ಯುವಕರು ಸೇವಾ ಮನೋಭಾವನೆ ಬೆಳಸಿಕೊಳ್ಳಬೇಕು: ನೀಲಗುಂದ ಮಠದ ಶ್ರೀ ಚನ್ನಬಸವ ಶಿವಯೋಗಿ ಶ್ರೀಗಳು

ಲೋಕದರ್ಶನ ವರದಿ


ಶಿರಹಟ್ಟಿ 24:  ಹಳ್ಳಿಯ ಯುವಕರು ಸುಸಂಸ್ಕೃತರಾಗಬೇಕು, ತಮ್ಮ ಜ್ಞಾನದ ದೀವಿಗೆಯ ಮೂಲಕ ಸರಕಾರದ ಸಹಾಯ ಪಡೆದು, ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಸಿದ್ಧರಾಗಬೇಕು ಎಂದು ನೀಲಗುಂದ ಮಠದ ಶ್ರೀ ಚನ್ನಬಸವ ಶಿವಯೋಗಿ ಶ್ರೀಗಳು ಹೇಳಿದರು.

ತಾಲೂಕಿನ ಸಾಸರವಾಡ ಗ್ರಾಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಲಿಂ ಮಲ್ಲನಗೌಡ ಪಾಟೀಲ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣಾರ್ಥ ಸಮಾಜ ಮುಖಿ ಟ್ರಸ್ಟ್ ಉದ್ಘಾಟನೆ ಮಾಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸಬೇಕು. ಅಲ್ಲದೇ ಹಳ್ಳಿಗಳಲ್ಲಿ ಸಾಕಷ್ಟು ಸಮಸ್ಯೆಗಳು ತೆಲೆದೂರಿರುತ್ತವೆ. ಆದ್ದರಿಂದ ಯುವಕರು ಜಾಗೃತರಾಗಿ, ಸಂಘ, ಸಂಸ್ಥೆ ಹಾಗೂ ಟ್ರಸ್ಟ್ಗಳು ಮೂಲಕ ಜನಸೇವೆಯ ಮನೋಭಾವನೆ ಬೆಳಸಿಕೊಳ್ಳಬೇಕು. ಅಂದಾಗ ಮಾತ್ರ ಹಳ್ಳಿ ಜನರ ಜೀವನ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.

ನಂತರ ಮನಿಹಳ್ಳಿ ಪುರವರ್ಗ ಮಠದ ಮಳೆಯೋಗಿಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ. ಪ್ರಸ್ತುತ ದಿನಗಳಲ್ಲಿ ಯುವಕರು ಗುಟುಕಾ, ತಂಬಾಕು, ಸಿಗರೇಟ್, ಮದ್ಯಪಾನಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮತ್ತು ಮಕ್ಕಳು ಸಹ ಟಿ.ವಿ. ಕಂಪ್ಯೂಟರ್, ಗೇಮ್, ಮೊಬೈಲಗಳ ದಾಸರಾಗಿ ಅಮೂಲ್ಯ ಸಮಯ ವ್ಯಥ್ರ್ಯಮಾಡುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡದೆ, ಪುಸ್ತಕಗಳನ್ನು ಕೊಟ್ಟು, ಸುಸಂಸ್ಕೃತರನ್ನಾಗಿ ಮಾಡಬೇಕು. ಅಂದಾಗ ಮಾತ್ರ ಮಕ್ಕಳು ಚನ್ನಾಗಿ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತಾರೆ. 

 ಜಿಪಂ ಸದಸ್ಯ ಈಶ್ವರ ಹುಲ್ಲಲ್ಲಿ, ಗ್ರಾಪಂ ಅಧ್ಯಕ್ಷೆ ಸವಿತಾ ಕಲ್ಲನಗೌಡ್ರ, ನೀಲನಗೌಡ ಪಾಟೀಲ, ಎಸ್.ಎಸ್. ಪಾಟೀಲ, ಬಸವಲಿಂಗ ಶಾಸ್ತ್ರಿ, ಚನ್ನಬಸವನಗೌಡ ಪಾಟೀಲ, ಮೃತ್ಯೂಜಯ್ಯ ಸೂರಣಗಿಮಠ, ಅಡಿವೆಪ್ಪ ತಳ್ಳಳ್ಳಿ, ಬಸವರಾಜ ಹಾಲಗಿ, ಶಂಕ್ರಪ್ಪ ಕಮ್ಮಾರ, ಗುಡ್ಡಪ್ಪ ಬಾರಿಕೇರ, ಶರಣಪ್ಪ ಯಲಿಗಾರ, ಚನ್ನವೀರಯ್ಯ ಮುದಗಲ್ಲಮಠ, ಎಂ.ಎಸ್. ರಾಮೇಗೌಡ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಎಲ್. ಮಹೇಶ, ಮಲ್ಲೇಶ ಕರಿಗಾರ, ಮಂಜುಳಾ ಕೊಪ್ಪದ ಶಿವಕುಮಾರ ಗಡಗಿ, ರುದ್ರಗೌಡ ತಮ್ಮನ್ನಗೌಡ, ಎಸ್ ಹನುಮಂಪ್ಪ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.