ಲೋಕದರ್ಶನ ವರದಿ
ಕೊಪ್ಪಳ: ಪುರಾಣ ಪ್ರವಚನ ಕೇಳುವುದರಿಂದ ನ್ಯಾಯ, ನೀತಿ, ಧರ್ಮದ ತಿರುಳು ಲಭಿಸುತ್ತದೆ. ಅಲ್ಲದೇ ಭಕ್ತಿ-ಭಾವ ಮೂಡಿ ಯುವ ಪೀಳಿಗೆ ಸುಂಸಂಸ್ಕೃತರಾಗುತ್ತಾರೆಂದು ಕೆ.ಎಂ.ಎಫ್. ನಿರ್ದೇಶಕ ವೆಂಕನಗೌಡ ಹಿರೇಗೌಡ್ರ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ತಾಯಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ತಾಯಮ್ಮದೇವಿ ಭಜನಾ ಯುವಕ ಸಂಘದವರು ಏರ್ಪಡಿಸಿದ್ದ ದೇವಿ ಮಹಾತ್ಮೆ ಪುರಾಣ ಮಂಗಲ ಹಾಗೂ ಸಂಗೀತ ಸೌರಭ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.
ನಂತರ ಉಪನ್ಯಾಸಕ ಶಂಕ್ರಯ್ಯ ಅಬ್ಬಿಗೇರಿಮಠ ಮಾತನಾಡಿ ಶರನ್ನವರಾತ್ರಿಯಲ್ಲಿ ದೇವಿ ಮಹಾತ್ಮೆ ಚರಿತ್ರೆ ಓದುವುದರಿಂದ ಮತ್ತು ಆಲಿಸುವುದರಿಂದ ಆರೋಗ್ಯ ಸಂಪತ್ತು ಐಶ್ವರ್ಯ ಸಂಪತ್ತು ಪ್ರಾಪ್ತಿಯಾಗುತ್ತದೆ. ಜಾತಿ, ಮತ, ಪಂಥ ಯಾವುದನ್ನು ಲೆಕ್ಕಿಸದೇ ಗ್ರಾಮದ ಎಲ್ಲರೂ ಒಂದೆಡೆ ಸೇರುವುದೇ ಒಂದು ಸಾಮರಸ್ಯಭಾವ ಎನ್ನುತ್ತಾ ಆಸ್ತಿ ಅಂತಸ್ತು ಗಳಿಸಬಹುದು ಆದರೇ ಬಾಂಧವ್ಯ ಎನ್ನುವುದು ಇಂತಹ ಕಾರ್ಯಕ್ರಮಗಳ ಮೂಲಕ ನೆರವೇರುತ್ತದೆ ಎಂದರು.
ನಂತರ ಷ.ಭ್ರ 108 ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಅರಿವಿನ ಮೂಲಕ ಬಂದಂತಹ ಸಂಪತ್ತು ನಮಗಾಗಿಯೇ ಜಾಗೃತವಾಗಿರುತ್ತದೆ. ಆದ್ದರಿಂದ ಶಾಂತಿ ನೆಮ್ಮದಿಯನ್ನು ಕಾಣಬೇಕಾದರೆ ದೇವಿಯ ಆರಾಧನೆ ಮಾಡಬೇಕು ಎನ್ನುತ್ತಾ ತಾಯಮ್ಮ ದೇವಿ ಭಜನಾ ಸಂಘದವರು ದೇವಿ ಪುರಾಣ, ಸಾಂಸ್ಕೃತಿಕ ಕಾರ್ಯಕ್ರಮ ಜಾನಪದ ಸಂಗೀತ, ಕ್ರೀಡೆಗಳನ್ನು ಆಗಾಗ ಆಯೋಜಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ಸ್ತುತ್ಯಾರ್ಹ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಕೊಟ್ರಯ್ಯ ಅಬ್ಬಿಗೇರಿಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ ಹಿರೇಮಠ, ಗ್ರಾಮದ ಹಿರಿಯರಾದ ಶಂಕ್ರಗೌಡ ಹಿರೇಗೌಡ್ರ, ಜಿ.ಎನ್.ಕುರಡೇಕರ, ಬಸವರಾಜ ಹುಬ್ಬಳ್ಳಿ, ಶಂಕರಗೌಡ ನಾಗನಗೌಡ್ರ, ಯಂಕಪ್ಪ ಕೊರಗಲ್, ಗ್ರಾ.ಪಂ.ಸದಸ್ಯ ನಾಯಕಪ್ಪ ತಳವಾರ, ಗ್ರಾ.ಪಂ.ಉಪಾಧ್ಯಕ್ಷ ನಾಗರಾಜ ಹುರಕಡ್ಲಿ, ಗ್ರಾ.ಪಂ.ಕಾರ್ಯದರ್ಶಿ ಶೇಖಣ್ಣ ಚಿಂಚಲಿ, ಶಿವಯ್ಯ ಸಾಲಿಮಠ, ಪ್ರಾಥಮಿಕ ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷ ಯಂಕಪ್ಪ ಚಿಟಗಿ, ಮಲ್ಲಣ್ಣ ಗುಗ್ರಿ ಇತರರು ವೇದಿಕೆಯ ಮೇಲೆ ಇದ್ದರು. ಕಲಾನಿಕೇತನ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಸೌರಭ ಕಾರ್ಯಕ್ರಮ ವಿಂಜೃಭಿಸಿತು. 9ದಿನಗಳ ಕಾಲ ಶಿವಯ್ಯ ಗಂಧದಮಠ ದೇವಿ ಮಹಾತ್ಮೆ ಪುರಾಣ ಪಠಣ ನೆರವೇರಿಸಿದರು. ಶ್ಯಾಮಣ್ಣ ಮಡಿವಾಳ ಸಂಗೀತ ನೀಡಿದರು. ಅಮರೇಶ ಕೊಪ್ಪರದ ತಬಲಾಸಾಥ ನೀಡಿದರು.
9ದಿನಗಳ ಕಾಲ ಪ್ರಸಾದ ತಯಾರಿಸಿದ ಕೊಟ್ರಯ್ಯ ಅಬ್ಬಿಗೇರಿಮಠ, ಗವಿಸಿದ್ದಪ್ಪ ಅರಕೇರಿ ಮತ್ತು ಪುರಾಣಿಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆ ನೂರಾರು ಮಹಿಳೆಯರಿಂದ ಕುಂಭಮೇಳ ನಡೆಸಿ ತಾಯಮ್ಮ ದೇವಿಗೆ ಕುಂಬಾಭಿಷೇಕ, ಸಹರ್ಸ ಬಿಲ್ವಾರ್ಚನೆ ಮಾಡಿ ಮಹಾ ಮಂಗಳಾರತಿ ಜರುಗಿತು. ನಂತರ ಭಜನಾ ತಂಡದವರಿಂದ ಗ್ರಾಮದ ದೇವರುಗಳಿಗೆ ಬನ್ನಿ, ಬಿಲ್ವ ಅರ್ಪಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಜಗದಯ್ಯ ಸಾಲಿಮಠ ನಿರ್ವಹಿಸಿದರು. ಕಾರ್ಯದರ್ಶಿ ಫಕಿರೇಶ ಕಮ್ಮಾರ ಸ್ವಾಗಿತಿಸಿ ವಂದಿಸಿದರು.