ಯುವ ಸಮುದಾಯ ವಿಜ್ಞಾನ ವೈಚಾರಿಕತೆ ಅಳವಡಿಸಿಕೊಳ್ಳಬೇಕು- ನಾಡಗೇರ
ರಾಣೆಬೆನ್ನೂರು 04 : ಜ್ಞಾನ ವಿಜ್ಞಾನ ತಂತ್ರಜ್ಞಾನ ಇವುಗಳು ದೇಶದ ಭವಿಷ್ಯದ ಯುವ ಸಮುದಾಯಕ್ಕೆ ಮಾದರಿಯಾಗಿದೆ, ವೈಜ್ಞಾನಿಕತೆ ಮತ್ತು ವೈಚಾರಿಕತೆ ಅಳವಡಿಸಿಕೊಂಡು ಸಾಗಬೇಕಾದ ಇಂದಿನ ಅಗತ್ಯವಿದೆ ಎಂದು ಪತ್ರಕರ್ತ ಗುರುರಾಜ್ ನಾಡಗೇರ ಹೇಳಿದರು.ಅವರು ಇಲ್ಲಿನ ಬಿ.ಎ. ಜೆ.ಎಸ್. ಎಸ್ ಬಿ.ಡಿ ಕಾಲೇಜಿನಲ್ಲಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಪ್ರತಿ ಹಂತದಲ್ಲಿಯೂ ವೈಜ್ಞಾನಿಕ ಮನೋಭಾವನೆ ಮತ್ತು ಅರಿವು ಜಾಗೃತಿ ಮೂಡಿಸುವ ಕೆಲಸ ನಡೆದಾಗ ಮಾತ್ರ ಭಾರತ ವಿಶ್ವದಲ್ಲಿ ಮತ್ತಷ್ಟು ಗುರುತಿಸಿಕೊಳ್ಳಲು ಸಾಧ್ಯವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ, ಎಂ. ಎಂ. ಮೃತ್ಯುಂಜಯ ಅವರು, ಇಂದು ಭಾರತೀಯರ ವೈಚಾರಿಕತೆಯ ದೃಷ್ಟಿಕೋನವು ವಿಶ್ವ ವ್ಯಾಪ್ತಿಯಾಗಿ ಬೆಳೆಯುತ್ತಿರುವುದು ದೇಶದ ಸಮಗ್ರ ಬೆಳವಣಿಗೆಯ, ಮತ್ತು ಅಭಿವೃದ್ಧಿ ಭಾರತದ ಸಂಕೇತವಾಗಿದೆ ಎಂದರು. ಜ್ಞಾನ, ವಿಜ್ಞಾನ, ತಂತ್ರಜ್ಞಾನ ವಿಷಯ ಕುರಿತು, ಶಿಕ್ಷಣ ತಜ್ಞ ಪ್ರೊ,ಹೆಚ್. ಎ.ಭಿಕ್ಷಾವರ್ತಿಮಠ ಅವರು ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ, ಹೆಚ್. ಐ. ಬ್ಯಾಡಗಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ವಿಜ್ಞಾನ ದಿನಾಚರಣೆ ನಿಮಿತ್ತ, ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ ಮೂಢನಂಬಿಕೆ ಮತ್ತು ವೈಜ್ಞಾನಿಕ ಚಿಂತನೆ ಕುರಿತು ನೂರಾರು ವಿದ್ಯಾರ್ಥಿಗಳು ಅಣುಕು ಪ್ರದರ್ಶನ ನಡೆಸಿ ಗಮನ ಸೆಳೆದರು.
ಪ್ರಶಿಕ್ಷಣಾರ್ಥಿಗಳಾದ ಭಾಗ್ಯ ದೇವಗಿರಿಮಠ ಪ್ರಾರ್ಥಿಸಿದರು. ಅನಿತಾ ಲಮಾಣಿ ಸ್ವಾಗತಿಸಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ, ಪರಶುರಾಮ ಪವಾರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಿ ಹಣಚಿಕ್ಕಿ ನಿರೂಪಿಸಿ, ಪವನ ವಂದಿಸಿದರು.