲ್ಪಸಂಖ್ಯಾತ ಮುಸಲ್ಮಾನರ ಮೇಲೆ ಬಹುಸಂಖ್ಯಾತ ಹಿಂದೂಗಳು ಕತ್ತಿ ಝಳಪಿಸಬೇಕೆಂದು ಹೇಳಿಕೆ ನೀಡಿದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಶಾಸಕ ಹಾಗೂ ಮುಸಲ್ಮಾನ ಸಮಾಜದ ಮುಖಂಡ ಜಮೀರ್ ಅಹ್ಮದ್ , ಬಳ್ಳಾರಿಗೆ ಬರುತ್ತೇನೆ ಏನು ಮಾಡಿತ್ತಿಯೋ ನೋಡುತ್ತೇನೆ ಎಂದು ಪಂಥಾಹ್ವಾನ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸೋಮಶೇಖರ್ ರೆಡ್ಡಿ ಹೇಳಿಕೆಗೆ ನಗರದಲ್ಲಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ " ಮಿಸ್ಟರ್ ಸೋಮಶೇಖರ್ ರೆಡ್ಡಿ I Am Coming to bellary" . ಮುಂದಿನ ಸೋಮವಾರ ಸೋಮಶೇಖರ್ ಮನೆ ಮುಂದೆ ಧರಣಿ ನಡೆಸುತ್ತೇವೆ. ರೆಡ್ಡಿ ಯಾವ ರೀತಿಯ ಖಡ್ಗ ತರುತ್ತಾನೆಯೋ ನೋಡುತ್ತೇವೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.ಪ್ರಚೋದನಕಾರಿ ಹೇಳಿಕೆ ನೀಡಿರುವ ರೆಡ್ಡಿಯನ್ನು ಮುಂದಿನ ಸೋಮವಾರದ ಒಳಗಾಗಿ ಪೊಲೀಸರು ಬಂಧಿಸಬೇಕು. ಇಲ್ಲದಿದ್ದಲ್ಲಿ ಅವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ. ರೆಡ್ಡಿ ಉಫ್ ಎಂದು ಊದಿದ ಮಾತ್ರಕ್ಕೆ ಮುಸ್ಲಿಮರು ಹಾರಿಹೋಗುವುದಿಲ್ಲ. ಮೊದಲು ರೆಡ್ಡಿ ನನ್ನನ್ನು ಊದಿ ತೋರಿಸಲಿ ಎಂದು ಜಮೀರ್ ಸವಾಲು ಹಾಕಿದರು.
ಮೊದಲು ಹೇಳಿಕೆ ಕೊಟ್ಟು ನಂತರ ಆ ರೀತಿ ಹೇಳಿಕೆ ನೀಡಿಲ್ಲ ಎನ್ನುವ ಸೋಮಶೇಖರ್ ಗೆ ಮಾನ ಮರ್ಯಾದೆ ಇಲ್ಲವೇ ಇಲ್ಲ. ಶಾಂತಿಯುತವಾಗಿ ಮುಸಲ್ಮಾನ ಬಾಂಧವರು ಕಾಯಿದೆಯನ್ನು ವಿರೋಧಿಸಿದ್ದೇವೆ. ನಾವು ಕೈಗೆ ಖಡ್ಗ ತೆಗೆದುಕೊಳ್ಳುತ್ತೇವೆ ಎನ್ನಲಿಲ್ಲ. ಆದರೆ ಸೋಮಶೇಖರ್ ರೆಡ್ಡಿ ಹಿಂಸೆಯನ್ನು ಪ್ರಚೋದಿಸಿದ್ದಾರೆ. ಆಂಧ್ರದಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿರುವ ಸೋಮಶೇಖರ್ ಪಡೆದಿರುವುದು ಕೇವಲ 70 ಸಾವಿರ ಮತ. ಅವರ ಕ್ಷೇತ್ರದಲ್ಲೂ ಎರಡು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಎಲ್ಲರೂ ಅವರ ಪರವಾಗಿ ಇಲ್ಲ ಎಂಬುದು ಇದರಿಂದಲೇ ತಿಳಿಯುತ್ತದೆ. ಕೂಡಲೇ ಪೊಲೀಸರು ಅವರನ್ನು ಬಂಧಿಸಲೇಬೇಕು ಎಂದು ಆಗ್ರಹಿಸಿದರು.ದೇಶದಲ್ಲಿ ಹಿಂದೂ ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಇದ್ದಾರೆ. ನಮ್ಮಸಾಮರಸ್ಯಕ್ಕೆ ರೆಡ್ಡಿ ಅಂತವರು ಬೆಂಕಿ ಇಡುತ್ತಿದ್ದಾರೆ. ಹೇಡಿಯಾಗಿರಲು ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಬಳ್ಳಾರಿಗೆ ಬರುತ್ತೇನೆ ಏನು ಮಾಡುತ್ತೀಯೋ ಮಾಡು ಎಂದು ಎದೆತಟ್ಟಿ ಸವಾಲು ಹಾಕಿದರು.