ಯುವನಿಧಿ ಮೂಲಕ ಪದವೀಧರ ವಿದ್ಯಾರ್ಥಿಗಳ ಭವಿಷ್ಯಕ್ಕೆ ನವಚೈತನ್ಯ : ಗೊಂಡಬಾಳ
ಕೊಪ್ಪಳ 26: ರಾಜ್ಯ ಸರಕಾರ ಐದು ಗ್ಯಾರಂಟಿಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಅಸಹಾಯಕ ಬದುಕಿಗೆ ಆಸರೆ ನೀಡಿದ್ದಾರೆ, ಅದನ್ನು ಕೆಲವರು ಬಿಟ್ಟಿ ಎಂದು ಅಪಭ್ರಂಶಗೊಳಿಸುತ್ತಿರುವದು ನೋವಿನ ಸಂಗತಿ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು. ಅವರು ನಗರದ ಸರಕಾರಿ ಬಾಲಿಕೆಯರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವನಿಧಿ ಮೂಲಕ ಡಿಪ್ಲಮೋ ಪದವೀಧರರಿಗೆ 1500 ಮತ್ತು ಪದವೀಧರರಿಗೆ 3000 ರೂಪಾಯಿ ನಿರುದ್ಯೋಗ ಭತ್ಯೆಯನ್ನು ಸುಮಾರು 18 ತಿಂಗಳು ನೀಡುವ ಯೋಜನೆಯಾಗಿದ್ದು, ಅದರ ಮೂಲಕ ಪದವಿ ಮುಗಿಸಿದ ನಿರುದ್ಯೋಗಿಗಳಿಗೆ ಮುಂದಿನ ಹಂತದಲ್ಲಿ ಆಗುವ ತೊಂದರೆ ನಿವಾರಿಸುವ ಯೋಜನೆ ಆಗಿದೆ, ಇದರ ಅನುಕೂಲ ಪಡೆದು ಬದುಕು ಕಟ್ಟಿಕೊಳ್ಳಬಹುದು. ಒಬ್ಬ ಅದವೀಧರ 54 ಸಾವಿರ ರೂಪಾಯಿ ಮತ್ತು ಒಬ್ಬ ಡಿಪ್ಲಮೋ ಪದವಿ ಪಡೆದವರು 27 ಸಾವಿರ ಭತ್ಯೆಯನ್ನು ಪಡೆಯಲು ಅರ್ಹರಾಗಿದ್ದು ಇದೊಂದು ಮಹತ್ವದ ಯೋಜನೆಯಾಗಿದೆ. ಬಿಟ್ಟಿ ಭಗ್ಯ ಎಂದವರೇ ಬೇರೆ ರಾಜ್ಯಗಳಲ್ಲಿ ಇವುಗಳನ್ನು ನಕಲು ಮಾಡಿ ಕೊಡುತ್ತಿದ್ದಾರೆ. ಬಡವರಿಗೆ, ಆರ್ಥಿಕವಾಗಿ ಸಬಲರಲ್ಲದವರಿಗೆ ಕೊಡುವ ಸರಕಾರದ ಸಹಾಯ ಧನವನ್ನು ಹಂಗಿಸುವದು ಭಾರತೀಯ ಮೂಳಭೂತ ಹಕ್ಕುಗಳಿಗೆ ತೊಂದರೆಕೊಟ್ಟಂತಾಗುತ್ತದೆ, ಇದು ಸಹ ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಎಂದರು. ಪ್ರತಿಯೊಬ್ಬರಿಗೂ ಜೀವಿಸುವ, ಉತ್ತಮವಾಗಿ ಬದುಕುವ ಹಕ್ಕನ್ನು ಬಾಬಾ ಸಾಹೇಬರು ಕೊಟ್ಟಿದ್ದು ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದರು. ಉದ್ಯೋಗ ವಿನಿಮಯ ಕೇಂದ್ರದ ಜೆಬಿಟಿ ಹನುಮೇಶ ಮಾತನಾಡಿ, ಪ್ರತಿ ಗ್ರಾಮದ ಅಥವಾ ನಗರದ ಗ್ರಾಮ್ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ ಅಥವಾ ಸರಕಾರದ ಅನುಮತಿ ಪಡೆದ ಆನ್ ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಇದಕ್ಕೆ ಅರ್ಹರಾದವರು ನೇರವಾಗಿ ಉದ್ಯೋಗ ವಿನಿಮಯ ಕೇಂದ್ರಕ್ಕೆ ಬಂದರೂ ಸಹ ಉಚಿತವಾಗಿ ಅರ್ಜಿ ಹಾಕಿಕೊಡಲಾಗುವದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ. ಲಮಾಣಿ ವಹಸಿದ್ದರು. ಗ್ಯಾರಂಟಿ ಯೋಜನೆ ಪ್ರಾಧಿಕಾರ ತಾಲೂಕ ಸದಸ್ಯ ಮಾನ್ವಿ ಪಾಶಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪ್ ಕುಮಾರ ಯು., ಕಾಲೇಜಿನ ಐ ಕ್ಯೂ ಏ ಸಿ ಸಂಯೋಜಕ ಡಾ. ಅಶೋಕ್ ಕುಮಾರ, ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಬಿ., ಉದ್ಯೋಗ ವಿನಿಮಯ ಕೇಂದ್ರದ ಆಪ್ತ ಸಮಾಲೋಚಕಿ ದುರ್ಗಾ ಶ್ಯಾನಬೋಗರ, ನೂರಾರು ವಿದ್ಯಾರ್ಥಿಗಳು ಇದ್ದರು.