ಈ ದಿನ ಅನಾರೋಗ್ಯದ ನಡುವೆಯೂ ಯುವರಾಜ್ ಮ್ಯಾಚ್ ವಿನ್ನಿಂಗ್ ಆಟ

ನವದೆಹಲಿ, ಮಾ 20, 2011 ಮಾರ್ಚ್ 20 ಈ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮರೆಯಲಾಗದ ದಿನ. ಹೌದು. ಈ ದಿನ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅನಾರೋಗ್ಯದ ನಡುವೆಯೂ 2011ರ ವಿಶ್ವಕಪ್  ಟೂರ್ನಿಯ ಗುಂಪು ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಆಟ ತೋರಿದರು. ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ 51 ರನ್ ಗಳಿಸುವಷ್ಟರಲ್ಲಿಯೇ ಟೀಮ್ ಇಂಡಿಯಾ 51 ರನ್ ಗಳಿಸವರಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಜತೆಗೂಡಿ ತಂಡವನ್ನು ಆಧರಿಸಿದರು.ವಿಂಡೀಸ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೂರನೇ ವಿಕೆಟ್ ಗೆ 122 ರನ್ ಗಳ ಅಮೂಲ್ಯ ಜತೆಯಾಟ ನಿರ್ವಹಿಸಿ ಬೇರ್ಪಟ್ಟಿತು. 59 ರನ್ ಗಳಿಸಿ ಕೊಹ್ಲಿ ವಿಕೆಟ್ ಒಪ್ಪಿಸಿದರು. ಆದರೆ ಯುವರಾಜ್ ಮಾತ್ರ ತಮ್ಮ ಆಟ ಮುಂದುವರಿಸಿದರು. ಅವರ ಈ  ಇನಿಂಗ್ಸ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸದಾ ಸ್ಮರಣೀಯ. ಏಕೆಂದರೆ ಆಟವಾಡುವಾಗಲೇ ಯುವರಾಜ್ ಹಲವು ರೀತಿಯ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರು. ಅದರಲ್ಲೂ ಹಲವು ಬಾರಿ ಪಿಚ್ ನಲ್ಲಿಯೇ  ವಾಂತಿ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಆದಾಗ್ಯೂ ಯುವರಾಜ್ ಸಿಂಗ್ 10 ಬೌಂಡರಿ, ಎರಡು ಸಿಕ್ಸರ್ ಒಳಗೊಂಡ 113 ರನ್ ಗಳಿಸಿದರು.ಹೀಗಾಗಿ ಭಾರತ ತಂಡ ಅಂತಿಮವಾಗಿ 268 ರನ್ ಗಳಿಸಿತು. ಬ್ಯಾಟಿಂಗ್ ಅಲ್ಲದೆ ಬೌಲಿಂಗ್ ನಲ್ಲಿಯೂ ಮಿಂಚಿದ ಎಡಗೈ ಆಲ್ ರೌಂಡರ್ ಯುವರಾಜ್, ಡೇವನ್ ಥಾಮಸ್ ಮತ್ತು ಆ್ಯಂಡ್ರೆ ರಸೆಲ್   ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಭಾರತ ತಂಡ 80 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.ಟೂರ್ನಿಯಲ್ಲಿ 362 ರನ್ ಹಾಗೂ 15 ವಿಕೆಟ್ ಉರುಳಿಸಿದ್ದ ಯುವರಾಜ್ 2011ರ ವಿಶ್ವ ಕಪ್ ಟೂರ್ನಿಯಲ್ಲಿ ಟೂರ್ನಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.