ಧಾರವಾಡ 29: ಕಳೆದ ಹಲವಾರು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ತುಂಬಾ ವೇಗವಾಗಿ ಬೆಳೆಯುತ್ತಿವೆ. ಮಾನವ ಇಂದು ಕ್ಲೋನಿಂಗ್ ತಂತ್ರಜ್ಞಾನ, ಜೈವಿಕತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡಿದ್ದು, ತಿಂಗಳಿನಿಂದ ಮಂಗಳನ ಮೇಲೆ ದಾಪುಗಾಲಿಡುತ್ತಿದ್ದಾನೆ. ಆದರೆ ಪ್ರಕೃತಿಯಲ್ಲಿ ಇರುವ ತುಂಬಾ ಮಹತ್ವದ ಜೈವಿಕ ಸರಪಳಿ ತಿಳಿದುಕೊಂಡು ನೈಸರ್ಗಿಕ ಸಂಪನ್ಮೂಲಗಳನ್ನು ಸಮಯೋಚಿತವಾಗಿ ಬಳಸಿಕೊಂಡು ತಾನೂ ಬದುಕಿ ಇತರ ಜೀವಿಗಳನ್ನೂ ಬದುಕಿಸಲು ಬಿಡುವಂತೆ ಬಾಳಬೇಕಾಗಿದೆ ಪ್ರಕೃತಿಯಲ್ಲಿ ಸಾಮರಸ್ಯವಿಲ್ಲದೇ ಹೋದರೆ ಕಷ್ಟ. ಎಷ್ಟೇ ಅಭಿವೃದ್ಧಿ ಹೊಂದಿದರೂ ಕೂಡ ನಿಸರ್ಗವನ್ನು ಅರ್ಥೈಸಿಕೊಂಡಾಗ ಮಾತ್ರ ಮನುಷ್ಯ ಖುಷಿಯಿಂದಿರಲು ಸಾಧ್ಯ ಎಂದು ಪರಿಸರವಾದಿ ಪ್ರಕಾಶ ಗೌಡರ ಅಭಿಪ್ರಾಯಪಟ್ಟರು.
ರಾಜ್ಯ ವಿಜ್ಞಾನ ಪರಿಷತ್ತು ಧಾರವಾಡ, ಸಾಶಿಇ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಓರಿಯಂಟಲ್ ಪಬ್ಲಿಕ್ ಸ್ಕೂಲನಲ್ಲಿ ಆಯೋಜಿಸಿದ ಧಾರವಾಡ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಾಲವಿಜ್ಞಾನಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರು ಮಾತನಾಡಿ ವಿಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅಡುಗೆ ಮನೆಯಿಂದ ಆಂತರಿಕ್ಷದವರೆಗೂ ವಿಜ್ಞಾನ ಪಸರಿಸಿದೆ. ಕೃಷಿ, ಕೈಗಾರಿಕೆ, ವೈದ್ಯಕೀಯ, ವಾಹನ ಸಂಪರ್ಕ-ಸಂವಹನ ಇತ್ಯಾದಿಗಳಲ್ಲಿ ವಿಜ್ಞಾನ ಕಾಣುತ್ತೇವೆ. ಆದರೆ ಇಂದಿಗೂ ಕೂಡ ಕನ್ನಡ ಭಾಷೆಯಲ್ಲಿ ವಿಜ್ಞಾನ ಲೇಖಕರ ಸಂಖ್ಯೆ ತುಂಬಾ ಕಡಿಮೆಯಿರುವುದು ವಿಷಾದನೀಯ. ಇದರಿಂದ ಸಾಮಾನ್ಯಜನರಿಗೆ ವಿಜ್ಞಾನದ ಅರಿವು ಮೂಡುವುದಿಲ್ಲ ಬದಲಾಗಿ ಮೂಢನಂಬಿಕೆಗಳು ಹಾಗೆ ಉಳಿಯುತ್ತವೆ. ಜನರು ಕೂಡ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಸಂಯೋಜಕ ಡಾ. ಲಿಂಗರಾಜ ರಾಮಾಪೂರ ಮಾತನಾಡಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಂದು 52 ವಿವಿಧ ಯೋಜನೆಗಳ ಪ್ರಬಂಧಗಳನ್ನು ಮಂಡಿಸಿದ್ದು ತುಂಬಾ ಉತ್ತಮ ಸಾಮಾಜಿಕ ವೈಜ್ಞಾನಿಕ ಮೂಲ್ಯಗಳನ್ನು ಹೊಂದಿವೆ. ಯುವ ವಿಜ್ಞಾನಿಗಳಲ್ಲಿ ನವಚೈತನ್ಯ ದೂರಾಲೋಚನೆ ಬೆಳೆಸುವಲ್ಲಿ ಇದೊಂದು ಪ್ರೌಢ ಹೆಜ್ಜೆ ಎಂದು ಹೇಳಿದರು.
ಓರಿಯಂಟಲ್ ಶಾಲೆಯ ಮುಖ್ಯೋಪಾಧ್ಯಾಯನಿ ರಶ್ಮಿ ಬಾಡಗಿ ಅವರು ಮಾತನಾಡಿ ಸ್ವಚ್ಛ, ಸ್ವಸ್ಥವಾದ ಪರಿಸರ ನಮ್ಮದಾಗಬೇಕು. ಅದಕ್ಕೆ ಮಾಲಿನ್ಯತೆ ತಡೆಗಟ್ಟಿ ಸಾಕಷ್ಟು ಗಿಡಮರಗಳನ್ನು ನೆಡುವುದರ ಮೂಲಕ ನಾವೆಲ್ಲ ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರಾವಿಪ ಜಿಲ್ಲಾಧ್ಯಕ್ಷ ಸಂಜೀವಕುಮಾರ ಭೂಶೆಟ್ಟಿ ಮಾತನಾಡಿ ಬಿತ್ತಿದಂತೆ ಬೆಳೆ ಎನ್ನುವಂತೆ ಇಂದು ಮಕ್ಕಳಲ್ಲಿ ಕುತೂಹಲಕರ ಆಸಕ್ತಿದಾಯಕ, ಕ್ರೀಯಾಶೀಲ ಮನಸ್ಸು ಬೆಳೆಸಬೇಕು. ಇದು ಅವರಲ್ಲಿ ತಾಕರ್ಿಕವಾಗಿ ಆಲೋಚಿಸುವಂತೆ ಮಾಡುತ್ತದೆ. ಪ್ರಶ್ನಿಸುವ ಎದೆಗಾರಿಕೆ ಬೆಳೆಸುತ್ತದೆ. ಸಮಾಜದಲ್ಲಿರುವ ಸಮಸ್ಯೆಗಳೇ ಇನ್ನು ಮುಂದೆ ನಮ್ಮ ಸಂಶೋಧನೆಗಳ ಮೂಲವಾಗುತ್ತೆ. ಗಾಳಿ, ಬೆಳಕು, ಆಹಾರ, ನೀರು ಎಲ್ಲವೂ ಸುಸ್ಥಿರತೆಯತ್ತ ಸಾಗಬೇಕು. ವಿಜ್ಞಾನವನ್ನು ಅಧ್ಯಯನ ಮಾಡಿದರೆ ಸಾಲದು, ಅನುಭವಿಸಬೇಕು. ಪ್ರ್ರಾಯೋಗಿಕವಾಗಿ ಅರ್ಥೈಸಿಕೊಳ್ಳಬೇಕು. ಯುವ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದರು.
ಕರಾವಿಪ ಹಿರಿಯ ಸದಸ್ಯರಾದ ಹವ್ಯಾಸಿ ಪತ್ರಕರ್ತ ಉದಯಚಂದ್ರ ದಿಂಡವಾರ ಸಂಸ್ಥೆಯ ಚೇರಮನ್ ರಾಜೇಶ್ವರಿ ಕೃಷ್ಣ, ಡಾ.ಶಿವಾಜಿ ಚೌಹಾನ, ಪ್ರೊ.ಕೆ.ಎಸ್.ಕೌಜಲಗಿ, ಗೀತಾ ಕಟ್ಟಿ ಉಪಸ್ಥಿತರಿದ್ದರು. ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕರಾವಿಪ ಶೈಕ್ಷಣಿಕ ಸಂಯೋಜಕ ಸಿದ್ದಪ್ಪಾ ಭಾವಿಕಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ಚೌಹಾನ ನಿರ್ವಹಿಸಿದರು. ಭಾರತಿ ನೆನಕ್ಕಿ ವಂದಿಸಿದರು.
ಧಾರವಾಡ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಂಶೋಧನಾ ಪ್ರಬಂಧಗಳು
ಗ್ರಾಮೀಣ ಕಿರಿಯ ವಿಭಾಗ
ಧಾರವಾಡ ತಾಲೂಕಿನ ಬೋಗೂರ ಸಹಿಪ್ರಾ ಶಾಲೆಯ ಶಿವಶಂಕರಯ್ಯಾ ಹಿರೇಮಠ, ಕುಂದಗೋಳ ಗ್ರಾಮೀಣ ಹಿರಿಯ ವಿಭಾಗ ಬೆಟದೂರ -ಸಹಿಪ್ರಾಕಹೆ ಶಾಲೆಯ ದೇವಕ್ಕಾ ಹೂಗಾರ, .ನವಲಗುಂದ ತಾಲೂಕಿನ ತಿರ್ಲಾ ಪೂರ ಸರಕಾರಿ ಪ್ರೌಢಶಾಲೆ ರಮೇಶ ಪೂಜಾರ, ಹುಬ್ಬಳ್ಳಿ ತಾಲೂಕಿನ ಕುಡರ್ಿಕೇರಿ -ಸರಕಾರಿ ಪ್ರೌಢಶಾಲೆಯ ಕವಿತಾ ಕಮಡೊಳ್ಳಿ, ಕುಸುಗಲ್ಲ -ಸರಕಾರಿ ಪ್ರೌಢಶಾಲೆಯ ಇಮ್ರಾನ ಹಲ್ಲಿಕೇರಿ
ನಗರ ಕಿರಿಯ ವಿಭಾಗ: ಹುಬ್ಬಳ್ಳಿ ಓರಿಯಂಟಲ್ ಪಬ್ಲಿಕ್ ಶಾಲೆಯ ಸನಾ ಅಕ್ಕಿ, ಸುಜ್ಞಾನ ಪಬ್ಲಿಕ್ ಶಾಲೆಯ ಆದಿತ್ಯ ಟಿ,
ನಗರ ಹಿರಿಯ ವಿಭಾಗ
ಹುಬ್ಬಳ್ಳಿ ಚೇತನ ಪಬ್ಲಿಕ್ ಶಾಲೆಯ ಶ್ರವಣ ಗುರುದತ್ತ, ಧಾರವಾಡ ಜೆ.ಎಸ.ಎಸ್.ಕನ್ನಡ ಶಾಲೆಯ ಪ್ರವೀಣ ದ್ಯಾವಣ್ಣವರ, ಧಾರವಾಡ ರಾಜೀವಗಾಂಧಿನಗರ ಸಹಿಪ್ರಾ ಶಾಲೆಯ ಸಾನಿಯಾ ತುಮ್ಮಿನಕಟ್ಟಿ,
ಆಯ್ಕೆಯಾದ 10 ತಂಡಗಳು ದಿ. 16, 17 ಹಾಗೂ 18ನೇ ಡಿಸೆಂಬರ 2019 ರಂದು ನಾಗಮಂಗಲದ ಆದಿಚುಂಚನಗಿರಿಯಲ್ಲಿ ನಡೆಯುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.